ಈ ಶಾಲೆಯಲ್ಲಿ 1ರಿಂದ 8ನೇ ತರಗತಿಯವರೆಗೆ 235 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಮಲ್ಲಿಕಾರ್ಜುನ ಎಚ್.

ಸಿರುಗುಪ್ಪ: ತಾಲೂಕಿನ ನಾಗರಹಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಬಯಲಿನಲ್ಲಿ ಶೌಚ ಮಾಡಬೇಕಾಗಿದೆ. ಇದರಿಂದ ವಿದ್ಯಾರ್ಥಿನಿಯರು ಮುಜುಗರ ಅನುಭವಿಸುವಂತಾಗಿದೆ.

ಈ ಶಾಲೆಯಲ್ಲಿ 1ರಿಂದ 8ನೇ ತರಗತಿಯವರೆಗೆ 235 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ನೂತನ ತರಗತಿ ಕೊಠಡಿಯನ್ನು ನಿರ್ಮಿಸಲು ಉತ್ತಮ ಸ್ಥಿತಿಯಲ್ಲಿದ್ದ ಎರಡು ಶೌಚಾಲಯಗಳನ್ನು ನೆಲಸಮಗೊಳಿಸಿ ಶೌಚ ಕಾರ್ಯವನ್ನು ಮಾಡಲು ಬಯಲುಪ್ರದೇಶ ಅಲ್ಲದೇ ವಿದ್ಯಾರ್ಥಿಗಳು ತಮ್ಮ ಮನೆಗಳಿಗೆ ತೆರಳಿ ಶೌಚ ಕಾರ್ಯವನ್ನು ಮುಗಿಸಿಕೊಳ್ಳಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರವು ಬಯಲು ಶೌಚವನ್ನು ನಿರ್ಮೂಲನೆ ಮಾಡಲು ಹೊಸ ಶೌಚಾಲಯ ನಿರ್ಮಾಣ ಮಾಡಬೇಕೆಂಬ ಸದಾಶಯದೊಂದಿಗೆ ಪ್ರತಿವರ್ಷ ನೂರಾರು ಕೋಟಿ ಅನುದಾನವನ್ನು ವೆಚ್ಚ ಮಾಡುತ್ತಿದೆ. ಶಾಲೆಗೆ ವಿವಿಧ ರೀತಿಯ ಅನುದಾನಗಳು ಬರುತ್ತಿವೆ. ಶಾಲಾ ಆವರಣದಲ್ಲಿ ಹೊಸದಾಗಿ ಶೌಚಾಲಯ ನಿರ್ಮಾಣ ಮಾಡಲು ಗ್ರಾಪಂ ಅಧಿಕಾರಿಗಳು ಅನುದಾನವನ್ನು ತೆಗೆದಿರಿಸಿದ್ದಾರೆ. ಶೌಚಾಲಯವನ್ನು ಕಟ್ಟಲು ಜಾಗವಿಲ್ಲ ಎನ್ನುವ ಕಾರಣವನ್ನು ಮುಂದಿಟ್ಟುಕೊಂಡು ಕಳೆದ ಎರಡು ವರ್ಷಗಳಿಂದ ಶೌಚಾಲಯ ಕಟ್ಟಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಬಯಲು ಶೌಚಾಲಯ ಆಶ್ರಯಿಸಬೇಕಾಗಿದೆ.

ಶಾಲೆಯ ಆವರಣದಲ್ಲಿ ಹಾಳಾದ ಕೊಠಡಿಗಳಿದ್ದು, ಇವನ್ನು ಯಾವ ಬಳಕೆಗೂ ಬಳಸುವುದಿಲ್ಲ. ಇವುಗಳನ್ನು ತೆರವುಗೊಳಿಸಿ ಶೌಚಾಲಯ ಕಟ್ಟಿಸಿ ಕೊಡಬಹುದು. ಆದರೆ ಅಧಿಕಾರಿಗಳು, ಜನಪ್ರತಿನಿಧಿಗಳು ಜಾಗವಿಲ್ಲ ಎನ್ನುವ ನೆಪ ಹೇಳುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.

ಬಯಲು ಶೌಚ ನಿರ್ಮೂಲನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರವು ಅನೇಕ ಹೊಸ ಯೋಜನೆಗಳಿದ್ದರೂ ಇಲ್ಲಿನ ವಿದ್ಯಾರ್ಥಿಗಳಿಗೆ ಮಾತ್ರ ಶೌಚ ಭಾಗ್ಯವಿಲ್ಲದೇ ಬಯಲು ಆಶ್ರಯಿಸುತ್ತಿದ್ದಾರೆ. ಶೌಚ ಕಟ್ಟಡ ನಿರ್ಮಿಸಿಲು ಅನುದಾನ ಇದ್ದರೂ ಶಾಲಾ ಶಿಕ್ಷಕರು, ಶಾಲಾ ಅಭಿವೃದ್ಧಿ ಸದಸ್ಯರು, ಗ್ರಾಪಂ ಆಡಳಿತಾಧಿಕಾರಿಗಳ ನಿರ್ಲಕ್ಷ್ಯ ಕಾಣುತ್ತಿದೆ.

ಬಿಸಿಯೂಟ ಕೊಠಡಿ ಇಲ್ಲದೇ ತರಗತಿಯ ಕೋಣೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಮಾಡುತ್ತಿದ್ದಾರೆ. ತರಗತಿಯ ಕೊಠಡಿಯ ಮುಂದೆ ಕಸ ವಿಲೇವಾರಿ ಮಾಡದೆ ಹಾಗೇ ಬಿಟ್ಟಿರುತ್ತಾರೆ. ಕೆಲವು ಬಾರಿ ಕಸಕ್ಕೆ ಬೆಂಕಿ ಹಚ್ಚಿ ಮಾಲಿನ್ಯ ಮಾಡಿದ ಉದಾಹರಣೆಗಳು ಇವೆ ಎಂದು ಸ್ಥಳೀಯರು ಆರೋಪಿಸಿದರು.ನಾಗರಾಳು ಶಾಲೆಯಲ್ಲಿ ಶೌಚಾಲಯ ಸಮಸ್ಯೆ ಇರುವ ಬಗ್ಗೆ ಮಾಹಿತಿ ಬಂದಿದೆ. ಶೌಚಾಲಯ ನಿರ್ಮಾಣಕ್ಕಾಗಿ ಗ್ರಾಪಂಗೆ ಮನವಿ ಮಾಡಿದ್ದು, ಶಾಲೆಯ ಪಕ್ಕದಲ್ಲಿನ ಅಂಗನವಾಡಿ ಶೌಚಾಲಯವನ್ನು ವಿದ್ಯಾರ್ಥಿಗಳ ಬಳಕೆಗೆ ಅವಕಾಶ ಮಾಡಿಕೊಡಲಾಗಿದೆ. ಒಂದೆರಡು ದಿನಗಳಲ್ಲಿ ಶೌಚಾಲಯ ನಿರ್ಮಾಣ ಮಾಡಲು ಕ್ರಮ ತೆಗೆದುಕೊಳ್ಳಲು ಈ ಬಗ್ಗೆ ಗ್ರಾಪಂ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎನ್ನುತ್ತಾರೆ ಬಿಇಒ ಎಚ್.ಗುರಪ್ಪ.ಶಾಲೆಯ ಆವರಣದಲ್ಲಿ ಶೌಚಾಲಯ ನಿರ್ಮಾಣ ಮಾಡಲು ₹60 ಸಾವಿರ ಅನುದಾನವನ್ನು ಕಾಯ್ದಿರಿಸಿದ್ದೇವೆ. ಆದರೆ ಶೌಚಾಲಯ ಕಟ್ಟಲು ಜಾಗವಿಲ್ಲ ಎನ್ನುತ್ತಾರೆ ಪಿಡಿಒ ವೀರನಗೌಡ.

ಶೌಚ ಕಾರ್ಯಕ್ಕೆ ಹೋಗಲು ತುಂಬ ತೊಂದರೆ ಅನುಭವಿಸುತ್ತಿದ್ದೇವೆ. ನಮಗೆ ಶಾಲೆಯ ಆವರಣದಲ್ಲಿ ಶೌಚಾಲಯವನ್ನು ನಿರ್ಮಿಸಿ ಕೊಡಬೇಕೆಂದು ಅನೇಕ ಬಾರಿ ಮುಖ್ಯಗುರುಗಳಿಗೆ ಮನವಿ ಮಾಡಿದ್ದೇವೆ. ಇಲ್ಲಿವರೆಗೆ ಕಟ್ಟಡ ನಿರ್ಮಿಸಿ ಕೊಟ್ಟಿಲ್ಲ ಎನ್ನುತ್ತಾರೆ ವಿದ್ಯಾರ್ಥಿನಿಯರು.