ಕೆಸರುಗದ್ದೆಯಂತಾಗಿರುವ ನಾಗತೀಹಳ್ಳಿ ಸಂಪರ್ಕ ರಸ್ತೆ

| Published : Aug 15 2025, 01:00 AM IST

ಸಾರಾಂಶ

ತಾಲೂಕಿನ ಹೊನ್ನವಳ್ಳಿ ಹೋಬಳಿ ಗುಡಿಗೊಂಡನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ನಾಗತೀಹಳ್ಳಿ ಗ್ರಾಮದ ಮುಖ್ಯ ರಸ್ತೆಯು ವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿಯಿಂದ ಡಾಂಬರು ಸಂಪೂರ್ಣ ಹಾಳಾಗಿದೆ

ಕನ್ನಡಪ್ರಭವಾರ್ತೆ ತಿಪಟೂರು

ತಾಲೂಕಿನ ಹೊನ್ನವಳ್ಳಿ ಹೋಬಳಿ ಗುಡಿಗೊಂಡನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ನಾಗತೀಹಳ್ಳಿ ಗ್ರಾಮದ ಮುಖ್ಯ ರಸ್ತೆಯು ವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿಯಿಂದ ಡಾಂಬರು ಸಂಪೂರ್ಣ ಹಾಳಾಗಿದ್ದು ಕೆಸರು ಗದ್ದೆಯಂತಾಗಿ ಪಾದಚಾರಿಗಳು ಹಾಗೂ ವಾಹನ ಸವಾರರು ಓಡಾಡದಂತಹ ಕೆಟ್ಟ ಸ್ಥಿತಿಯಲ್ಲಿದ್ದು ಕೂಡಲೆ ಸರಿಮಾಡಿಕೊಡಬೇಕೆಂದು ಗ್ರಾಮಸ್ಥರು ಜಿಲ್ಲಾಪಂಚಾಯಿತಿ ಇಂಜಿನಿಯರ್‌ರವರನ್ನು ಒತ್ತಾಯಿಸಿದ್ದಾರೆ. ಈ ರಸ್ತೆಗೆ ಕಳೆದ ಎರಡು ವರ್ಷಗಳಿಂದಷ್ಟೇ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಡಾಂಬರು ಹಾಕಲಾಗಿತ್ತು. ಆದರೆ ಹಾಕಿದ ಕೆಲವೇ ತಿಂಗಳಲ್ಲಿ ಡಾಂಬರು ಕಿತ್ತು ಮಣ್ಣು ರಸ್ತೆಯಾಗಿದ್ದು ಎಷ್ಟರ ಮಟ್ಟಿಗೆ ಕಳಪೆ ಕಾಮಗಾರಿಯಾಗಿದೆ ಎಂಬುದಕ್ಕೇ ಈ ರಸ್ತೆಯೇ ಸಾಕ್ಷಿಯಾಗಿದೆ. ಇತ್ತೀಚೆಗೆ ಸುರಿಯುತ್ತಿರುವ ಮಳೆಗೆ ರಸ್ತೆ ತೀರ ಅದ್ವಾನವಾಗಿದ್ದು ವಾಹನಗಳು ಓಡಾಡುವುದು ಕಷ್ಟವಾಗಿದ್ದು, ನಡೆದುಕೊಂಡು ಹೋಗುವವರ ಪರಿಸ್ಥಿತಿಯೂ ಹೇಳತೀರದಾಗಿದೆ. ರಸ್ತೆಯಲ್ಲಿ ಕೊಚ್ಚೆ ಗುಂಡಿಗಳೆ ಹೆಚ್ಚಾಗಿದ್ದು, ಮಳೆಯಿಂದ ನೀರು ತುಂಬಿಕೊಂಡಿದ್ದು ಕೆಸರಿನ ಮೇಲೆ ಓಡಾಡುವಂತಾಗಿದೆ. ವೃದ್ದರು, ಚಿಕ್ಕ ಮಕ್ಕಳು, ವಿದ್ಯಾರ್ಥಿಗಳು ರಸ್ತೆಯಲ್ಲಿ ಓಡಾಡಲು ಹೆದರುವಂತಾಗಿದೆ. ಇನ್ನೂ ವಾಹನ ಸವಾರರು ರಸ್ತೆಯಲ್ಲಿ ಸರ್ಕಸ್ ಮಾಡಿಕೊಂಡು ಮುಂದೆ ಸಾಗಬೇಕಿದ್ದು, ಪ್ರತಿನಿತ್ಯ ವಾಹನಗಳು ಜಾರುವುದು, ಹೂತುಕೊಳ್ಳುವುದು ಸಣ್ಣಪುಟ್ಟ ಅಪಘಾತಗಳಾಗುವುದು ನಡೆಯುತ್ತಲೆ ಇವೆ. ಅಲ್ಲದೆ ಈ ರಸ್ತೆಯ ಎರಡು ಬದಿಗಳಲ್ಲಿ ಬೇಲಿ ಬೆಳೆದುಕೊಂಡಿದ್ದು ರಸ್ತೆಯಲ್ಲಿ ಸುಗಮವಾಗಿ ಓಡಾಡುವುದಕ್ಕೆ ಕಷ್ಟವಾಗುತ್ತಿದೆ. ರಾತ್ರಿವೇಳೆಯಂತೂ ಈ ಕೆಸರು ರಸ್ತೆಯಲ್ಲಿ ಎಲ್ಲಿ ಗುಂಡಿಗಳಿವೆಯೋ ತಿಳಿಯುವುದಿಲ್ಲ. ಸರ್ಕಾರದಿಂದ ಗ್ರಾಮೀಣ ಪ್ರದೇಶಗಳ ರಸ್ತೆ ನಿರ್ಮಾಣಕ್ಕೆಂದು ಸಾಕಷ್ಟು ಅನುದಾನ ಬಂದರೂ ಸಮರ್ಪಕ ರಸ್ತೆ ಸೌಲಭ್ಯ ಕಲ್ಪಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಕಾಮಗಾರಿಗಳ ಗುಣಮಟ್ಟ ಸರಿಯಿಲ್ಲದೆ ಎಷ್ಟೋ ರಸ್ತೆಗಳು ಮಳೆಗೆ ಕಿತ್ತು ಮಣ್ಣು ರಸ್ತೆಗಳಾಗಿದ್ದು ಗ್ರಾಮಸ್ಥರಂತೂ ಶಾಪ ಹಾಕಿಕೊಂಡು ಓಡಾಡುವಂತಾಗಿದೆ. ಮಳೆಗಾಲದಲ್ಲಂತೂ ಗ್ರಾಮೀಣ ಪ್ರದೇಶದ ರಸ್ತೆಗಳ ಸ್ಥಿತಿ ಹೇಳತೀರದಂತಾಗಿದೆ. ಕೂಡಲೆ ಈ ರಸ್ತೆಗೆ ಡಾಂಬರು ಕಲ್ಪಿಸಿ ವಾಹನ ಸವಾರರು ಹಾಗೂ ಗ್ರಾಮಸ್ಥರಿಗೆ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕೆಂದು ತುಮಕೂರು ಜಿಲ್ಲಾಪಂಚಾಯಿತಿ ಸಿಇಒ ರವರನ್ನು ಒತ್ತಾಯಿಸಿರುವುದಲ್ಲದೆ, ಕಳಪೆ ಕಾಮಗಾರಿ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ತಿಪಟೂರಿನ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.