ಸಾರಾಂಶ
ಬೆಂಗಳೂರು: ನಾಗರಬಾವಿ 2ನೇ ಹಂತದಲ್ಲಿರುವ ನಾಗರಬಾವಿ ಬ್ರಿಡ್ಜ್‌ನಿಂದ ಸುಮ್ಮನಹಳ್ಳಿ ಕಡೆಗೆ ಹೋಗುವ ಸುಮಾರು 2 ಕಿ.ಮೀ ರಸ್ತೆ ಸರ್ವೀಸ್ ರಸ್ತೆ ಅವ್ಯವಸ್ಥೆಯಿಂದ ವಾಹನ ಸವಾರರು ಪರದಾಡುವಂತ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಸುಮನಹಳ್ಳಿ ಕಡೆಯಿಂದ ನಾಗರಬಾವಿ ಬ್ರಿಡ್ಜ್ ಕಡೆಗೆ ಸಾಗುವ ರಿಂಗ್ ರಸ್ತೆಗೆ ಹೊಂದಿಕೊಂಡಿರುವ ಸರ್ವೀಸ್ ರಸ್ತೆಯಲ್ಲಿ ಪೈಪ್‌ಲೈನ್ ಅಳವಡಿಸಲು ಕಳೆದ ನಾಲ್ಕು ತಿಂಗಳ ಹಿಂದೆ ಭೂಮಿ ಅಗೆಯಲಾಗಿತ್ತು. ನಂತರ ಕಾಮಗಾರಿ ಮುಗಿದ ಬಳಿಕ ಅಗೆದ ಗುಂಡಿಯನ್ನು ಮಣ್ಣಿನಿಂದ ಮುಚ್ಚಿ, ಡಾಂಬರೀಕರಣ ಮಾಡಬೇಕಾದವರು ಜೆಲ್ಲಿಕಲ್ಲು ಹಾಕಿ ರಸ್ತೆಯನ್ನೇ ಮರೆತುಬಿಟ್ಟಿದ್ದಾರೆ. ಇದರಿಂದ ನಿತ್ಯವೂ ಬೈಕ್ ಸವಾರರು ಬಿದ್ದು ಗಾಯ ಮಾಡಿಕೊಳ್ಳುತ್ತಿದ್ದರೂ ಕೇಳುವವರೇ ಇಲ್ಲವಾಗಿದೆ.
ಸುಮನಹಳ್ಳಿ ಮೇಲ್ಸೇತುವೆ ಮಾರ್ಗವು ಮೈಸೂರು ರಸ್ತೆಗೆ (ನಾಯಂಡಹಳ್ಳಿ) ಸಂಪರ್ಕ ಕಲ್ಪಿಸುವ ವರ್ತುಲ ರಸ್ತೆಯಾಗಿದೆ. ಪ್ರತಿ ದಿನವೂ ಸಾವಿರಾರು ಸಂಖ್ಯೆಯಲ್ಲಿ ಸರಕು ಸಾಗಣೆ ವಾಹನಗಳು (ಹೆವೀ ವೆಹಿಕಲ್) ಸಂಚರಿಸುತ್ತವೆ. ಇದೇ ರಸ್ತೆಯಲ್ಲಿ ಮಕ್ಕಳನ್ನು ದ್ವಿಚಕ್ರದಲ್ಲಿ ಶಾಲೆ ಕರೆದುಕೊಂಡು ಹೋಗುವ ಪೋಷಕರ ಸಂಖ್ಯೆಯೂ ಕಡಿಮೆಯಿಲ್ಲ. ನಮ್ಮೂರತಿಂಡಿ ಹೋಟೆಲ್ ಸಮೀಪದಿಂದ ರವಿ ಜಿಮ್ ವರೆಗೆ ಸುಮಾರು ಒಂದೂವರೆ ಕಿ.ಮೀ ಸರ್ವೀಸ್ ರಸ್ತೆಯನ್ನು ಅಗೆದು ಜೆಲ್ಲಿಕಲ್ಲಿನಿಂದ ಮುಚ್ಚಿದ್ದು ಡಾಂಬರೀಕರಣವಾಗಿಲ್ಲ.
ಈ ರಸ್ತೆಯಲ್ಲಿ ಹೆವೀ ವೆಹಿಕಲ್‌ಗಳು ಸಂಚರಿಸುವಾಗ ಬೈಕ್ ಸವಾರರು, ಅನಿವಾರ್ಯವಾಗಿ ರಸ್ತೆಯ ಇಕ್ಕೆಲುಗಳಲ್ಲಿ ಹೋಗಿ ಸಂಚರಿಸಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ದ್ವಿಚಕ್ರ ವಾಹನಗಳು ವರ್ತುಲ ರಸ್ತೆಯ ತುದಿಗೆ ಸಾಗುತ್ತಿದ್ದಂತೆ ಜೆಲ್ಲಿ ಕಲ್ಲಿನ ಮೇಲೆ ಬಿದ್ದು ಗಾಯ ಮಾಡಿಕೊಂಡ ಅನೇಕ ಉದಾಹರಣೆಗಳು ಇವೆ. ಸ್ಥಳೀಯರು ಈ ಬಗ್ಗೆ ಸುಮನಹಳ್ಳಿ ಮೇಲ್ಸೇತುವೆ ಉಸ್ತುವಾರಿ ಹೊತ್ತಿರುವ ಬಿಡಿಎಗೆ ಈ ಬಗ್ಗೆ ಹಲವು ಬಾರಿ ಮನವಿ ಮಾಡಿಕೊಂಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಇಷ್ಟೇ ಅಲ್ಲ, ನಮ್ಮೂರ ತಿಂಡಿ ಹೋಟೆಲ್‌ನಿಂದ ನಾಗರಬಾವಿ ಬ್ರಿಡ್ಜ್ ಕಡೆಗೆ ಸಾಗುವ ರಸ್ತೆಯ ಎಡ ಬದಿಯ 800 ಮೀಟರ್ ಸರ್ವೀಸ್ ರಸ್ತೆಯ ಹಣೆಬರಹವು ಇದೇ ಆಗಿದೆ. ಇಲ್ಲೂ ಕೂಡ ಪೈಪ್‌ಲೈನ್‌ಗೆಂದು ಅಗೆದಿದ್ದು, ಸರಿಯಾಗಿ ಮುಚ್ಚಿಲ್ಲ. ಜೆಲ್ಲಿ ಹಾಕಿದ್ದು ಬಿಟ್ಟರೆ ಡಾಂಬರೀಕರಣ ಮಾಡಿಲ್ಲ. ಸೇತುವೆ ಮತ್ತು ಅಕ್ಕಪಕ್ಕದ ಸರ್ವಿಸ್ ರಸ್ತೆ ನಿರ್ವಹಣೆ ಬಿಡಿಎ ವ್ಯಾಪ್ತಿಗೆ ಬರುತ್ತದೆಯಾದರೂ, ದುರಸ್ತಿಗೆ ಕ್ರಮಕೈಗೊಳ್ಳದ ಬಿಡಿಎ ಅಧಿಕಾರಿಗಳು ಇತ್ತ ತಲೆ ಹಾಕಿಲ್ಲ ಎಂದು ಸ್ಥಳೀಯರಾದ ವೆಂಕಟರಾಮು ಕಡಿಕಾರಿದ್ದಾರೆ. ಕಂಗೆಡಿಸುತ್ತಿರುವ ಧೂಳು
ರಸ್ತೆ ದುರಸ್ತಿಯಾಗದ ಕಾರಣ, ಇಡೀ ರಸ್ತೆ ಮಾತ್ರವಲ್ಲ ಅಕ್ಕಪಕ್ಕದ ಬಡಾವಣೆಗೂ ಇಲ್ಲಿನ ಧೂಳು ನುಗ್ಗುತ್ತಿರುವುದು ಸ್ಥಳೀಯರನ್ನು ಕೆರಳಿಸುತ್ತಿದೆ. ಈ ರಸ್ತೆಯಲ್ಲಿ ಸರಕುಸಾಗಣೆ ವಾಹನಗಳು ಸಂಚರಿಸಿದಾಗ ಧೂಳು ಮುಗಿಲು ಮುಟ್ಟುತ್ತದೆ. ಜೊತೆಗೆ ವಾಹನಗಳ ಹೊಗೆ ಸೇರಿ, ಉಸಿರಾಡಲು ಕೂಡ ಕಷ್ಟಪಡುವಂತ ಪರಿಸ್ಥಿತಿಯಿದೆ. ಹೀಗೆ ಸ್ಥಳೀಯ ನಿವಾಸಿಗಳು ಮತ್ತು ವಾಹನ ಸವಾರರು ಕಂಗೆಟ್ಟಿದ್ದು ನೆತ್ತಿ ಸುಡುವ ಬಿಸಿಲು, ಉಸಿರಾಡಲಾಗದಂತ ಧೂಳು, ಹೊಗೆಯಿಂದ ನಿತ್ಯವೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮತ್ತು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಪ್ರತಿಭಟನೆ ಎಚ್ಚರಿಕೆ
ಸುಮನಹಳ್ಳಿ- ನಾಗರಬಾವಿ- ನಾಯಂಡಹಳ್ಳಿ ಹೊರವರ್ತುಲ ರಸ್ತೆ ನಿರ್ವಹಣೆ ಯಾರಾದರೂ ಮಾಡಲಿ. ಬಿಡಿಎ ಅಥವಾ ಬಿಬಿಎಂಪಿ ಯಾರೇ ನಿರ್ವಹಣೆ ಮಾಡಲಿ. ಆದರೆ, ಮೊದಲು ರಸ್ತೆ ಅವ್ಯವಸ್ಥೆಯನ್ನು ಸರಿಪಡಿಸಬೇಕು. ಚುನಾವಣೆಯ ನೆಪವೊಡ್ಡಿ, ಕೈಚೆಲ್ಲಿದರೆ, ಸುಮ್ಮನೆ ಕುಳಿತುಕೊಳ್ಳಲು ಆಗುವುದಿಲ್ಲ. ಕೂಡಲೇ ರಸ್ತೆ ಸರಿಪಡಿಸುವ ಕಾಮಗಾರಿ ಕೈಗೊಂಡು ಸುಗಮ ವಾಹನ ಸಂಚಾರಕ್ಕೆ ಸಹಕರಿಸಬೇಕು. ಇಲ್ಲದಿದ್ದರೆ ಒಂದು ವಾರದೊಳಗೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಸ್ಥಳೀಯ ಮುಖಂಡ ಚಂದ್ರಶೇಖರ ಗೌಡ ಅವರು ಎಚ್ಚರಿಸಿದ್ದಾರೆ. ಫೋಟೋ
ನಾಗರಬಾವಿ- ಸುಮನಹಳ್ಳಿ ರಿಂಗ್ ರಸ್ತೆಯಲ್ಲಿ ನಮ್ಮೂರ ತಿಂಡಿ ಹೋಟೆಲ್ ಸಮೀಪದ ಸರ್ವೀಸ್ ರಸ್ತೆಯ ಅವ್ಯವಸ್ಥೆ ದೃಶ್ಯ.