ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯಮೈಷುಗರ್ ಕಾರ್ಖಾನೆ ಅಧ್ಯಕ್ಷರಾಗಿದ್ದ ನಾಗರಾಜಪ್ಪ ಅವಧಿಯಲ್ಲಿ ನಡೆದಿರುವ ಭ್ರಷ್ಟಾಚಾರ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಮೈಸೂರು ಸಕ್ಕರೆ ಖಾರ್ಕಾನೆ ಕಬ್ಬು ಒಪ್ಪಿಗೆದಾರರ ಸಂಘದ ಅಧ್ಯಕ್ಷ ಶಂಭೂನಹಳ್ಳಿ ಕೃಷ್ಣ ಆಗ್ರಹಿಸಿದರು.
ಎರಡು ಕೋಟಿ ರು. ಮೀರಿದ ಭ್ರಷ್ಟಾಚಾರ ಪ್ರಕರಣವನ್ನು ಸಿಬಿಐ ತನಿಖೆಗೊಳಪಡಿಸಲಾಗಿದೆ. ನಾಗರಾಜಪ್ಪ ನಡೆಸಿರುವ ಹಗರಣ ೧೨೧ ಕೋಟಿ ರು.ಗಳದ್ದಾಗಿದೆ ಎಂದು ಉಪ ಲೋಕಾಯುಕ್ತರು ವರದಿ ನೀಡಿದ್ದು, ಅದರಂತೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ನಾಗರಾಜಪ್ಪ ಅವರು ಮಂಡ್ಯ ಜಿಲ್ಲೆಯಲ್ಲಿ ಮಾತ್ರವಲ್ಲದೇ, ಚಾಮರಾಜನಗರ, ಮೈಸೂರು, ಬೆಂಗಳೂರು ಜಿಲ್ಲೆಗಳಲ್ಲಿಯೂ ಆಸ್ತಿ ಮಾಡಿರುವುದು ಸತ್ಯವೆಂದು ತಿಳಿದುಬಂದಿದೆ. ಹಾಗಾಗಿ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ರವಿಕುಮಾರ್ ಅವರು ಈ ಮೂರು ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಆಸ್ತಿ ಕುರಿತ ದಾಖಲೆಗಳ ವಿವರಣೆ ಪಡೆಯಬೇಕು ಎಂದು ಆಗ್ರಹಿಸಿದರು.
೨೦೦೮ರ ನಂತರ ನಾಗರಾಜಪ್ಪ ಹೆಚ್ಚುವರಿಯಾಗಿ ಮಾಡಿರುವ ಆಸ್ತಿ ಎಲ್ಲವೂ ಭ್ರಷ್ಟಾಚಾರದ ಹಣದಿಂದಲೇ ಮಾಡಿದ್ದಾರೆಂದು ತಿಳಿಯಬೇಕಿರುವುದರಿಂದ ಆಸ್ತಿ ವಿವರಣೆ ಪಡೆದರೆ ಭ್ರಷ್ಟಾಚಾರ ಬೆಳಕಿಗೆ ಬರುತ್ತದೆ ಎಂದರು.ಕೆಆರ್‌ಎಸ್ ವ್ಯಾಪ್ತಿಯ ಉಳಿಕೆ ಕಾಮಗಾರಿಯನ್ನು ಕೂಡಲೇ ಪ್ರಾರಂಭ ಮಾಡುವ ತುರ್ತು ಅಗತ್ಯವಿದೆ. ೨೦೧೯ನೇ ಸಾಲಿನಲ್ಲಿ ಕೆಆರ್‌ಎಸ್ ಅಣೆಕಟ್ಟೆಯಿಂದ ತಿಬ್ಬನಹಳ್ಳಿಯವರೆಗೆ ೪೬ ಕಿ.ಮೀ. ವ್ಯಾಪ್ತಿಯ ಕಾಂಕ್ರಿಟ್ ಲೈನಿಂಗ್ ಕಾಮಗಾರಿ ಟೆಂಡರ್ ಆಗಿರುವುದು ಸರಿಯಷ್ಟೇ. ಈ ಕಾಮಗಾರಿಗೆ ಈಗ ಮೇ ೨೦೨೪ರ ಮೊದಲ ವಾರದೊಳಗೆ ಪೂರ್ಣಗೊಳಿಸಲು ಮುಖ್ಯಮಂತ್ರಿ, ನೀರಾವರಿ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶ ನೀಡಬೇಕು ಎಂದು ಒತ್ತಾಯಿಸಿದರು.
ಈಗಾಗಲೇ ಮಂಡ್ಯ ವ್ಯಾಪ್ತಿಯ ಕಾರ್ಖಾನೆ ಆಸ್ತಿಯ ಹದ್ದುಬಸ್ತು ಗುರುತಿಸುವ ಕಾರ್ಯ ನಡೆಯುತ್ತಿದ್ದು, ಶ್ರೀರಂಗಪಟ್ಟಣ ತಾಲೂಕಿನ ನಗುವನಹಳ್ಳಿ ಗ್ರಾಮದಲ್ಲಿ ಮೈಷುಗರ್‌ಗೆ ಸೇರಿದ ಎರಡು ಎಕರೆ ಆಸ್ತಿ ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿದರು.ಕೆಆರ್‌ಎಸ್‌ನಲ್ಲಿ ಬೆಳೆಗಳಿಗೆ ನೀರಿಲ್ಲದಿರುವುದರಿಂದ ಈ ಕಾಲ ಪಕ್ವವಾಗಿದ್ದು, ತ್ವರಿತ ಕಾಮಗಾರಿಯನ್ನು ಮಾಡಲು ವ್ಯಾಪ್ತಿಯ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಕ್ರಮ ಕೈಗೊಳ್ಳಬೇಕು. ಹಾಗಾಗಿ ಕೆಆರ್‌ಎಸ್ ವ್ಯಾಪ್ತಿಯ ಉಳಿಕೆ ಕಾಮಗಾರಿ ಪೂರ್ಣಗೊಳಿಸಿ ರೈತರಿಗೆ ನೆರವಾಗಬೇಕು ಎಂದರು.
ಸಂಘದ ಸಹಕಾರ್ಯದರ್ಶಿ ಎಂ.ಎಸ್.ಚನ್ನೇಗೌಡ, ಖಜಾಂಚಿ ಎಚ್.ಎನ್.ದೇವರಾಜು, ಪತ್ರಿಕಾ ಕಾರ್ಯದರ್ಶಿ ಎಂ.ಜೆ.ನಾಗರಾಜು, ಬೋರೇಗೌಡ ಇದ್ದರು.