ಸಾರಾಂಶ
ಗೊಬ್ಬರ ಕಾಳ ಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ. ರೈತರಿಗೆ ಮಾತ್ರ ಲಭ್ಯವಾಗುತ್ತಿಲ್ಲ ಇದರ ಬಗ್ಗೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುತ್ತಿಲ್ಲ.
ಕಲಘಟಗಿ: ರಾಜ್ಯಾದ್ಯಂತ ಕೇಂದ್ರ ಸರ್ಕಾರ ಯೂರಿಯಾ ಗೊಬ್ಬರ ಸಕಾಲದಲ್ಲಿ ನೀಡಿದ್ದು, ರಾಜ್ಯ ಸರ್ಕಾರವು ಅದನ್ನು ರೈತರಿಗೆ ನೀಡುವಲ್ಲಿ ವಿಫಲವಾಗಿದೆ ಎಂದು ವಿಪ ಮಾಜಿ ಸದಸ್ಯ ನಾಗರಾಜ ಛಬ್ಬಿ ಆರೋಪಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮತ್ತು ನಾನು ಕೃಷಿ ಇಲಾಖೆ ಆಯುಕ್ತರು, ಪ್ರಧಾನ ಕಾರ್ಯದರ್ಶಿಗಳು ಹಾಗೂ ನಿರ್ದೇಶಕರೊಂದಿಗೆ ಚರ್ಚಿಸಿ ತಾಲೂಕಿನ ರೈತರಿಗೆ ಬೇಕಾಗುವ ಯೂರಿಯಾ ಗೊಬ್ಬರ ನೀಡುವಂತೆ ಮನವಿ ಮಾಡಿದ್ದೇವೆ. ಆದರೆ, ಜಿಲ್ಲಾ ಉಸ್ತುವಾರಿ ಸಚಿವರು ತಾಲೂಕಿನ ರೈತರ ಸಮಸ್ಯೆ ಗಿಂತ ನಗರಕ್ಕೆ ಮಾತ್ರ ಮೀಸಲಾಗಿದ್ದಾರೆ. ತಾಲೂಕಿನಾದ್ಯಂತ ಗೊಬ್ಬರ ವಿತರಿಸುವ ಮಾರಾಟ ಮಳಿಗೆಗಳು ಹಾಗೂ ಸೊಸೈಟಿಗಳು ತಮ್ಮ ಲಾಭವನ್ನು ಮಾತ್ರ ನೋಡುತ್ತಿದ್ದು ರೈತರ ಹಿತದೃಷ್ಟಿ ನೋಡದೆ ಇರುವುದು ವಿಪರ್ಯಾಸ ಎಂದು ವಿಷಾಧಿಸಿದ್ದಾರೆ.ಗೊಬ್ಬರ ಕಾಳ ಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ. ರೈತರಿಗೆ ಮಾತ್ರ ಲಭ್ಯವಾಗುತ್ತಿಲ್ಲ ಇದರ ಬಗ್ಗೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುತ್ತಿಲ್ಲ. ತಾಲೂಕಿನಲ್ಲಿ ಅಧಿಕಾರಿಗಳು, ಆಡಳಿತ ಪಕ್ಷ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ. ತಾಲೂಕಿನ ಹಲವು ಕಡೆಗಳಲ್ಲಿ ರೈತರು ಗೊಬ್ಬರ ಖರೀದಿಸಲು ಪರದಾಡುವಂತಾಗಿದೆ. ರಾಜ್ಯ ಸರ್ಕಾರ, ಉಸ್ತುವಾರಿ ಸಚಿವರು ಆದಷ್ಟು ಬೇಗನೆ ಈ ಸಮಸ್ಯೆ ಪರಿಹರಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಬೀದಿಗಳಿದು ರೈತರ ಪರ ಹೋರಾಟ ಮಾಡವಾಗುವುದು ಎಂದು ಎಚ್ಚರಿಸಿದ್ದಾರೆ.