ನನ್ನ ಹುಟ್ಟೂರಿನವರೇ ಆದ ಎನ್.ಚಲುವರಾಯಸ್ವಾಮಿ ಅವರು ರಾಜ್ಯ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ಅವರು ನಾಗಮಂಗಲಕ್ಕೆ ಈವರೆಗೂ ರಂಗ ಮಂದಿರವನ್ನು ನಿರ್ಮಿಸಿ ಕೊಟ್ಟಿಲ್ಲವೋ ಅಥವಾ ನೀವೇ ಅವರನ್ನು ಕೇಳಿಲ್ಲವೋ ಗೊತ್ತಿಲ್ಲ. ನಾನಂತು ಚಲುವಣ್ಣನಿಗೆ ಖಂಡಿತ ದೂರವಾಣಿ ಕರೆ ಮಾಡಿ ದಯಮಾಡಿ ಒಂದು ಬಯಲು ರಂಗ ಮಂದಿರ ನಿರ್ಮಿಸಿ ಎಂದು ಮನಮಿ ಮಾಡುತ್ತೇನೆ.
ಕನ್ನಡಪ್ರಭ ವಾರ್ತೆ ನಾಗಮಂಗಲ
ಕಳೆದ 18 ವರ್ಷಗಳಿಂದ ನಿರಂತರವಾಗಿ ನಾಟಕ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿರುವ ನಾಗಮಂಗಲಕ್ಕೆ ಸುಸಜ್ಜಿತ ಒಂದು ಬಯಲು ರಂಗಮಂದಿರದ ಅಗತ್ಯವಿದೆ ಎಂದು ತಾಲೂಕಿನ ಇಜ್ಜಲಘಟ್ಟ ಗ್ರಾಮದ ಚಲನಚಿತ್ರ ಸಾಹಿತಿ ವಿ.ನಾಗೇಂದ್ರ ಪ್ರಸಾದ್ ಅಭಿಪ್ರಾಯಪಟ್ಟರು.ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದ ಸಾಂಸ್ಕತಿಕ ಚಿಂತಕ ದಿ.ಚಿದಂಬರರಾವ್ ಜಂಬೆ ಅವರ ನೆನಪಿನ ವೇದಿಕೆಯಲ್ಲಿ ಕನ್ನಡ ಸಂಘ ಆಯೋಜಿಸಿದ್ದ 18ನೇ ವರ್ಷದ ರಾಜ್ಯ ಮಟ್ಟದ ನಾಗರಂಗ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದರು.
ಅಮೇಚೂರ್ ಥಿಯೇಟರ್ ಅಥವಾ ಸಿದ್ದರಂಗ ಭೂಮಿಯ ನಾಟಕಗಳು, ಷೇಕ್ಸ್ಪಿಯರ್ನ ಇಂಗ್ಲಿಷ್ ನಾಟಕಗಳನ್ನು ಕನ್ನಡಕ್ಕೆ ರೂಪಾಂತರ ಮಾಡಿ ಗ್ರಾಮೀಣ ಭಾಗದಲ್ಲಿ ಪ್ರದರ್ಶಿಸಲು ಮತ್ತು ಅವುಗಳನ್ನು ಅರ್ಥಮಾಡಿಕೊಳ್ಳಲು ಶಿಕ್ಷಣವಿರಬೇಕು ಅಥವಾ ಆ ನಾಟಕಗಳು ಶಿಕ್ಷಣದಿಂದ ಕೂಡಿರಬೇಕು. ಈಗಿರುವಾಗ ಇಂತಹ ಅತ್ಯದ್ಭುತ ನಾಟಕಗಳನ್ನು ಕಲಿತು ಪ್ರದರ್ಶಿಸುತ್ತಿರುವುದು ಬಹಳ ಖುಷಿಯಾಯಿತು. ಇಂತಹ ನೆಲದಲ್ಲಿ ಒಂದು ಬಯಲು ರಂಗಮಂದಿರ ಇಲ್ಲದಿರುವುದು ಬೇಸರದ ಸಂಗತಿ ಎಂದರು.ತಾಲೂಕಿನ ನನ್ನ ಹುಟ್ಟೂರಿನವರೇ ಆದ ಎನ್.ಚಲುವರಾಯಸ್ವಾಮಿ ಅವರು ರಾಜ್ಯ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ಅವರು ನಾಗಮಂಗಲಕ್ಕೆ ಈವರೆಗೂ ರಂಗ ಮಂದಿರವನ್ನು ನಿರ್ಮಿಸಿ ಕೊಟ್ಟಿಲ್ಲವೋ ಅಥವಾ ನೀವೇ ಅವರನ್ನು ಕೇಳಿಲ್ಲವೋ ಗೊತ್ತಿಲ್ಲ. ನಾನಂತು ಚಲುವಣ್ಣನಿಗೆ ಖಂಡಿತ ದೂರವಾಣಿ ಕರೆ ಮಾಡಿ ದಯಮಾಡಿ ಒಂದು ಬಯಲು ರಂಗ ಮಂದಿರ ನಿರ್ಮಿಸಿ ಎಂದು ಮನಮಿ ಮಾಡುತ್ತೇನೆ ಎಂದರು.
ಕನ್ನಡ ಸಂಘವು ಕೇವಲ ಮಂಡ್ಯ ಜಿಲ್ಲೆ ಅಥವಾ ಭಾರತ ದೇಶಕ್ಕೆ ಅಷ್ಟೆ ಸೀಮಿತವಾಗದೇ ಅಮೆರಿಕದ ‘ಅಕ್ಕ’ ಸಮ್ಮೇಳನದವರೆಗೂ ಪರಿಚಿತವಾಗಿದೆ. ಹಳೇ ಮೈಸೂರು ಭಾಗದಲ್ಲಿ ತಾಲೂಕು ಮಟ್ಟದಲ್ಲಿ ಪ್ರತಿವರ್ಷ ಇಂತಹದೊಂದು ರಂಗ ಪ್ರಪಂಚವನ್ನು ತೆರೆದಿಡುವ ಪ್ರಯತ್ನ ಬಹುಶಃ ಬೇರೆಲ್ಲೂ ನಡೆಯುತ್ತಿಲ್ಲ. ಈ ಶಿಸ್ತು ಮತ್ತು ಬದ್ಧತೆಯಿಂದಲೇ ಕನ್ನಡ ಸಂಘ ಖ್ಯಾತಿ ಪಡೆದಿದೆ ಎಂದು ಶ್ಲಾಘಿಸಿದರು.ಹಿರಿಯ ರಂಗಕರ್ಮಿ ಎಸ್.ಎನ್.ಸೇತುರಾಮ್ ಮಾತನಾಡಿ, ಬದುಕನ್ನು ಹಕ್ಕಾಗಿ ನೋಡದೆ ಪ್ರತಿ ಕ್ಷಣವನ್ನೂ ಕೃತಜ್ಞತೆ ಮತ್ತು ಸಂಭ್ರಮದಿಂದ ಸ್ವೀಕರಿಸಿದಾಗ ಮಾತ್ರ ಜೀವನ ಅರ್ಥಪೂರ್ಣವಾಗುತ್ತದೆ. ಬದುಕನ್ನು ನಿರ್ಗತಿಯಾಗಿ ಕಂಡರೂ, ಸಿಗುವ ಅವಕಾಶವನ್ನು ಉತ್ತಮವಾಗಿ ಬಳಸಿಕೊಳ್ಳುವ ಹಂಬಲ ನಮ್ಮದಾಗಿರಬೇಕು. ಉತ್ತಮ ಊಟ, ನೆಮ್ಮದಿಯ ನಿದ್ರೆ, ಆರೋಗ್ಯ ಮತ್ತು ಪ್ರೀತಿಸುವ ಜನರೇ ನಿಜವಾದ ಆಸ್ತಿ. ಹೊಟ್ಟೆಕಿಚ್ಚು ಬಿಟ್ಟು ಸಂತೋಷವಾಗಿರುವುದೇ ಉತ್ಸಾಹದ ಗುಟ್ಟು ಎಂದರು.
ನಾಗರಿಕತೆಯನ್ನು ಕೇವಲ ಹಣ ಮತ್ತು ಭೌತಿಕ ಸೌಕರ್ಯಗಳಿಂದ ಅಳೆಯದೆ, ಪರಿಸರ ಮತ್ತು ಮಾನವ ಸಂಬಂಧಗಳನ್ನು ಉಳಿಸುವ ನಿಜವಾದ ಅರ್ಥದಲ್ಲಿ ಕಾಣಬೇಕು. ಮನೆಯಲ್ಲಿನ ಅಸಮಾಧಾನಗಳನ್ನು ಬದಿಗಿಟ್ಟು ಪ್ರೀತಿಯಿಂದ ಬದುಕಬೇಕು ಎಂದರು.ಕನ್ನಡ ಸಂಘದ ಅಧ್ಯಕ್ಷ ಎನ್.ಟಿ.ಅಶೋಕ್ ಸಮಾರಂಭದ ಅಧ್ಯಕ್ಷತೆ ವವಹಿಸಿದ್ದರು. ನಂತರ ಉಡುಪಿಯ ಸುಮನಸಾ ಕೊಡವೂರು ತಂಡ ಪ್ರಸ್ತುತಿಪಡಿಸಿದ ವಿದ್ದು ಉಜ್ವಲ್ ನಿರ್ದೇಶನದ ‘ಈದಿ’ ಎಂಬ ನಾಟಕ ಪ್ರದರ್ಶನಗೊಂಡಿತು. ಸಂಘದ ಸಂಸ್ಥಾಪಕ ಅಧ್ಯಕ್ಷ ನಾ.ಸು.ನಾಗೇಶ್, ಕಾರ್ಯದರ್ಶಿ ಉಮಾ ಶುಭಮೂರ್ತಿ, ಸಂಚಾಲಕ ಲ.ಬಾಲಕೃಷ್ಣ, ಖಜಾಂಚಿ ರಾಜಶೇಖರ, ಮಾಜಿ ಅಧ್ಯಕ್ಷರಾದ ರಾಘವೇಂದ್ರ, ಮೀರಾ ಬಾಲಕೃಷ್ಣ, ಎನ್.ನಟರಾಜ್, ಪ್ರಶಾಂತ್ಮಧು, ಎಂ.ಎನ್.ಮಂಜುನಾಥ್, ಸದಸ್ಯರಾದ ಎನ್.ಸಿ.ಶಿವಕುಮಾರ್, ಪುಟ್ಟಮ್ಮ ಮಾಯಣ್ಣಗೌಡ, ಎನ್.ಮುರಳೀಧರ, ಈರಪ್ಪ, ಶಿವಣ್ಣಗೌಡ, ಭೀಮರಾಜು ಸೇರಿದಂತೆ ಹಲವರು ಇದ್ದರು.