ಧರ್ಮ, ನೀತಿ, ಸಿದ್ಧಾಂತ ಕೈಬಿಡದ ನಾಗನಗೌಡರು: ಸಿದ್ಧಗಂಗಾ ಶ್ರೀ

| Published : Jan 29 2025, 01:31 AM IST

ಧರ್ಮ, ನೀತಿ, ಸಿದ್ಧಾಂತ ಕೈಬಿಡದ ನಾಗನಗೌಡರು: ಸಿದ್ಧಗಂಗಾ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

Nagana Gowda never abandoned religion, ethics, and ideology: Siddaganga Sri

-ತುಮಕೂರು ಸಿದ್ಧಗಂಗಾ ಶ್ರೀಗಳ ಸಾನಿಧ್ಯ। ಪ್ರವಾಹೋಪಾದಿಯಲ್ಲಿ ಹರಿದು ಬಂದ ಅಭಿಮಾನಿ ಸಾಗರ । ನಾಗನಗೌಡ ಕಂದಕೂರು ಪುಣ್ಯಸ್ಮರಣೆ

----

ಕನ್ನಡಪ್ರಭ ವಾರ್ತೆ ಯಾದಗಿರಿ

ಕಲ್ಯಾಣ ಕರ್ನಾಟಕ ಭಾಗದ ಹಿರಿಯ ರಾಜಕೀಯ ಮುತ್ಸದ್ದಿ, ನೇರ ನಿಷ್ಠುರವಾದಿ ಗುರುಮಠಕಲ್‌ ಕ್ಷೇತ್ರದ ಮಾಜಿ ಶಾಸಕ ಲಿಂ. ನಾಗನಗೌಡ ಕಂದಕೂರ ಅವರ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮ ಗುರಮಠಕಲ್ ತಾಲೂಕಿನ ಕಂದಕೂರ ಗ್ರಾಮದಲ್ಲಿ ಧಾರ್ಮಿಕ ವಿಧಿ-ವಿಧಾನಗಳ ಮೂಲಕ ಸಾಂಪ್ರದಾಯಿಕವಾಗಿ ನೆರವೇರಿತು.

ಯಾದಗಿರಿ, ಕಲಬುರಗಿ, ರಾಯಚೂರು ಮತ್ತು ಗುರಮಠಕಲ್ ಕ್ಷೇತ್ರದಿಂದ ನಾಗನಗೌಡರ ಅಭಿಮಾನಿಗಳು ಕಂದಕೂರ ಅವರ ತೋಟಕ್ಕೆ ಅಭಿಮಾನಿಗಳು, ಬೆಂಬಲಿಗರ -ಜನಸಾಗರ ಹರಿದು ಬಂದಿತ್ತು. ಕಂದಕೂರ ಅವರ ಪಾವನ ಸಮಾಧಿಗೆ ಕಂದಕೂರ ಕುಟುಂಬಸ್ಥರಿಂದ ವಿವಿಧ ಮಠಾಧೀಶರ ನೇತೃತ್ವದಲ್ಲಿ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ ನೆರವೇರಿತು.

ಮಧ್ಯಾಹ್ನ ತ್ರಿವಿಧ ದಾಸೋಹಿ ಸಿದ್ದಗಂಗಾ ಕ್ಷೇತ್ರದ ಪೀಠಾಧಿಪತಿ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು, ಲಿಂ. ನಾಗನಗೌಡ ಕಂದಕೂರ ಅವರ ಸಮಾಧಿಗೆ ಮಹಾ ಮಂಗಳಾರತಿ ಜರುಗಿಸಿ, ಧಾರ್ಮಿಕ ಸಭೆಯ ಸಾನಿಧ್ಯ ವಹಿಸಿ ಹಿತೋಪದೇಶ ನೀಡಿದರು.

"ರಾಜಕಾರಣದಲ್ಲಿದ್ದರೂ ಧರ್ಮ, ನೀತಿ ಮತ್ತು ಸಿದ್ಧಾಂತವನ್ನು ನಾಗನಗೌಡರು ಎಂದಿಗೂ ಬಿಡಲಿಲ್ಲ. ಮಂತ್ರಿ ಪದವಿ ಕೊಡುತ್ತೇವೆ ಎಂದರೆ ಸಾಕು ಕ್ಷಣಾರ್ಧದಲ್ಲಿ ಪಕ್ಷಾಂತರ ಮಾಡುವ ರಾಜಕಾರಣಿಗಳನ್ನು ನಾವು ಕಂಡಿದ್ದೇವೆ. ಆದರೆ, ನಾಗನಗೌಡರು ಒಂದೇ ಪಕ್ಷದಲ್ಲಿ ಕೊನೆಯುಸಿರು ಇರುವವರೆಗೂ ಇದ್ದು ಪಕ್ಷನಿಷ್ಠೆ ಹೊಂದಿದ್ದರು ಎಂದು ಹೇಳಿದರು. ಬದುಕಿನುದ್ದಕ್ಕೂ ನಾಗನಗೌಡರು ನೋವನ್ನುಂಡೇ ರಾಜಕೀಯ ಮಾಡಿದವರು. ತನ್ನದಲ್ಲದ ತಪ್ಪಿಗೆ ಅನೇಕ ಕೇಸ್ ಗಳನ್ನು ಮೈಮೇಲೆ‌ ಹಾಕಿಕೊಂಡು ಜನರ ಸೇವೆ ಮಾಡಿಕೊಂಡು ಬಂದಿದ್ದಾರೆ. ಕ್ಷೇತ್ರಕ್ಕೆ ಹಲವು ಜನಪರ ಯೋಜನೆ ಜಾರಿಗೆ ತಂದಿದ್ದಾರೆ.. " ಎಂದು ನುಡಿದರು.

ಶಾಸಕ ಶರಣಗೌಡರಿಗೆ ಛಲಗಾರಿಕೆ ಹೆಚ್ಚಿದೆ. ನಾನು ಈ ಕಾರ್ಯಕ್ರಮಕ್ಕೆ ಬರಲು ಆಗೋಲ್ಲ ಎಂದು ಹೇಳಿದರೂ ನಮ್ಮ‌ ಮನವೊಲಿಸಿ, ಇಲ್ಲಿಯವರೆಗೂ ಕರೆಸಿದ್ದಾರೆ. ನಿಜಕ್ಕೂ ಅವರ ನಿಷ್ಠೆ ಮೆಚ್ಚುವಂತಹುದ್ದು. ನಾಗನಗೌಡರ ಪುಣ್ಯಸ್ಮರಣೆ ಒಂದು ನೆಪ, ಈ ಮೂಲಕ ಒಂದು ಧರ್ಮಸಮ್ಮತವಾದ ಸಮಾರಂಭ ನೆರವೇರಿಸಿದ್ದಾರೆ ಎಂದರು.

ಶಾಸಕ ಶರಣಗೌಡ ಕಂದಕೂರ ಮಾತನಾಡಿ, ಜೀವನದ 75 ವರ್ಷಕ್ಕೆ ನಮ್ಮ ತಂದೆ ಶಾಸಕರಾದರು. ಜೀವನದಲ್ಲಿ ಅವರು ಏನಾದರೂ ಗಳಿಸಿದ್ದಾರೆ ಎಂದರೆ ಅದು ಜನರ ಪ್ರೀತಿ ಮತ್ತು ವಿಶ್ವಾಸ. ಪೂಜ್ಯರ ಆಶಿರ್ವಾದ ಮತ್ತು ಕಂದಕೂರ ಅಭಿಮಾನಿಗಳ ನಂಬಿಕೆ ಗಳಿಸಿದ್ದಾರೆ. ಮುಂದಿನ ದಿನಗಳಲ್ಲಿ ನಾಗನಗೌಡ ಕಂದಕೂರ ಫೌಂಡೇಶನ್ ನಿಂದ ಜೀವಿತದ ಕೊನೆವರೆಗೂ ಸಮಾಜಮುಖಿ ಕೆಲಸ ಮಾಡುತ್ತೇವೆ ಎಂದರು.

ಹೆಡಗಿಮದ್ರಾದ ಶಾಂತಮಲ್ಲಿಕಾರ್ಜುನ ಪಂಡಿತಾರಾಧ್ಯ ಶ್ರೀ ಮಾತನಾಡಿ, ನಾಗನಗೌಡರು ಎಂದಿಗೂ ಪದವಿ, ಪಟ್ಟಕ್ಕಾಗಿ ಆಸೆ ಪಟ್ಟವರಲ್ಲ. ಅವರು ಅಧಿಕಾರದಲ್ಲಿ, ಇಲ್ಲದಿರಲಿ ತಮ್ಮ ಸಿದ್ಧಾಂತಗಳಿಗೆ ಉಸಿರಾದವರು ಎಂದು ಹೇಳಿದರು.

ಅಬ್ವೆತುಮಕೂರಿನ ಡಾ. ಗಂಗಾಧರ ಸ್ವಾಮಿಗಳು ಮಾತನಾಡಿ, ಕಂದಕೂರ ಮನೆತನ ಅತ್ಯಂತ ಸರಳ ಮತ್ತು ಜನಾನುರಾಗಿಯಾಗಿ ಬೆಳೆದು ಬಂದಿದೆ. ದಿ.ಸದಾಶಿವರಡ್ಡಿ ಕಂದಕೂರ ಅವರು ಸದಾ ಬಡವರ ಬಗ್ಗೆ ಚಿಂತನೆಯುಳ್ಳವರಾಗಿದ್ದರು. ಅದರಂತೆ ನಾಗನಗೌಡ ಮತ್ತು ಶರಣಗೌಡರು ನಡೆದುಕೊಂಡು ಬಂದಿದ್ದರೆಂದರು.

---ಬಾಕ್ಸ್.....

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶರಣರು

ಶ್ರೀ ಶಾಂತವೀರ ಗುರು ಮುರಘಾರಾಜೇಂದ್ರ ಸ್ವಾಮಿ, ಡಾ.ಶಿವಾನಂದ ಮಹಾಸ್ವಾಮಿ ಸೊನ್ನ, ಶ್ರೀ ಶರಭೇಶ್ವರ ಮಹಾಸ್ವಾಮಿ ರಸ್ತಾಪುರ, ಶ್ರೀ ಪಂಚಮ ಸಿದ್ಧಲಿಂಗ ಮಹಾಸ್ವಾಮಿ, ಶ್ರೀ ಕೊಟ್ಟೂರೇಶ್ವರ ಸ್ವಾಮಿ ಯಲ್ಲೇರಿ, ಶ್ರೀ ಶಿವಯೋಗಿ ಶಿವಾಚಾರ್ಯ ತಂಗಡಪಲ್ಲಿ, ಬಸವಯ್ಯ ಶರಣರು ಚರಬಸವೇಶ್ವರ ಸಂಸ್ಥಾನ ಶಹಾಪೂರ, ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಶ್ರೀ ಸೂಗೂರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಶಹಾಪೂರ, ಹುಲಿಜಂತಿಯ ಮಾಳಿಂಗರಾಯ ಸ್ವಾಮಿಗಳು, ಶ್ರೀ ಚನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳು ಕನ್ನೆಕೊಳ್ಳೂರ ಶ್ರೀ ಕ್ಷೀರಲಿಂಗ ಮಹಾಸ್ವಾಮಿಗಳು ಚೇಗುಂಟಾ, ಶ್ರೀ ಗುರುಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಸಂಸ್ಥಾನ ಮಠ ಕಡೆಚೂರ, ಶ್ರೀ ನಾಗಪಯ್ಯ ಮಹಾಸ್ಥಾಮಿಗಳು, ಶ್ರೀ ವೀರೇಶ್ವರ ಮಹಾಸ್ವಾಮಿಗಳು ದಾಸಬಾಳ ಮಠ, ಶ್ರೀ ಹಿರಗಪ್ಪ ತಾತನವರು, ಭೋಜಲಿಂಗೇಶ್ವರ ಮಠ ಸ್ವಾಮಿಗಳು ಇದ್ದರು.

---ಬಾಕ್ಸ್‌:2---

* ಬಾಳೆಎಲೆಯಲ್ಲಿ ಪ್ರಸಾದ

ಕಾರ್ಯಕ್ರಮಕ್ಕೆ ಯಾದಗಿರಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಬಂದಿದ್ದ ಲಿಂ.ನಾಗನಗೌಡರ ಅಭಿಮಾನಿಗಳಿಗೆ ಬಾಳೆಲೆಯಲ್ಲಿ ಊಟ ಬಡಿಸಿದ್ದು ವಿಶೇಷ ಎನಿಸಿತು. ಬಿಸಿಬಿಸಿ ಹೋಳಿಗೆ, ಮೋತಿಚೂರು ಲಾಡು, ಹುಗ್ಗಿ, ತುಪ್ಪ, ಪೂರಿ, ಅನ್ನ, ಸಾಂಬರ್ ಹೀಗೆ ಹಲವು ಬಗೆಯ ಭಕ್ಷ್ಯಗಳನ್ನು ಸಿದ್ಧಪಡಿಸಲಾಗಿತ್ತು. ಎಲ್ಲೂ ಕೊಂಚವೂ ಲೋಪವಾಗದಂತೆ ಸ್ವಯಂ ಸೇವಕರು ಅಚ್ಚುಕಟ್ಟಾಗಿ ಅಡುಗೆ ಬಡಿಸಿದರು.

---ಬಾಕ್ಸ್‌:3---

ಬೃಹತ್ ರಕ್ತದಾನ ಶಿಬಿರ

ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲೇ ಮಾದರಿ ಎನಿಸುವ ಬೃಹತ್ ರಕ್ತದಾನ ಶಿಬಿರ ಜರುಗಿತು. ನಾಡಿನ ನಾನಾ ಭಾಗದಿಂದ ಆಗಮಿಸಿದ ಯುವಪಡೆ ಶಾಸಕ ಶರಣಗೌಡ ಕಂದಕೂರ ಅವರ ಕರೆಯ ಮೇರೆಗೆ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡುವ ಮೂಲಕ ನಾಡಿಗೆ ವಿಶೇಷ ಸಂದೇಶ ನೀಡಿದರು. ಎರಡು ಸಾವಿರಿಂದ ಸಂಗ್ರಹವಾದ ರಕ್ತವನ್ನು ಯಾದಗಿರಿ ಸರ್ಕಾರಿ ಮೆಡಿಕಲ್‌ ಕಾಲೇಜು ಮತ್ತು ರೆಡ್ ಕ್ರಾಸ್ ರಕ್ತನಿಧಿ ಘಟಕಕ್ಕೆ ನೀಡಲಾಯಿತು.

ಪಂಚ ಗೋದಾನ: ದಾನಗಳಲ್ಲಿ ಅನ್ನದಾನ, ರಕ್ತದಾನ ಮತ್ತು ಗೋದಾನ ಸರ್ವಶ್ರೇಷ್ಠವಾಗಿದ್ದು, ಒಂದೇ ಕಾರ್ಯಕ್ರಮದಡಿ ಈ ಮೂರು ದಾನಗಳನ್ನು ಕಂದಕೂರ ಪರಿವಾರ ನೀಡುವ ಮೂಲಕ ಜನಮಾನಸದಲ್ಲಿ ಉಳಿಯುವಂತೆ ಮಾಡಿದ್ದಾರೆ. ಸಿದ್ದಗಂಗೆಯ ಪೂಜ್ಯ ಶ್ರೀ ಸಿದ್ದಲಿಂಗೇಶ್ಚರ ಸ್ವಾಮೀಜಿಗಳ ಅಮೃತ ಹಸ್ತದಿಂದ ನಾಗನಗೌಡರ ಸಮಾಧಿಗೆ ಮಹಾ ಮಂಗಳಾರತಿ ಜರುಗಿಸಿ, ಪಂಚ ಗೋದಾನ ನೆರವೇರಿಸಿದರು. ಇದೇ ವೇಳೆ ಗುರಮಠಕಲ್ ಕ್ಷೇತ್ರದ ಎಲ್ಲ ಸರ್ಕಾರಿ ಶಾಲೆಗಳಿಗೆ 16 ಸಾವಿರ ಬಿಸಿಯೂಟಕ್ಕಾಗಿ ತಟ್ಟೆ ಮತ್ತು ಲೋಟಗಳನ್ನು ವಿತರಿಸಲಾಯಿತು.

ಶರಣಗೌಡ ಮುಖ್ಯಮಂತ್ರಿಯಾಗಲಿ:ದಿ.ನಾಗನಗೌಡರು ಇಂದು ಲೌಕಿಕವಾದ ಜೀವನದಲ್ಲಿ ಭೌತಿಕವಾಗಿ ಇಲ್ಲ. ಆದರೆ, ಆವರ ಪುತ್ರ ಶರಣಗೌಡ ಕಂದಕೂರು ನಮ್ಮೊಂದಿಗಿದ್ದಾರೆ. ತಂದೆ ಮತ್ತು ದೊಡ್ಡಪ್ಪನವರನ್ನು ಗಾಡಫಾದರ್ ಮಾಡಿಕೊಂಡು ಸಣ್ಣ ವಯಸ್ಸಿನಲ್ಲಿ ಎತ್ತರಕ್ಕೆ ಬೆಳೆದಿದ್ದಾರೆ. ಗುರಮಠಕಲ್ ಕ್ಷೇತ್ರದಿಂದ ಮಲ್ಲಿಕಾರ್ಜುನ ಖರ್ಗೆ ಇಂದು ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷರಾಗಿದ್ದು ಶರಣಗೌಡ ಕೇವಲ ಸಚಿವರಲ್ಲ, ಮುಖ್ಯಮಂತ್ರಿಗಳಾಗಲಿ ಎಂದು ಆಶಿಸಿದರು.

-

ಕೋಟ್-1 : ಅಯುಷ್ಯ ತೀರುವ ಮುನ್ನ ಸಚ್ಚಾರಿತ್ರ್ಯವಾಗಿ ಬಾಳಬೇಕು. ಶಾಸಕ ಶರಣಗೌಡ ಕಂದಕೂರಗೆ ಮುಂದೆ ಉತ್ತಮ ಭವಿಷ್ಯ ಇದೆ. -

ಶ್ರೀ ಸಿದ್ದಲಿಂಗ‌ ಮಹಾಸ್ವಾಮಿಗಳು, ಸಿದ್ದಗಂಗಾ ಪೀಠಾಧಿಪತಿಗಳು, ತುಮಕೂರು.

----

28ವೈಡಿಆರ್‌9 : ಗುರುಮಠಕಲ್‌ ಶಾಸಕ ಶರಣಗೌಡ ಕಂದಕೂರ ಅವರನ್ನು ಆಶೀರ್ವದಿಸುತ್ತಿರುವ ತುಮಕೂರು ಸಿದ್ಧಗಂಗಾ ಶ್ರೀಗಳು.

----

28ವೈಡಿಆರ್‌10 : ಮಾಜಿ ಶಾಸಕ ಲಿಂ. ನಾಗನಗೌಡ ಕಂದಕೂರ ಅವರ ಪುಣ್ಮಸ್ಮರಣೆಗೆ ಆಗಮಿಸಿದ್ದ ತುಮಕೂರು ಸಿದ್ಧಗಂಗಾ ಶ್ರೀಗಳು ಸೇರಿದಂತೆ ಅನೇಕ ಮಠಾಧೀಶರು ನಾಗನಗೌಡ ಪುತ್ರ, ಶಾಸಕ ಶರಣಗೌಡರಿಗೆ ಹರಸಿ ಹಾರೈಸಿದರು.

----

28ವೈಡಿಆರ್‌11 : ಮಾಜಿ ಶಾಸಕ ಲಿಂ. ನಾಗನಗೌಡ ಕಂದಕೂರ ಅವರ ಪುಣ್ಮಸ್ಮರಣೆಗೆ ಆಗಮಿಸಿದ್ದ ತುಮಕೂರು ಸಿದ್ಧಗಂಗಾ ಶ್ರೀಗಳು ನಾಗನಗೌಡ ಸಮಾಧಿ ಸ್ಮಾರಕ ಸ್ಥಳಕ್ಕೆ ಭೇಟಿ ನೀಡಿ, ಪುಷ್ಪಾರ್ಚನೆಗೈದರು.