ದೇವಾಲಯಗಳ ನಾಡು, ಕಲೆ, ಸಾಹಿತ್ಯ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ನಾಡಿನ ಗಮನ ಸೆಳೆದಿರುವ ಜಾನಪದ ಲೋಕದ ತವರು ನೆಲ ನಾಗಮಂಗಲದಲ್ಲಿ 18ನೇ ವರ್ಷದ ನಾಗರಂಗ ರಾಜ್ಯ ಮಟ್ಟದ ನಾಟಕೋತ್ಸವ ನ.22 ರಿಂದ 7 ದಿನಗಳ ಕಾಲ ರಂಗಾಸಕ್ತರಿಗೆ ನಾಟಕಗಳ ರಸದೌತಣ ನೀಡಲು ಕನ್ನಡ ಸಂಘವು ಸಕಲ ರೀತಿಯಲ್ಲೂ ಸಜ್ಜಾಗುತ್ತಿದೆ.
ಕರಡಹಳ್ಳಿ ಸೀತಾರಾಮು
ಕನ್ನಡಪ್ರಭ ವಾರ್ತೆ ನಾಗಮಂಗಲದೇವಾಲಯಗಳ ನಾಡು, ಕಲೆ, ಸಾಹಿತ್ಯ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ನಾಡಿನ ಗಮನ ಸೆಳೆದಿರುವ ಜಾನಪದ ಲೋಕದ ತವರು ನೆಲ ನಾಗಮಂಗಲದಲ್ಲಿ 18ನೇ ವರ್ಷದ ನಾಗರಂಗ ರಾಜ್ಯ ಮಟ್ಟದ ನಾಟಕೋತ್ಸವ ನ.22 ರಿಂದ 7 ದಿನಗಳ ಕಾಲ ರಂಗಾಸಕ್ತರಿಗೆ ನಾಟಕಗಳ ರಸದೌತಣ ನೀಡಲು ಕನ್ನಡ ಸಂಘವು ಸಕಲ ರೀತಿಯಲ್ಲೂ ಸಜ್ಜಾಗುತ್ತಿದೆ.
ಕಳೆದ 54 ವರ್ಷಗಳ ಹಿಂದೆ ಸ್ಥಾಪಿತವಾಗಿರುವ ಕನ್ನಡ ಸಂಘವು ಊರಿನ ಸಾಂಸ್ಕೃತಿಕ ಅಗತ್ಯಗಳನ್ನು ಕಂಡುಕೊಂಡು ಪೂರೈಸುವ ಗುರಿಯೊಂದಿಗೆ ಗ್ರಂಥಾಲಯ, ಕಲಾಶಾಲೆ ತೆರೆದು ಸಂಗೀತ, ನೃತ್ಯ, ಚಿತ್ರ ರಚನೆಗಳಿಗೆ ಅವಕಾಶ ಕಲ್ಪಿಸಿದೆ.ಜ್ಞಾನವೃದ್ಧಿಗೆ ಪೂರಕವಾದ ಉಪನ್ಯಾಸಗಳು, ಸಂಗೀತ, ನೃತ್ಯ ಪ್ರದರ್ಶನ, ವಿಚಾರ ಸಂಕಿರಣಗಳು, ನಾಟಕ ಪ್ರದರ್ಶನ, ರಂಗ ತರಬೇತಿ ಶಿಬಿರ, ರಾಷ್ಟ್ರೀಯ ಹಬ್ಬಗಳಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಮಕ್ಕಳಿಗೆ ಉಪಾಹಾರ ವ್ಯವಸ್ಥೆ ಆಧುನಿಕ ನಾಟಕಗಳ ಪರಿಚಯಕ್ಕಾಗಿ ನಾಟಕೋತ್ಸವ ಸೇರಿದಂತೆ ಹಲವು ರೀತಿಯಲ್ಲಿ ಈ ನೆಲದ ಕೊರತೆ ನೀಗಿಸುವ ಕ್ರಿಯಾಶೀಲ ಚಟುವಟಿಕೆ ನಿರಂತರಾಗಿ ನಡೆಸುತ್ತಿದೆ.
ಕೆಲ ವರ್ಷಗಳ ಹಿಂದೆ ನಾಟಕಗಳು ಮನುಷ್ಯನಿಗೆ ಮನರಂಜನೆ ನೀಡುತ್ತಿದ್ದವು. ನಂತರ ಸಿನಿಮಾ ಮನರಂಜನೆಯ ವಸ್ತುವಾಗಿ ಹೊರಹೊಮ್ಮಿತು. ಆದರೆ, ಪ್ರಸ್ತುತ ದಿನಗಳಲ್ಲಿ ದೃಶ್ಯಮಾಧ್ಯಮವು ಈ ಎರಡನ್ನೂ ಹಿಂದಕ್ಕೆ ತಳ್ಳಿಹಾಕಿದ್ದು, ಇದಕ್ಕೆ ಜನರೂ ಸಹ ಮಾರು ಹೋಗಿದ್ದಾರೆ. ಕಿರುತೆರೆ ಧಾರಾವಾಹಿ ಮತ್ತು ಸಾಮಾಜಿಕ ಜಾಲತಾಣಗಳ ಹಾವಳಿಯ ನಡುವೆಯೂ ಕಳೆದ 18 ವರ್ಷಗಳಿಂದ ರಾಜ್ಯ ಮಟ್ಟದ ನಾಗರಂಗ ನಾಟಕೋತ್ಸವ ಆಯೋಜಿಸುವ ಮೂಲಕ, ರಂಗಕಲೆ ಪೋಷಿಸಿ ಮುಂದಿನ ಪೀಳಿಗೆಗೆ ಉಳಿಸುವ ಕೆಲಸವನ್ನು ಇಲ್ಲಿನ ಕನ್ನಡ ಸಂಘ ಮಾಡುತ್ತಿದೆ.ತಾಲೂಕಿನವರೇ ಆದ ನಾಡೋಜ ಡಾ.ಎಚ್.ಎಲ್.ನಾಗೇಗೌಡ, ಜಿ.ಶಂ.ಪರಮಶಿವಯ್ಯ, ಕ.ರಾ.ಕೃಷ್ಣಸ್ವಾಮಿ, ಹ.ಕ.ರಾಜೇಗೌಡ ಮೊದಲಾದವರು ಈ ನೆಲದ ಜನಪದ ಸಾಹಿತ್ಯವನ್ನು ಜಗತ್ತಿಗೆ ಪರಿಚಯಿಸಿದವರು. ತಾಲೂಕಿನ ಜನರ ರಂಗಾಸಕ್ತಿಯ ಫಲವಾಗಿ ರಂಗಭೂಮಿಯ ಚಟುವಟಿಕೆಗಳೂ ಸಹ ವಿಶಿಷ್ಠ ಸ್ಥಾನವನ್ನು ಪಡೆದುಕೊಂಡಿದೆ.
ಕಳೆದ 5 ದಶಕಗಳಿಂದ ವಿವಿಧ ಅಭಿರುಚಿಯ ಕಾರ್ಯಕ್ರಮ ಹಮ್ಮಿಕೊಂಡು, ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಸೊಬಗನ್ನು ಸಾರ್ವಜನಿಕರಿಗೆ ಉಣಬಡಿಸಿಕೊಂಡು ಬಂದಿರುವ ನಾಗಮಂಗಲ ಕನ್ನಡ ಸಂಘವು ಕನ್ನಡ ನಾಡು ನುಡಿ ಬಗ್ಗೆ ಹಲವಾರು ಕಾರ್ಯಕ್ರಮ ನಡೆಸಿದೆ. ಅನೇಕ ಸಾಧಕರು ಸಂಘದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಹರಸಿ ಹೋಗಿದ್ದಾರೆ.ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಖ್ಯಾತ ರಂಗಕರ್ಮಿ ಮತ್ತು ಸಾಂಸ್ಕೃತಿಕ ಚಿಂತಕ ದಿ.ಚಿದಂಬರರಾವ್ ಜಂಬೆ ಅವರ ನೆನಪಿನ ವೇದಿಕೆ ನಿರ್ಮಿಸಲಾಗಿದೆ. ನ.22ರ ಸಂಜೆ 6.30ಕ್ಕೆ ನಾಟಕೋತ್ಸವಕ್ಕೆ ಚಾಲನೆ ಸಿಗಲಿದೆ. ಪಟ್ಟಣದ ಮಾದರಿ ಉನ್ನತ ಪ್ರಾಥಮಿಕ ಶಾಲೆ ಮಕ್ಕಳು ಹಚ್ಚೇವು ಕನ್ನಡದ ದೀಪ ಗೀತೆಗೆ ಸ್ವಾಗತ ನೃತ್ಯ ಪ್ರದರ್ಶನದ ನಂತರ ಸಂಘದ ಸಂಸ್ಥಾಪಕ ಅಧ್ಯಕ್ಷ ನಾ.ಸು.ನಾಗೇಶ ವಿರಚಿತ ನಿತ್ಯದ ಆಟಕೆ ಸಜ್ಜಾಗಿದೆ ಧರೆ ಎಂಬ ಕವನ ಸಂಕಲನ ಲೋಕಾರ್ಪಣೆಗೊಳ್ಳಲಿದೆ. ಸಾಹಿತಿ ಮತ್ತು ಸಂಸ್ಕೃತಿ ಚಿಂತಕ ನಾಡೋಜ ಡಾ.ಹಂ.ಪ.ನಾಗರಾಜಯ್ಯ ಅವರಿಗೆ ನುಡಿಗೌರವ ಹಾಗೂ ಚಿತ್ರನಟ, ನಿರ್ದೇಶಕ ಪ್ರಶಾಂತ ಹಿರೇಮಠ ಅವರಿಗೆ ರಂಗಗೌರವ ಸಲ್ಲಿಸಲಾಗುವುದು. ಚಲನಚಿತ್ರ ನಟ ರಾಮಕೃಷ್ಣ ಅತಿಥಿಯಾಗಿ ಪಾಲ್ಗೊಳ್ಳುವರು. ಸಂಘದ ಅಧ್ಯಕ್ಷ ಎನ್.ಟಿ.ಅಶೋಕ್ ಅಧ್ಯಕ್ಷತೆ ವಹಿಸುವರು.
ನ.28ರ ಸಂಜೆ 6.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಹಿರಿಯ ರಂಗಕರ್ಮಿ ಎಸ್.ಎನ್.ಸೇತುರಾಂ ಹಾಗೂ ಚಲನಚಿತ್ರ ಸಾಹಿತಿ ವಿ.ನಾಗೇಂದ್ರಪ್ರಸಾದ್ ಭಾಗಿಯಾಗುವರು. ಬಳಿಕ ಉಡುಪಿಯ ಸುಮನಸಾ ಕೊಡವೂರು ತಂಡ ಪ್ರಸ್ತುತಿಪಡಿಸುವ ವಿದ್ದು ಉಜ್ವಲ್ ನಿರ್ದೇಶನದ ಈದಿ ನಾಟಕ ಪ್ರದರ್ಶನದ ಮೂಲಕ ಏಳು ದಿನಗಳ ನಾಗರಂಗ ನಾಟಕೋತ್ಸವಕ್ಕೆ ತೆರೆಬೀಳಲಿದೆ.ಏಳು ದಿನಗಳ ಕಾಲ ನಡೆಯುವ ಈ ರಂಗ ಸಪ್ತಾಹದಲ್ಲಿ ಪುಸ್ತಕ ಮಳಿಗೆ ಸೇರಿದಂತೆ ಉತ್ತರ ಕರ್ನಾಟಕ ಶೈಲಿಯ ತಿಂಡಿ ತಿನಿಸುಗಳು, ಅಪ್ಪಟ ಖಾದಿಯ ಸಿದ್ದ ಉಡುಪುಗಳು, ಗೃಹೋಪಯೋಗಿ ಕರಕುಶಲ ಪದಾರ್ಥಗಳ ಹತ್ತಾರು ಮಳಿಗೆಗಳು ತೆರೆಯಲಿವೆ.
ನ.22ರಂದು ಮೈಸೂರಿನ ಶಿವತಂಡ ಪ್ರಸ್ತುತಿ ಪಡಿಸುವ ಪ್ರಶಾಂತ್ ಹಿರೇಮಠ ನಿರ್ದೇಶನದ ಅಮೃತಬಳ್ಳಿ ಕಷಾಯ. ನ.23ರಂದು ಬೆಂಗಳೂರಿನ ಸಮಾಜಮುಖಿ ರಂಗಬಳಗ ಪ್ರಸ್ತುತಿಯ ಮಂಜುನಾಥ್ ಎಲ್.ಬಡಿಗೇರ್ ನಿರ್ದೇಶನದ ಎತ್ತ ಹಾರಿದ ಹಂಸ. ನ.24ರಂದು ಮೂಡಬಿದರೆಯ ಆಳ್ವಾಸ್ ರಂಗ ಅಧ್ಯಯನ ಕೇಂದ್ರ ಪ್ರಸ್ತುತ ಪಡಿಸುವ ಡಾ.ಜೀವನ್ರಾಂ ಸುಳ್ಯ ನಿರ್ದೇಶನದ ಮಹಾಮಾಯಿ. ನ.25ರಂದು ಬೆಂಗಳೂರಿನ ಅಭಿಜ್ಞಾ ಟ್ರಸ್ಟ್ ಪ್ರಸ್ತುತಿಯ ಮಂಜುನಾಥ್ ಎಲ್.ಬಡಿಗೇರ್ ನಿರ್ದೇಶನದ ಸೀತಾ ಸ್ವಯಂವರ. ನ.26ರಂದು ಚಿಕ್ಕಬಳ್ಳಾಪುರದ ಐಶ್ವರ್ಯ ಕಲಾನಿಕೇತನ ಪ್ರಸ್ತುತಿಯ ಜಿ.ವಿ.ಪ್ರಸನ್ನಕುಮಾರ ನಿರ್ದೇಶಿಸಿರುವ ಸನ್ಮಾನ ಸುಖ. ನ.27ರಂದು ಬೆಂಗಳೂರಿನ ದೃಶ್ಯ ತಂಡ ಪ್ರಸ್ತುತಪಡಿಸುವ ದಾಕ್ಷಾಯಿಣಿ ಭಟ್ ನಿರ್ದೇಶನದ ಮೃಚ್ಛಕಟಿಕ. ನ.28ರಂದು ಉಡುಪಿಯ ಸುಮನಸಾ ಕೊಡವೂರು ತಂಡ ಪ್ರಸ್ತುತಿಪಡಿಸುವ ವಿದ್ದು ಉಜ್ವಲ್ ನಿರ್ದೇಶನದ ಈದಿ ನಾಟಕಗಳು ಪ್ರದರ್ಶನಗೊಳ್ಳಲಿವೆ.