ಸಾರಾಂಶ
ಶ್ರಾವಣ ಮಾಸದ ಮೊದಲ ಹಬ್ಬ ನಾಗರಪಂಚಮಿಯನ್ನು ನಗರದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಭಕ್ತರು ಶಿವ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ನಾಗರಕಲ್ಲು, ಹುತ್ತಕ್ಕೆ ಹಾಲೆರೆದು ಪ್ರಾರ್ಥಿಸಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಶ್ರಾವಣ ಮಾಸದ ಮೊದಲ ಹಬ್ಬ ನಾಗರಪಂಚಮಿಯನ್ನು ನಗರದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಭಕ್ತರು ಶಿವ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ನಾಗರಕಲ್ಲು, ಹುತ್ತಕ್ಕೆ ಹಾಲೆರೆದು ಪ್ರಾರ್ಥಿಸಿದರು.ಮಲ್ಲೇಶ್ವರದ ಕಾಡು ಮಲ್ಲಿಕಾರ್ಜುನ ದೇವಾಲಯ, ಸುಬ್ರಹ್ಮಣ್ಯ ದೇವಸ್ಥಾನ, ಮಾಗಡಿ ರಸ್ತೆ ಅಂಗಳಾ ಪರಮೇಶ್ವರಿ, ಚಾಮರಾಜಪೇಟೆ ರಾಮೇಶ್ವರ ದೇವಸ್ಥಾನ, ಕೆಂಗೇರಿ ಮುಕ್ತಿನಾಗ, ಗವಿಪುರಂ ಮಹಾದೇಶ್ವರ ದೇವಸ್ಥಾನ ಸೇರಿ ಹಲವು ದೇವಸ್ಥಾನಗಳಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪ್ರಾರ್ಥನೆ ಸಲ್ಲಿಸಿದರು. ಮಡಿಯುಟ್ಟು, ಉಪವಾಸದಿಂದ ಲಾಡು ನೈವೇದ್ಯ ಸಹಿತ ನಾಗ ದೇವರನ್ನು ಆರಾಧಿಸುವ ಸಂಪ್ರದಾಯ ನೆರವೇರಿಸಿದರು. ಜೊತೆಗೆ ಅಣ್ಣ-ತಂಗಿ ಹಬ್ಬವೆಂದೂ ಹಲವರು ಆಚರಿಸಿದರು.
ಸಂಜಯನಗರದಲ್ಲಿ ನಾಗಸಂಪದ ಟ್ರಸ್ಟ್‌ನಿಂದ ನಾಗರಪಂಚಮಿ ಮಹೋತ್ಸವ ಆಚರಿಸಲಾಯಿತು. ಅದರಂತೆ ಹಲವು ಧಾರ್ಮಿಕ ಸಂಸ್ಥೆಗಳು ಹಬ್ಬದ ಪ್ರಯುಕ್ತ ವಿಶೇಷ ಆಚರಣೆ ಏರ್ಪಡಿಸಿದ್ದವು. ಘಾಟಿ ಸುಬ್ರಹ್ಮಣ್ಯ ಸೇರಿ ಹಲವು ಕ್ಷೇತ್ರಗಳಿಗೆ ಜನತೆ ತೆರಳಿ ಪೂಜೆ, ಹರಕೆ ಸಲ್ಲಿಸಿದರು.ಶುಕ್ಲ ಪಕ್ಷದ ಐದನೇ ದಿನ ಆಚರಿಸಲಾಗುವ ನಾಗರಪಂಚಮಿ ವಿಶೇಷವಾಗಿ ನುಚ್ಚಿನುಂಡೆ, ಗುಳ್ಳಡಿಕೆ, ಎಳ್ಳುಂಡೆ, ಶೇಂಗಾ ಉಂಡೆ, ಪುರಿ ಉಂಡೆ ಹೀಗೆ ನಾನಾ ಸಿಹಿ ತಿನಿಸುಗಳನ್ನು ಮಾಡಿ ದೇವರಿಗೆ ನೈವೇದ್ಯ ಅರ್ಪಿಸಿದರು.
ನಾಗರಪಂಚಮಿಯೊಂದಿಗೆ ಆರಂಭವಾಗಿ ರಕ್ಷಾಬಂಧನ, ವರಮಹಾಲಕ್ಷ್ಮಿ, ಶ್ರೀ ಕೃಷ್ಣ ಜನ್ಮಾಷ್ಟಮಿ, ಗೌರಿ ಹಬ್ಬ, ಗಣೇಶ ಚತುರ್ಥಿ, ದಸರಾ, ದೀಪಾವಳಿ ಹೀಗೆ ಸಾಲು ಸಾಲು ಹಬ್ಬಗಳು ಬರಲಿವೆ.