ಸಾರಾಂಶ
ಹೊನ್ನಾವರ: ತಾಲೂಕಿನ ಗುಣವಂತೆಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೊನ್ನಾವರದ ಲಯನ್ಸ್ ಕ್ಲಬ್, ನೀಲೇಕೇರಿಯ ಸದ್ಗುರು ಸೇವಾ ಅಭಿವೃದ್ಧಿ ಟ್ರಸ್ಟ್ ಮತ್ತು ಆರ್ಟ್ ಆಫ್ ಲಿವಿಂಗ್, ಇಂಡಿಯನ್ ಡೆಂಟಲ್ ಅಸೋಸಿಯೇಶನ್ ಸಹಯೋಗದಲ್ಲಿ ದಂತ ತಪಾಸಣಾ ಶಿಬಿರ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿದ ದಂತ ವೈದ್ಯ ನಾಗರಾಜ ಬೋಸ್ಕಿ ಮಾತನಾಡಿ, ಹಲ್ಲುಗಳು ಮನುಷ್ಯನಿಗೆ ವಿವಿಧ ಬಗೆಯಲ್ಲಿ ಉಪಯೋಗವಾಗಲಿದೆ. ಜೀರ್ಣಕ್ರಿಯೆ ಹಾಗೂ ಮುಖದ ಸೌಂದರ್ಯ ವರ್ಧನೆಯ ಜತೆಗೆ ಮಾತಿನ ಸ್ಪಷ್ಟ ಉಚ್ಚಾರಣೆಗೂ ಸಹಕಾರಿಯಾಗಿದೆ. ಹಲ್ಲುಗಳ ಆರೋಗ್ಯ ವೃದ್ಧಿಸಿಕೊಳ್ಳಲು ಸಲಹೆಯನ್ನು ವಿಡಿಯೋ ಮೂಲಕ ಮಾಹಿತಿ ನೀಡಿದರು.ಶಾಲೆಯ 126 ವಿದ್ಯಾರ್ಥಿಗಳ ಹಲ್ಲು ತಪಾಸಣೆ ನಡೆಸಿ ಉಚಿತವಾಗಿ ಬ್ರಶ್ ಹಾಗೂ ಪೇಸ್ಟ್ ವಿತರಿಸಲಾಯಿತು. ಜಿಪಂ ನಿವೃತ್ತ ಎಂಜಿನಿಯರ್ ಎಂ.ವಿ. ಹೆಗಡೆ ಮಾತನಾಡಿ, ನಮ್ಮ ದೇಹದ ಆರೋಗ್ಯ ಹಲ್ಲಿನ ಆರೋಗ್ಯದ ಮೇಲೆ ನಿಂತಿದೆ. ಹಲ್ಲಿನ ಸಮಸ್ಯೆ ಈಗಲೇ ಎದುರಾದರೆ, ಜೀವನದಲ್ಲಿ ಆಘಾತಕಾರಿ ಪರಿಣಾಮ ಬೀರಲಿದೆ. ವೈದ್ಯರು ನೀಡಿದ ಸಲಹೆ ಪಾಲಿಸುವಂತೆ ಸೂಚಿಸಿದರು.ಲಯನ್ಸ್ ಉಪಾಧ್ಯಕ್ಷ ರಾಜೇಶ ಸಾಲೆಹಿತ್ತಲ್ ಮಾತನಾಡಿ, ಎಲ್ಲ ಮಕ್ಕಳಿಗೆ ಪೇಸ್ಟ್ ಹಾಗೂ ಬ್ರಶ್ ಉಚಿತವಾಗಿ ನೀಡುತ್ತಿರುವುದು ಸಂತಸವಾಗಿದೆ. ಒಳ್ಳೆಯ ಆಹಾರ ಸೇವಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ ಎಂದರು.ಲಯನ್ಸ್ ಖಜಾಂಚಿ ಎಸ್.ಎ. ಹೆಗಡೆಕರ್, ಡಾ. ನವ್ಯ ಸಾಳೆಹಿತ್ತಲ್, ಸದ್ಗುರು ಸೇವಾ ಟ್ರಸ್ಟ್ ಗೌರವಾಧ್ಯಕ್ಷ ಮಾದೇವ ಪಂಡಿತ್, ಖಜಾಂಚಿ ಪಿ.ಎಸ್. ಪಂಡಿತ್, ಎಸ್‌ಡಿಎಂಸಿ ಅಧ್ಯಕ್ಷ ದಾಮೋದರ ದೇವಾಡಿಗ ಉಪಸ್ಥಿತರಿದ್ದರು. ಶಾಲಾ ಮುಖ್ಯಾಧ್ಯಾಪಕರಾದ ತ್ರೀಜಾ ರೊಡ್ರಗೀಸ್ ಸ್ವಾಗತಿಸಿ, ಲಯನ್ಸ್ ಕಾರ್ಯದರ್ಶಿ ಎನ್.ಜಿ. ಭಟ್ ಪ್ರಾಸ್ತವಿಕವಾಗಿ ಮಾತನಾಡಿದರು. ಶಿಕ್ಷಕಿ ಮಾದೇವಿ ಗೌಡ ವಂದಿಸಿದರು. ವಿ.ಜಿ. ಭಟ್ ಕಾರ್ಯಕ್ರಮ ನಿರ್ವಹಿಸಿದರು.
ಸಿದ್ದಾಪುರದಲ್ಲಿ ಆರೋಗ್ಯ ತಪಾಸಣಾ ಶಿಬಿರಸಿದ್ದಾಪುರ: ಎಂಜಿಸಿ ಮಹಾವಿದ್ಯಾಲಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ಡಿಜಿಟಲ್ ಪ್ರಕೃತಿ ಸರ್ಟಿಫಿಕೇಟ್ ಹಾಗೂ ಉಚಿತ ಬ್ಯಾಂಕ್ ಖಾತೆ ತೆರೆಯುವ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯುಷ್ ಸಚಿವಾಲಯ, ಕೇಂದ್ರ ಸರ್ಕಾರದ ಅಡಿಯಲ್ಲಿ ಧನ್ವಂತರಿ ಆಯುರ್ವೇದ ಮಹಾವಿದ್ಯಾಲಯ ಹಾಗೂ ಐಕ್ಯುಎಸಿ, ಎನ್ಎಸ್ಎಸ್ ಘಟಕ, ಯುವ ರೆಡ್‌ಕ್ರಾಸ್ ಘಟಕ, ರೆಡ್ ರಿಬ್ಬನ್ ಕ್ಲಬ್ ಇವುಗಳ ಸಹಯೋಗದಲ್ಲಿ ಆಯೋಜಿಸಲಾಗಿತ್ತು.ಈ ಸಂದರ್ಭದಲ್ಲಿ ಪ್ರಾಚಾರ್ಯ ಪ್ರೊ. ಜಗನ್ನಾಥ ಮೊಗೇರ, ಎನ್ಎಸ್ಎಸ್ ಘಟಕದ ಯೋಜನಾಧಿಕಾರಿ ಡಾ. ದೇವನಾಂಪ್ರಿಯ ಎಂ., ಡಾ. ಮಧುಕೇಶ್ವರ ಹೆಗಡೆ, ಡಾ. ಶ್ರೀಕಾಂತ ಭಟ್ ಹಾಗೂ ವೈದ್ಯ ಸಿಬ್ಬಂದಿ, ಯುವ ರೆಡ್‌ಕ್ರಾಸ್ ಘಟಕ, ರೆಡ್ ರಿಬ್ಬನ್ ಕ್ಲಬ್‌ಗಳ ಯೋಜನಾಧಿಕಾರಿ ಸಾಗರ ಪಾಟೀಲ್, ಐಕ್ಯುಎಸಿ ಸಂಯೋಜಕ ಕಿರಣಕುಮಾರ ವಿ. ಉಪಸ್ಥಿತರಿದ್ದರು. ೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು.ಉಚಿತ ಬ್ಯಾಂಕ್ ಖಾತೆ ತೆರೆಯುವ ಶಿಬಿರವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸ್ಥಳೀಯ ಶಾಖೆಯ ವತಿಯಿಂದ ಐಕ್ಯುಎಸಿ ಮತ್ತು ವಾಣಿಜ್ಯಶಾಸ್ತ್ರ ವಿಭಾಗಗಳ ಸಹಯೋಗದೊಂದಿಗೆ ಏರ್ಪಡಿಸಲಾಗಿತ್ತು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸ್ಥಳೀಯ ಶಾಖೆಯ ಗ್ರಾಹಕರ ಸೇವಾ ಕೇಂದ್ರದ ಸಿಬ್ಬಂದಿಗಳಾದ ವಿನಾಯಕ ಬಿ. ನಾಯ್ಕ ಹಾಗೂ ಶರ್ಮಿಳಾ ನಾಯ್ಕ ಇದ್ದರು. ೩೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.