ಸಾರಾಂಶ
ಗಜೇಂದ್ರಗಡ: ಏಕ ಸದಸ್ಯ ಆಯೋಗದ ಅಧ್ಯಕ್ಷ ಎಚ್.ಎನ್. ನಾಗಮೋಹನ್ ದಾಸ್ ಸಲ್ಲಿಸಿರುವ ವರದಿ ಒಪ್ಪಲು ಸಾಧ್ಯವಿಲ್ಲ ಎಂದು ಕರ್ನಾಟಕ ಪ್ರದೇಶ ಬಂಜಾರ (ಲಂಬಾಣಿ) ಸೇವಾ ಸಂಘದ ಜಿಲ್ಲಾಧ್ಯಕ್ಷ ಶಿವಕುಮಾರ ಚವ್ಹಾಣ ಹೇಳಿದರು.
ಎಚ್.ಎನ್. ನಾಗಮೋಹನ್ ದಾಸ್ ವರದಿಯನ್ನು ರಾಜ್ಯ ಸರ್ಕಾರ ರದ್ದು ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರದೇಶ ಬಂಜಾರ (ಲಂಬಾಣಿ) ಸೇವಾ ಸಂಘದ ತಾಲೂಕು ಘಟಕದಿಂದ ಪಟ್ಟಣದ ತಹಸೀಲ್ದಾರ್ ಮೂಲಕ ಬುಧವಾರ ಕ್ಷೇತ್ರದ ಶಾಸಕರು, ಕಾನೂನು ಸಚಿವರು, ಉಪಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು.ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ ವರದಿ ಸರ್ವೋಚ್ಚ ನ್ಯಾಯಾಲಯದ ಆದೇಶ ಸರಿಯಾಗಿ ತಿಳಿದುಕೊಳ್ಳದೆ ಮತ್ತು ಸಂವಿಧಾನ ರ‍್ಟಿಕಲ್ ೩೪೧(೨)ರಲ್ಲಿನ ಅಂಶಗಳನ್ನು ಪರಿಗಣಿಸದೇ ಇರುವುದರಿಂದ ವರದಿ ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಅಲ್ಲದೆ ೨೦೧೧ ರ ಜನಗಣತಿಯ ಆಧಾರದ ಮೇರೆಗೆ ಮಾಡಿರುವ ವರದಿಯಾಗಿದೆ. ರಾಜ್ಯದಲ್ಲಿ ೫೦ ಲಕ್ಷ ಲಂಬಾಣಿಗರಿದ್ದು, ವರದಿಯಲ್ಲಿ ಕೇವಲ ೧೪ ಲಕ್ಷ ತೋರಿಸಿರುವುದು ಅಸಮಂಜಸವಾಗಿದೆ ಎಂದರು.
ಮುಖಂಡ ಉಮೇಶ ರಾಠೋಡ ಮಾತನಾಡಿ, ಚುನಾವಣೆ ಪಟ್ಟಿಯಲ್ಲಿರುವ ದತ್ತಾಂಶ ಪಡೆಯಲಾಗಿದೆ. ಆದರೆ ಮಕ್ಕಳು ಮತ್ತು ವಲಸೆ ಹೋಗಿರುವ ಬಂಜಾರ ಜನಗಳ ದತ್ತಾಂಶ ಪಡೆದಿಲ್ಲ. ಸುಮಾರು ೧೯೫೦ರಿಂದ ಪರಿಶಿಷ್ಟ ಜಾತಿ ಯಾವುದೇ ರೀತಿಯಿಂದ ಮೀಸಲಾತಿಯಲ್ಲಿ ವಂಚಿತರಾಗಿರುವದಿಲ್ಲ. ಆದರೆ ಈ ವರದಿ ಪ್ರಕಾರ ೧೦೧ ಜಾತಿಗಳಲ್ಲಿಯೇ ವರ್ಗಿಕರಣ ಮಾಡಿ ಗುಂಪುಗಾರಿಕೆ ಮಾಡಿ, ಮೀಸಲಾತಿ ಹಂಚಿರುವುದು ಅವೈಜ್ಞಾನಿಕವಾಗಿದೆ. ೧೦೧ ಜಾತಿಯವರು ಅಣ್ಣ ತಮ್ಮದಿರಂತೆ ಇದ್ದೇವೆ. ಒಳ ಮೀಸಲಾತಿ ಮೂಲಕ ನಮ್ಮನ್ನು ಒಡೆದಾಳಲು ರಾಜ್ಯ ಸರ್ಕಾರ ಮುಂದಾಗಬಾರದು ಎಂದರು.ಸಂಘದ ತಾಲೂಕಾಧ್ಯಕ್ಷ ಹರೀಶ ಪಮ್ಮಾರ, ಪ್ರವೀಣ ಚವ್ಹಾಣ, ಉಮೇಶ ರಾಠೋಡ, ಕುಬೇರ ಮಾಳೊತ್ತರ, ಧರ್ಮಣ್ಣ ರಾಠೋಡ, ಶಿವಾನಂದ ಲಮಾಣಿ, ಬುದ್ದಿವಂತ ಲಮಾಣಿ, ಮಂಜುನಾಥ ಪಮ್ಮಾರ, ಶಿವಾನಂದ ಅಜಮೀರ, ಮಂಜುನಾಥ ಚವ್ಹಾಣ, ಶಿವಪ್ಪ ರಾಠೋಡ, ಸುಭಾಸ ರಾಠೋಡ, ಮಂಜುನಾಥ ಜಾಧವ, ಮುತ್ತಪ್ಪ ಪೂಜಾರ ಸೇರಿ ಇತರರು ಇದ್ದರು.
ಈ ವೇಳೆ ಅಂಬೇಡ್ಕರ ಸೇವಾ ಸಮತಿ ಅಧ್ಯಕ್ಷ ಬಸವರಾಜ ಬಂಕದ ಮಾತನಾಡಿ, ಕೂಡಿರುವ ನಮ್ಮನ್ನು ಒಡೆದಾಳಲು ಸರ್ಕಾರ ಮುಂದಾಗಿದೆ. ಪಕ್ಷಾತೀತವಾಗಿ ವರದಿ ಜಾರಿಗೆ ವಿರೋಧವಿದ್ದು ಸರ್ಕಾರ ನಿರ್ಧಾರಕ್ಕೆ ಪ್ರತಿಭಟಿಸಿ ವಿರೋಧಿಸೋಣ ಎಂದರು.ಮುಖಂಡ ಪ್ರಶಾಂತ ರಾಠೋಡ, ಸಿದ್ದರಾಮಯ್ಯ ಸರ್ಕಾರದ ಮೇಲಿದ್ದ ಆಶಾಭಾವನೆ ಹುಸಿಗೊಂಡಿದೆ. ರಾಜಕಾರಣ ಮುಖ್ಯವಲ್ಲ, ಸಮುದಾಯದ ಅಭಿವೃದ್ಧಿ ಮುಖ್ಯವಾಗಿದೆ. ಹೀಗಾಗಿ ಸರ್ಕಾರದ ವಿರುದ್ಧ ಉಗ್ರವಾದ ಹೋರಾಟ ಅನಿವಾರ್ಯ ಎಂದರು.
ತಾಪಂ ಮಾಜಿ ಅಧ್ಯಕ್ಷ ಆರ್.ಕೆ. ಚವ್ಹಾಣ ಮಾತನಾಡಿ, ವರದಿಯಿಂದ ನಮಗೆ ಅನ್ಯಾಯವಾಗಿದೆ. ಹೀಗಾಗಿ ಅನ್ಯಾಯ ಖಂಡಿಸಿ ನಡೆಸುವ ಪ್ರತಿಭಟನೆ ಯಶಸ್ವಿಗೊಳಿಸಲು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.ಮುಖಂಡರಾದ ಮುದಿಯಪ್ಪ ಮುಧೋಳ, ಕುಬೇರ ರಾಠೋಡ, ರವಿ ಭಜಂತ್ರಿ, ಪೀರು ರಾಠೋಡ ಮಾತನಾಡಿದರು. ಶಿವಕುಮಾರ ಜಾಧವ, ರೂಪಲೇಶ ರಾಠೋಡ, ಈಶಪ್ಪ ರಾಠೋಡ, ದುರಗಪ್ಪ ಮುಧೋಳ, ಶ್ರೀನಿವಾಸ ಸಿಪ್ರಿ, ತಿಮ್ಮಣ್ಣ ಮಾಳಗಿಮನಿ, ಮಹಾಂತೇಶ ಪೂಜಾರ ಸೇರಿ ಇತರರು ಇದ್ದರು.
22ರಂದು ಬೃಹತ್ ಪ್ರತಿಭಟನೆರಾಜ್ಯ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಒಳಮೀಸಲಾತಿ ವಿರೋಧಿಸಿ ಇಲ್ಲಿನ ಲಂಬಾಣಿ, ಬೋವಿ, ಕೊರಮ ಹಾಗೂ ಕೊರಚ ಸಮಾಜದ ಮುಖಂಡರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿ ಅ. ೨೧ರ ಗುರುವಾರ ಬೆಳಗ್ಗೆ ೧೦ ಗಂಟೆಗೆ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆಗೆ ನಿರ್ಧಾರ ಕೈಗೊಂಡರು.