ಏಳು ಕೂಟದ ದೇವರುಗಳ ಉತ್ಸವ ಮೆರವಣಿಗೆ ಸಾಗುತ್ತಿದ್ದ ವೇಳೆ ಗ್ರಾಮದ ಹಿರಿಯ ಮಹಿಳೆಯರು ದೇವರನ್ನು ಸ್ಮರಿಸುವ ಜಾನಪದ ಮತ್ತು ಸೋಬಾನೆ ಪದಗಳನ್ನು ಹಾಡುತ್ತಿದ್ದರೆ, ಬಾಳೆಹಣ್ಣು ಬೆಲ್ಲದ ಆರತಿ ಹೊತ್ತಿದ್ದ ಸಹಸ್ರಾರು ಹೆಣ್ಣು ಮಕ್ಕಳು ಉತ್ಸವ ಮೆರವಣಿಗೆಯೊಂದಿಗೆ ಹೆಜ್ಜೆಹಾಕಿ ತಮ್ಮ ಭಕ್ತಿಭಾವ ಸಮರ್ಪಿಸಿದರು.
ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಬೀರೇಶ್ವರಪುರ ಗ್ರಾಮದಲ್ಲಿ ನಡೆಯುತ್ತಿರುವ ಶ್ರೀಕಾಟಣ್ಣಸ್ವಾಮಿ ಜಾತ್ರಾ ಮಹೋತ್ಸವದ ಪ್ರಯುಕ್ತ ಬುಧವಾರ ಬೆಳಿಗ್ಗೆ ಏಳು ಕೂಟದ ದೇವರುಗಳ ಉತ್ಸವವು ಕಾಟಣ್ಣಸ್ವಾಮಿ ದೇವಸ್ಥಾನದಿಂದ ಹೊರಟು ಗ್ರಾಮದ ಹೊರವಲಯದ ಬನ್ನಿ ಮಂಟಪದಲ್ಲಿ ಸೇರಿ ಹಣ್ಣು ತುಪ್ಪ ಸೇವೆಯೊಂದಿಗೆ ಶಿವಪೂಜೆ ನಡೆಸಿ ನೈವೇದ್ಯ ಅರ್ಪಿಸಲಾಯಿತು.ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ದೊರೆ ದೊಡ್ಡಯ್ಯಸ್ವಾಮಿ, ಕಾಟಣ್ಣಸ್ವಾಮಿ, ತುಪ್ಪದಮಡು ಗ್ರಾಮದ ದಳವಾಯಿ ದೊಡ್ಡಯ್ಯಸ್ವಾಮಿ, ಮುಂಗೊಂಡ ಮುಂದಲಾರತಿ ಚಿಕ್ಕಯ್ಯಸ್ವಾಮಿ, ದೊಡ್ಡಾಬಾಲ ಗ್ರಾಮದ ಮಂತ್ರಿ ಹುಚ್ಚಪ್ಪಸ್ವಾಮಿ, ಹೊಂಗನೂರಮ್ಮದೇವಿ, ಅರಕೆರೆ ಗ್ರಾಮದ ಗಾಳಿಗುಂಡ ಹುಚ್ಚಪ್ಪಸ್ವಾಮಿ ಹಾಗೂ ಜೋಡಿನೇರಲಕೆರೆ ಗ್ರಾಮದ ದೊಡ್ಡಲಕ್ಷ್ಮಿದೇವಿ ಮತ್ತು ಚಿಕ್ಕಲಕ್ಷ್ಮಿದೇವಿ ದೇವರುಗಳನ್ನು ನಂದಿ ಪಟದ ಕುಣಿತ, ತಮಟೆ ನಗಾರಿ ಮೇಳದೊಂದಿಗೆ ಎರಡು ಗಂಟೆಗೂ ಹೆಚ್ಚು ಕಾಲ ಉತ್ಸವ ನಡೆಸಲಾಯಿತು.
ಏಳು ಕೂಟದ ದೇವರುಗಳ ಉತ್ಸವ ಮೆರವಣಿಗೆ ಸಾಗುತ್ತಿದ್ದ ವೇಳೆ ಗ್ರಾಮದ ಹಿರಿಯ ಮಹಿಳೆಯರು ದೇವರನ್ನು ಸ್ಮರಿಸುವ ಜಾನಪದ ಮತ್ತು ಸೋಬಾನೆ ಪದಗಳನ್ನು ಹಾಡುತ್ತಿದ್ದರೆ, ಬಾಳೆಹಣ್ಣು ಬೆಲ್ಲದ ಆರತಿ ಹೊತ್ತಿದ್ದ ಸಹಸ್ರಾರು ಹೆಣ್ಣು ಮಕ್ಕಳು ಉತ್ಸವ ಮೆರವಣಿಗೆಯೊಂದಿಗೆ ಹೆಜ್ಜೆಹಾಕಿ ತಮ್ಮ ಭಕ್ತಿಭಾವ ಸಮರ್ಪಿಸಿದರು.ದೇವರುಗಳ ಉತ್ಸವ ಮುಗಿಯುತ್ತಿದ್ದಂತೆ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಹಾಗೂ ಶ್ರೀ ಚಿಕ್ಕದೇವಮ್ಮದೇವಿ ದೇವಸ್ಥಾನದ ಆವರಣದಲ್ಲಿ ನೂರಾರು ಮಂದಿ ಪುರುಷರು ಮತ್ತು ಹೆಣ್ಣು ಮಕ್ಕಳು ಪ್ರತ್ಯೇಕವಾಗಿ ಪರಸ್ಪರ ಬಣ್ಣ ಬಳಿದುಕೊಂಡು ಒಂದು ಗಂಟೆಗೂ ಹೆಚ್ಚು ಬಣ್ಣದ ನೀರಿನ ಓಕುಳಿ ಆಟವಾಡಿ ಸಂಭ್ರಮಿಸಿದರು.
ಜಾತ್ರಾ ಮಹೋತ್ಸವದಲ್ಲಿ ನೆರೆದಿದ್ದ ಸಹಸ್ರಾರು ಮಂದಿ ಭಕ್ತರು ಪಾಯಸ, ಬೂಂದಿ, ತರಣಿಕಾಳು ಕೂಟು ಅನ್ನಸಾಂಬರ್ ಸವಿದರು.ಜಾತ್ರೆ ಹಿನ್ನೆಲೆಯಲ್ಲಿ ಆದಿಚುಂಚನಗಿರಿ ಮಠದ ಚೈತನ್ಯನಾಥಸ್ವಾಮೀಜಿ ಅವರು ಬುಧವಾರ ಮಧ್ಯಾಹ್ನ ಗ್ರಾಮಕ್ಕೆ ಭೇಟಿ ಕೊಟ್ಟು ಶ್ರೀಕಾಟಣ್ಣಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.
ಗ್ರಾಮದ ಪ್ರಧಾನ ಅರ್ಚಕ ಶಿವರಾಜು, ಮುಖ್ಯಸ್ಥರಾದ ಶಿವಣ್ಣ, ಮಹೇಶ, ಮಂಜುನಾಥ್, ಪುಟ್ಟಪ್ಪ, ಸುರೇಶ, ರಮೇಶ್, ಮಹದೇವ, ಬಿ.ಎಲ್.ಶಿವಕುಮಾರ್, ಜವರಪ್ಪ ಸೇರಿದಂತೆ ಸಹಸ್ರಾರು ಮಂದಿ ಭಕ್ತರು ಇದ್ದರು.ಮೇ 7 ಗುರುವಾರ ಬೆಳಗ್ಗೆ ಶ್ರೀ ಕಾಟಣ್ಣಸ್ವಾಮಿ ದೇವಸ್ಥಾನದಲ್ಲಿ ವಿವಿಧ ಬಗೆಯ ಧಾರ್ಮಿಕ ಪೂಜಾ ವಿಧಿ ವಿಧಾನಗಳ ನಂತರ ಏಳು ಕೂಟದ ದೇವರುಗಳನ್ನು ಆಯಾ ಗ್ರಾಮಗಳಿಗೆ ಕರೆದೊಯ್ಯಲು ಕೂಟ ಹೊಡೆಯುವ ಕಾರ್ಯಕ್ರಮ ನಡೆಯಲಿದೆ. ನಂತರ ಎಲ್ಲಾ ದೇವರುಗಳನ್ನು ಗ್ರಾಮದಿಂದ ಅದ್ದೂರಿಯಾಗಿ ಬೀಳ್ಕೊಡಲಾಗುವುದು.