ಸಾರಾಂಶ
ಚನ್ನಪಟ್ಟಣ: ತಾಲೂಕಿನ ಬಾಣಗಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಗಾಪುರ ಗ್ರಾಮದ ರಸ್ತೆ ಕೆಸರು ಗದ್ದೆಯಾಗಿ ಮಾರ್ಪಟ್ಟು ಜನ ಸಂಚಾರಕ್ಕೆ ಅಡಚಣೆಯಾಗಿದೆ.
ಚನ್ನಪಟ್ಟಣ: ತಾಲೂಕಿನ ಬಾಣಗಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಗಾಪುರ ಗ್ರಾಮದ ರಸ್ತೆ ಕೆಸರು ಗದ್ದೆಯಾಗಿ ಮಾರ್ಪಟ್ಟು ಜನ ಸಂಚಾರಕ್ಕೆ ಅಡಚಣೆಯಾಗಿದೆ.
ಕೋಡಂಬಳ್ಳಿ-ಅಕ್ಕೂರು ರಸ್ತೆಯಿಂದ ನಾಗಾಪುರದ ಮೂಲಕ ಸಾದಾರಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಕೆಸರುಮಯವಾಗಿ ಮಾರ್ಪಟ್ಟಿದೆ. ಪ್ರತಿ ಮಳೆಗಾಲದಲ್ಲಿ ಇದೆ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದರೂ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ರಸ್ತೆ ದುರಸ್ತಿಗೆ ಮಾತ್ರ ಕ್ರಮ ಕೈಗೂಂಡಿಲ್ಲ. ಈ ರಸ್ತೆಯಲ್ಲಿ ಓಡಾಡುವ ಗ್ರಾಮಸ್ಥರು ಕೆಸರಲ್ಲೇ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ವಲ್ಪ ಆಯ ತಪ್ಪಿದರೂ ಕೈಕಾಲು ಮುರಿಯುವುದಂತೂ ಗ್ಯಾರಂಟಿ.ಇನ್ನು ಈ ರಸ್ತೆಯಲ್ಲಿ ವಾಹನ ಚಲಿಸುವ ಚಾಲಕರ ಪಾಡಂತು ಹೇಳತೀರದಾಗಿದೆ. ಇಷ್ಟು ಮಾತ್ರವಲ್ಲವೇ ಅಲ್ಲ. ನಾಗಾಪುರದಲ್ಲಿ ಡೈರಿಗೆ ಹಾಲು ತರುವ ಹೈನುಗಾರರು ಕೆಸರುಮಯ ರಸ್ತೆಗೆ ಹಾಲನ್ನು ಚೆಲ್ಲಿ ತಮ್ಮ ಕೈ-ಕಾಲುಗಳಿಗೆ ಪೆಟ್ಟು ಮಾಡಿಕೊಂಡ ಉದಾಹರಣೆಗಳು ಸಾಕಷ್ಟಿವೆ. ಇನ್ನು ವೃದ್ಧರು ಮತ್ತು ಮಕ್ಕಳು ಮನೆಯಿಂದ ರಸ್ತೆಗೆ ಕಾಲಿಡುವುದೆ ದುಸ್ಥರವಾಗಿದೆ.
ನಾಗಾಪುರದಿಂದ ಸಾದಾರಹಳ್ಳಿಯವರೆಗೆ ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ ಹಣ ಮಂಜೂರಾಗಿದೆ. ಆದರೆ ಗುತ್ತಿಗೆದಾರ ಮಾತ್ರ ಆಗೋಮ್ಮೆ-ಈಗೊಮ್ಮೆ ಒಂದಷ್ಟು ಜಲ್ಲಿ ಗುಡ್ಡೆ ಹಾಕಿ ರಸ್ತೆ ಅಭಿವೃದ್ಧಿ ಮಾಡದೆ ಕಾಲಹರಣ ಮಾಡುತ್ತಿದ್ದಾರೆ. ಇಲ್ಲಿ ನಿತ್ಯ ಓಡಾಡುವ ಜನ ಮಾತ್ರ ನಿತ್ಯವೂ ನರಕಯಾತನೆ ಪಡುವಂತಾಗಿದೆ. ನಾಗಾಪುರ ಗ್ರಾಮದ ಉದ್ದಕ್ಕೂ ಕೆಸರು ಗುಂಡಿಯಲ್ಲಿ ನೀರು ತುಂಬಿರುವುದರಿಂದ ಗ್ರಾಮದಲ್ಲಿ ಸಾಂಕ್ರಾಮಿಕ ರೋಗದ ಭೀತಿಯೂ ಎದುರಾಗಿದೆ.ನಾಗಾಪುರದ ಮೂಲಕ ಸಾದಾರಹಳ್ಳಿಗೆ ಹೋಗಲು ಈ ದಾರಿಯನ್ನೇ ಇಲ್ಲಿನ ಸುತ್ತಮುತ್ತಲ ಜನತೆ ಆಶ್ರಯಿಸುತ್ತಾರೆ. ರಾಸುಗಳಿಗೆ ಮೇವು ತರಲು ಈ ರಸ್ತೆಗೆ ಹೊಂದಿಕೊಂಡಂತೆ ಇರುವ ಜಮೀನುಗಳ ಮಾಲೀಕರು ಕೂಡ ಸೈಕಲ್ ಬೈಕ್ ಗಳ ಮೂಲಕ ಸಂಚರಿಸಲಾಗುತ್ತಿಲ್ಲ.
ಈಗ ಈ ರಸ್ತೆ ಅಧ್ವಾನಗೊಂಡಿರುವುದರಿಂದ ಅಕ್ಕೂರು ಗ್ರಾಮವನ್ನು ಬಳಸಿಕೊಂಡು ಹೋಗಬೇಕಾದ ಸಂದರ್ಭ ಬಂದಿದೆ. ತಕ್ಷಣವೇ ಈ ರಸ್ತೆಯನ್ನು ದುರಸ್ತಿಪಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡದಿದ್ದಲ್ಲಿ ಗ್ರಾಮಸ್ಥರು ಗ್ರಾಪಂ ಹಾಗೂ ತಾಲೂಕು ಆಡಳಿತದ ವಿರುದ್ಧ ಪ್ರತಿಭಟನೆ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.ಪೊಟೋ೨೨ಸಿಪಿಟಿ೨: ಚನ್ನಪಟ್ಟಣ ತಾಲೂಕಿನ ಬಾಣಗಹಳ್ಳಿ ಗ್ರಾಪಂ ವ್ಯಾಪ್ತಿಯ ನಾಗಪುರ ರಸ್ತೆ ದುಸ್ಥಿತಿ.