ಸಾರಾಂಶ
ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಕಿಡಿಗೇಡಿಗಳು ನಡೆಸಿದ ಕೃತ್ಯ ಅತ್ಯಂತ ಆಘಾತಕಾರಿಯಾಗಿದೆ. ಆದರೆ ಇದೊಂದು ಸಣ್ಣ ಘಟನೆ ಎಂದಿರುವ ಗೃಹ ಸಚಿವ ಜಿ. ಪರಮೇಶ್ವರ ಹೇಳಿಕೆ ಖೇದಕರ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಅರುಣಕುಮಾರ ಪೂಜಾರ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು
ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಕಿಡಿಗೇಡಿಗಳು ನಡೆಸಿದ ಕೃತ್ಯ ಅತ್ಯಂತ ಆಘಾತಕಾರಿಯಾಗಿದೆ. ಆದರೆ ಇದೊಂದು ಸಣ್ಣ ಘಟನೆ ಎಂದಿರುವ ಗೃಹ ಸಚಿವ ಜಿ. ಪರಮೇಶ್ವರ ಹೇಳಿಕೆ ಖೇದಕರ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಅರುಣಕುಮಾರ ಪೂಜಾರ ತಿಳಿಸಿದ್ದಾರೆ. ಈ ಕುರಿತು ಅವರು ಪತ್ರಿಕೆಗೆ ನೀಡಿರುವ ಪ್ರಕಟಣೆಯಲ್ಲಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಇಂತಹ ಘಟನೆಗಳು ಹೆಚ್ಚಾಗಿವೆ. ಒಂದು ಕಡೆ ಭಾವೈಕ್ಯತೆ ಎಂಬ ಸಂದೇಶ ಕೊಡುವುದು,ಇನ್ನೊಂದು ಕಡೆ ಕಲ್ಲು ಎಸೆದು ಹಿಂಸಾಚಾರ ನಡೆಸಿದರೂ ಸಣ್ಣ ಘಟನೆ ಎನ್ನುವುದು ಕಾಂಗ್ರೆಸ್ ಪಕ್ಷದ ನಡೆಯಾಗಿದೆ. ನಮ್ಮ ಮುಖ್ಯಮಂತ್ರಿಗಳು ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟ ಎನ್ನುತ್ತಾರೆ. ಆದರೆ ನಾಗಮಂಗಲದಲ್ಲಿ ಪೊಲೀಸರ ಸಮ್ಮುಖದಲ್ಲೇ ಅಂಗಡಿಗೆ ಬೆಂಕಿ ಹಚ್ಚಿದರೂ ಯಾರೂ ಸಹಾಯಕ್ಕೆ ಬಂದಿಲ್ಲ ಎಂದು ಸ್ಥಳೀಯರೊಬ್ಬರು ಕಣ್ಣೀರಿಟ್ಟಿದ್ದಾರೆ. ನಮ್ಮ ಮೇಲೂ ದಾಳಿ ನಡೆಯುವ ಕಾರಣ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿರುವ ವಿಷಯ ಕರ್ನಾಟಕದಲ್ಲಿ ಜನಸಾಮಾನ್ಯರಾಗಲಿ, ಪೊಲೀಸರಾಗಲಿ ಸುರಕ್ಷಿತವಾಗಿಲ್ಲ ಎನಿಸುತ್ತದೆ. ಆದ್ದರಿಂದ ಕೂಡಲೇ ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.