ನಾಗರ ಅಮವಾಸ್ಯೆ: ದೇವಸ್ಥಾನಗಳಲ್ಲಿ ಭಕ್ತರ ದಂಡು

| Published : Aug 05 2024, 12:32 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಆಲಮಟ್ಟಿ: ಭಾನುವಾರ ನಾಗರ ಅಮವಾಸ್ಯೆಯ ನಿಮಿತ್ತ ಆಲಮಟ್ಟಿ ಸುತ್ತಮುತ್ತಲಿನ ವಿವಿಧ ದೇವರ ದರ್ಶನಕ್ಕೆ ಭಕ್ತರ ದಂಡೇ ಹರಿದು ಬಂದಿತು. ಯಲಗೂರದ ಯಲಗೂರೇಶ್ವರ, ಚಂದ್ರಗಿರಿಯ ಚಂದ್ರಮ್ಮ ದೇವಿ, ಯಲ್ಲಮ್ಮನ ಬೂದಿಹಾಳದ ಯಲ್ಲಮ್ಮ ದೇವಸ್ಥಾನಗಳಲ್ಲಿ ಭಾನುವಾರ ಸಹಸ್ರಾರು ಸಂಖ್ಯೆಯ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಯಲಗೂರದಲ್ಲಂತೂ ಭಕ್ತರ ಸಂಖ್ಯೆ ಅಧಿಕವಾಗಿತ್ತು.

ಕನ್ನಡಪ್ರಭ ವಾರ್ತೆ ಆಲಮಟ್ಟಿ: ಭಾನುವಾರ ನಾಗರ ಅಮವಾಸ್ಯೆಯ ನಿಮಿತ್ತ ಆಲಮಟ್ಟಿ ಸುತ್ತಮುತ್ತಲಿನ ವಿವಿಧ ದೇವರ ದರ್ಶನಕ್ಕೆ ಭಕ್ತರ ದಂಡೇ ಹರಿದು ಬಂದಿತು. ಯಲಗೂರದ ಯಲಗೂರೇಶ್ವರ, ಚಂದ್ರಗಿರಿಯ ಚಂದ್ರಮ್ಮ ದೇವಿ, ಯಲ್ಲಮ್ಮನ ಬೂದಿಹಾಳದ ಯಲ್ಲಮ್ಮ ದೇವಸ್ಥಾನಗಳಲ್ಲಿ ಭಾನುವಾರ ಸಹಸ್ರಾರು ಸಂಖ್ಯೆಯ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಯಲಗೂರದಲ್ಲಂತೂ ಭಕ್ತರ ಸಂಖ್ಯೆ ಅಧಿಕವಾಗಿತ್ತು. ಸುಲಭ ಸಂಚಾರ ಹಾಗೂ ದರ್ಶನದ ವ್ಯವಸ್ಥೆ ಕಲ್ಪಿಸಬೇಕಿದ್ದ ಪೊಲೀಸರು ಇಲ್ಲದ್ದರಿಂದ ವಾಹನ ಸಂಚಾರ ಕೂಡ ಅಸ್ತವ್ಯಸ್ಥಗೊಂಡಿತ್ತು. ನಸುಕಿನ ಜಾವದಿಂದಲೇ ಯಲಗೂರಕ್ಕೆ ಬರುವ ಭಕ್ತಾದಿಗಳ ಸಂಖ್ಯೆ ಹೆಚ್ಚಾಗಿತ್ತು. ಆಲಮಟ್ಟಿ ಹಾಗೂ ಯಲಗೂರದ ಬಳಿ ಕೃಷ್ಣಾ ನದಿ ತೀರದಲ್ಲಿ ಸ್ನಾನ ಮಾಡಿ, ಭಕ್ತಾದಿಗಳು ದೇವರ ದರ್ಶನ ಪಡೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಶಕ್ತಿ ದೇವತೆಗಳಾದ ಚಂದ್ರಮ್ಮಾ ದೇವಿ, ಯಲ್ಲಮ್ಮದೇವಿಯ ದರ್ಶನಕ್ಕೆ ಜನಜಂಗುಳಿ ಸೇರಿತ್ತು. ಎಲ್ಲಾ ದೇವಸ್ಥಾನಗಳ ಬಳಿಯೂ ತೆಂಗಿನಕಾಯಿ, ಹೂವು, ಕಲ್ಲು ಸಕ್ಕರೆ, ಕರ್ಪೂರ ಪೂಜಾ ಸಾಮಗ್ರಿಗಳ ವ್ಯಾಪಾರ ಜೋರಾಗಿತ್ತು. ವಿವಿಧ ಕಡೆಗಳಲ್ಲಿ ಭಕ್ತರು ದೀಡ ನಮಸ್ಕಾರ ಹಾಕುವ ಮೂಲಕ ಭಕ್ತಿ ಸಮರ್ಪಿಸಿದರು.ಯಲಗೂರ ಹನುಮಾನನ ದರ್ಶನಕ್ಕೆ ಬಂದ ಭಕ್ತಾದಿಗಳಿಗೆ ಭಾನುವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ನಿರಂತರ ಅನ್ನಪ್ರಸಾದದ ವ್ಯವಸ್ಥೆ ಇತ್ತು. ಭಾನುವಾರ 8 ರಿಂದ 10 ಸಾವಿರ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎಂದು ಶ್ರೀ ಯಲಗೂರೇಶ್ವರ ಅನ್ನದಾಸೋಹ ಟ್ರಸ್ಟ್ ಕಮಿಟಿಯ ಅಧ್ಯಕ್ಷ ಶ್ಯಾಮ ಪಾತರದ ತಿಳಿಸಿದರು.