ಸಾರಾಂಶ
ರೈತರು ಮಾರುಕಟ್ಟೆಯಲ್ಲಿ ಹೆಚ್ಚಿನ ಮೌಲ್ಯ ಪಡೆಯಲು ವಿಫಲರಾದಾಗ ರಾಗಿ ಮತ್ತು ಹಾಲಿನ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡಿ, ಹೆಚ್ಚಿನ ಆದಾಯ ಗಳಿಸುವುದರ ಜೊತೆಗೆ ತಮ್ಮ ಆರೋಗ್ಯ ವೃದ್ಧಿಸಿಕೊಳ್ಳಬಹುದು. ಹಾಲಿನ ಉತ್ಪನ್ನಗಳ ಮೌಲ್ಯವರ್ಧನೆಯಿಂದ ಆದಾಯಗಳಿಸುವ ಒಂದು ಉದ್ಯಮವನ್ನಾಗಿ ಮಾಡಬಹುದಾಗಿದೆ
ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರಿನ ನಾಗನಹಳ್ಳಿಯ ವಿಸ್ತರಣಾ ಶಿಕ್ಷಣ ಘಟಕದಲ್ಲಿ ರಾಗಿ ಹಾಗೂ ಹಾಲಿನ ಉತ್ಪನ್ನಗಳ ಮೌಲ್ಯವರ್ಧನೆಗಳ ಬಗ್ಗೆ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಶನಿವಾರ ಆಯೋಜಿಸಲಾಗಿತ್ತು.ಈ ವೇಳೆ ಹೈನುಗಾರಿಕೆ ಸಹಾಯಕ ಪ್ರಾಧ್ಯಾಪಕಿ ಡಾ.ಎ. ನಾಗಮಣಿ ಮಾತನಾಡಿ, ಕೃಷಿಯಲ್ಲಿ ಮೌಲ್ಯವರ್ಧನೆಯ ಪ್ರಾಮುಖ್ಯತೆ, ರೈತರ ಆದಾಯ ದ್ವಿಗುಣಗೊಳಿಸುವಲ್ಲಿ ಮೌಲ್ಯವರ್ಧನೆಯ ಪಾತ್ರದ ಕುರಿತು ವಿವರಿಸಿದರು.
ರೈತರು ಮಾರುಕಟ್ಟೆಯಲ್ಲಿ ಹೆಚ್ಚಿನ ಮೌಲ್ಯ ಪಡೆಯಲು ವಿಫಲರಾದಾಗ ರಾಗಿ ಮತ್ತು ಹಾಲಿನ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡಿ, ಹೆಚ್ಚಿನ ಆದಾಯ ಗಳಿಸುವುದರ ಜೊತೆಗೆ ತಮ್ಮ ಆರೋಗ್ಯ ವೃದ್ಧಿಸಿಕೊಳ್ಳಬಹುದು. ಹಾಲಿನ ಉತ್ಪನ್ನಗಳ ಮೌಲ್ಯವರ್ಧನೆಯಿಂದ ಆದಾಯಗಳಿಸುವ ಒಂದು ಉದ್ಯಮವನ್ನಾಗಿ ಮಾಡಬಹುದಾಗಿದೆ ಎಂದು ಅವರು ತಿಳಿಸಿದರು.ನಂತರ ರಾಗಿ ಉತ್ಪನ್ನಗಳಿಂದ ಮೌಲ್ಯವರ್ಧಿತ ಪದಾರ್ಥಗಳಾದ ರಾಗಿ ಲಡ್ಡು, ರಾಗಿ ಬರ್ಫಿ, ರಾಗಿ ಪಕೋಡ, ರಾಗಿ ಚಕ್ಕುಲಿ ಮತ್ತು ಹಾಲಿನ ಉತ್ಪನ್ನಗಳ ಮೌಲ್ಯವರ್ಧನೆ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿ, ಹಾಲಿನ ಉತ್ಪನ್ನಗಳಾದ ಪನ್ನೀರ್, ಕೋವಾ ಹಾಗೂ ಸುವಾಸಿತ ಹಾಲನ್ನು ತಯಾರಿಸಿ ರೈತ ಮಹಿಳೆಯರಿಗೆ ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಟ್ಟರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಕೃಷಿ ಅಧಿಕಾರಿ ಬಿ.ಜೆ. ರಾಜು, ಕಾರ್ಯರ್ತೆ ಅನಿತಾ, ಕ್ಷೇತ್ರ ಸಹಾಯಕ ಆಸೀಫ್ ಪಾಷಾ ಇದ್ದರು.