ಸಾರಾಂಶ
ನಾಗಮಂಗಲ : ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಹೆಸರಾಗಿರುವ ನಾಗಮಂಗಲ ತಾಲೂಕು ಜಾನಪದ ತವರಿದ್ದಂತೆ. ಜಿಲ್ಲೆಯಲ್ಲಿ ಅತ್ಯಂತ ಸಂಸ್ಕಾರ ಹೊಂದಿರುವ ತಾಲೂಕು ಎಂಬ ಬಿರುದು ಹೊಂದಿತ್ತು. ಕಾಲಬದಲಾದಂತೆ ಅದು ಕಡಿಮೆಯಾಗಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಭಿಪ್ರಾಯಪಟ್ಟರು.
ಪಟ್ಟಣದ ಶ್ರೀಆದಿಚುಂಚನಗಿರಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಬಿಜಿಎಸ್ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕೀಲಾರದ ಕ್ಷೀರಸಾಗರ ಮಿತ್ರಕೂಟದ ಸಹಯೋಗದಲ್ಲಿ ಆಯೋಜಿಸಿದ್ದ ಜವರನಹಳ್ಳಿ ಸಿದ್ದಪ್ಪ ರಚಿಸಿರುವ ಕೃತಿ ಬಿಡುಗಡೆ ಮತ್ತು ಸರ್ಕಾರದ ವಿವಿಧ ಅಕಾಡೆಮಿಗಳಿಗೆ ನೇಮಕವಾಗಿರುವ ಸದಸ್ಯರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ವಿದ್ಯಾರ್ಥಿ ಹಂತದಲ್ಲಿಯೇ ದ್ವೇಷ, ಅಸೂಯೆ ಎಲ್ಲವನ್ನು ತ್ಯಜಿಸಿ ಮಾನವೀಯ ಮೌಲ್ಯ ಮೈಗೂಡಿಸಿಕೊಳ್ಳಬೇಕು. ಆವೇಷಕ್ಕೊಳಗಾಗಿ ದ್ವೇಷ, ಅಸೂಯೆಗೆ ತಮ್ಮ ಚಿತ್ತವನ್ನು ಕೊಡದೆ ಈ ಎಲ್ಲವನ್ನು ಮರೆತು ನಡೆದಾಗ ಮಾತ್ರ ಜೀವನ ಬಹಳ ಸುಂದರವಾಗಿರುತ್ತದೆ ಎಂದರು.
ವಿದ್ಯಾರ್ಥಿಗಳು ಕಲಿತ ವಿದ್ಯೆಯನ್ನು ಉದ್ಯೋಗ ಪಡೆಯುವುದಕ್ಕಷ್ಟೇ ಸೀಮಿತಗೊಳಿಸಬಾರದು. ಶಿಕ್ಷಣದ ಜೊತೆಗೆ ಸಂಸ್ಕಾರ, ಸಂಸ್ಕೃತಿ ಮೈಗೂಡಿಸಿಕೊಳ್ಳಬೇಕು. ತಾಲೂಕಿನಲ್ಲಿ ಹತ್ತಾರು ಸಾಹಿತಿಗಳು ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ರಾಜ್ಯ ಮಟ್ಟದಲ್ಲಿ ಹೆಸರುವಾಸಿಯಾಗಿದ್ದಾರೆ ಎಂದರು.
ಮಂಡ್ಯ ಜಿಲ್ಲೆಯಲ್ಲಿ 87ನೇ ಅಖಿಲ ಭಾರತೀಯ ಸಾಹಿತ್ಯ ಸಮ್ಮೆಳನ ನಡೆಯುತ್ತಿದೆ. ಅದು ನಮ್ಮ ಮನೆ ಹಬ್ಬವಾಗುವ ರೀತಿಯಲ್ಲಿ ಸಾಹಿತ್ಯದ ಹಬ್ಬವಾಗಿಸಬೇಕು. ಈ ಸಮ್ಮೇಳನದ ಯಶಸ್ಸಿಗೆ ಎಲ್ಲರೂ ಕೈಜೋಡಿಸಿ ಈ ಹಿಂದಿನ ಎಲ್ಲಾ ಸಮ್ಮೇಳನಗಳನ್ನು ಮೀರಿಸುವಂತೆ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಸಾನಿಧ್ಯ ವಹಿಸಿದ್ದ ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ ಮಾತನಾಡಿ, ಮನುಷ್ಯನ ಬದುಕಿಗೆ ಏನೆಲ್ಲಾ ಬೇಕಿರುತ್ತದೆಯೋ ಅದೆಲ್ಲವನ್ನು ಜಾನಪದ ಕ್ಷೇತ್ರ ನೀಡುತ್ತದೆ. ಆ ಪರಂಪರೆಯನ್ನು ಉಳಿಸಿ, ಬೆಳೆಸುವ ಮಹತ್ತರವಾದ ಜವಾಬ್ದಾರಿ ಇಂದಿನ ಯುವಪೀಳಿಗೆ ಮೇಲಿದೆ ಎಂದರು.
ಇಂದಿನ ಯುವಪೀಳಿಗೆ ಜಾನಪದ ಹಾಡುಗಳನ್ನು ಬಿಟ್ಟು ಸಿನಿಮಾ ಹಾಡುಗಳತ್ತ ಮನಸ್ಸು ಮಾಡುತ್ತಿದೆ. ಪಾಶ್ಚಿಮಾತ್ಯ ಶೈಲಿಯನ್ನು ತಲುಪಿವೆ. ಇದರಿಂದ ಹೊರ ಬಂತು ನಮ್ಮ ನಾಡಿನ ಮೂಲ ಸಂಸ್ಕೃತಿ ಉಳಿಸಿ ಬೆಳೆಸಬೇಕಿದೆ ಎಂದರು.
ಕಾರ್ಯಕ್ರಮದ ವೇದಿಕೆಯಲ್ಲಿ ಜವರನಹಳ್ಳಿ ಸಿದ್ದಪ್ಪ ಅವರು ರಚಿಸಿರುವ ಮೂರು ಕೃತಿಗಳನ್ನು ಬಿಡುಗಡೆಗೊಳಿಸಿದ ಬಳಿಕ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ ನೇಮಕವಾಗಿರುವ ಟಿ.ತಿಮ್ಮೇಶ್, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯರಾಗಿ ನೇಮಕಗೊಂಡಿರುವ ಸಿ.ಎನ್.ಮಂಜೇಶ್ ಮತ್ತು ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸದಸ್ಯರಾಗಿ ನೇಮಕಗೊಂಡಿರುವ ಬಿ.ಸಿ.ಶಿವಕುಮಾರ್ ಅವರನ್ನು ಶ್ರೀಗಳು ಮತ್ತು ಗಣ್ಯರು ಸನ್ಮಾನಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ.ರವೀಂದ್ರ, ತಾಲೂಕು ಕಸಾಪ ಅಧ್ಯಕ್ಷ ಸಿ.ಆರ್.ಚಂದ್ರಶೇಖರ್, ಹಿರಿಯ ಪತ್ರಕರ್ತ ಬಿ. ಚಂದ್ರೇಗೌಡ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಎಚ್.ಟಿ.ಕೃಷ್ಣೇಗೌಡ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಜೆ.ವೈ.ಮಂಜುನಾಥ್, ವಕೀಲ ಧನಂಜಯ ಸೇರಿದಂತೆ ಹಲವರು ಇದ್ದರು.