ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿವಿ ನಿರ್ಮಿಸಿದ ‘ಡಿಸರ್ನಿಂಗ್ ಇಂಡಿಯಾ : ಯಕ್ಷಗಾನ’ ಸಾಕ್ಷ್ಯಚಿತ್ರವು ‘ನಾಗ್ಪುರ ಚಲನಚಿತ್ರೋತ್ಸವ 2026’ರಲ್ಲಿ ವೃತ್ತಿಪರ ವಿಭಾಗದ ‘ಅತ್ಯುತ್ತಮ ಸಾಕ್ಷ್ಯಚಿತ್ರ’ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.ಮಾಹೆಯ ‘ಅಂತರ ಸಾಂಸ್ಕೃತಿಕ ಅಧ್ಯಯನ ಮತ್ತು ಸಂವಾದ ಕೇಂದ್ರ’ (ಸಿಐಎಸ್‌ಡಿ) ಈ ಸಾಕ್ಷ್ಯಚಿತ್ರ ನಿರ್ಮಿಸಿದ್ದು, ಕರಾವಳಿ ಕರ್ನಾಟಕದ ಹೆಮ್ಮೆಯ ಕಲೆಯಾದ ಯಕ್ಷಗಾನದ ಐತಿಹಾಸಿಕ ವಿಕಸನ ಮತ್ತು ಸಾಂಸ್ಕೃತಿಕ ಮಹತ್ವವನ್ನು ಇದು ಜಗತ್ತಿಗೆ ಪರಿಚಯಿಸಿದೆ.
ಈ ಬಾರಿಯ ನಾಗ್ಪುರ ಚಲನಚಿತ್ರೋತ್ಸವಕ್ಕೆ ದೇಶದಾದ್ಯಂತ ವಿವಿಧ ವಿಭಾಗಗಳಲ್ಲಿ ಒಟ್ಟು 304 ಚಲನಚಿತ್ರಗಳು ಬಂದಿದ್ದವು. ಅವುಗಳಲ್ಲಿ 189 ಚಿತ್ರಗಳನ್ನು ಪ್ರದರ್ಶನಕ್ಕೆ ಆಯ್ಕೆ ಮಾಡಲಾಗಿತ್ತು. ಇದರಲ್ಲಿ ಮಾಹೆಯ ‘ಯಕ್ಷಗಾನ’ ಸಾಕ್ಷ್ಯಚಿತ್ರವು ಕಲಾತ್ಮಕ ಮೌಲ್ಯ ಮತ್ತು ಆಳವಾದ ಸಂಶೋಧನೆಗಾಗಿ ಈ ಪ್ರಶಸ್ತಿ ತನ್ನದಾಗಿಸಿಕೊಂಡಿತು. ನಾಗ್ಪುರದ ರಾಷ್ಟ್ರಸಂತ ತುಕಾಡೋಜಿ ಮಹಾರಾಜ್ ವಿಶ್ವವಿದ್ಯಾಲಯದಲ್ಲಿ ಮಾ, 29 ರಂದು ಈ ಚಿತ್ರದ ಪ್ರದರ್ಶಿಸಲಾಯಿತು.ಸಿಐಎಸ್‌ಡಿ ತನ್ನ ‘ಲಿವಿಂಗ್ ಕಲ್ಚರ್ಸ್ ಆಫ್ ತುಳುನಾಡು’ ಎಂಬ ಸಂಶೋಧನಾ ಯೋಜನೆಯ ಭಾಗವಾಗಿ ಈ ಸಾಕ್ಷ್ಯಚಿತ್ರ ಸಿದ್ಧಪಡಿಸಲಾಗಿದೆ. ಕರಾವಳಿಯ ಸಂಪ್ರದಾಯಗಳನ್ನು ಸಂರಕ್ಷಿಸುವ ಮತ್ತು ವಿಶ್ಲೇಷಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ.
ಈ ಸಾಕ್ಷ್ಯಚಿತ್ರವು ಈಗಾಗಲೇ ವಾರಾಣಸಿಯ ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವದಲ್ಲಿ ‘ಜ್ಯೂರಿ ಪ್ರಶಸ್ತಿ’ ಪಡೆದಿದೆ. ಜತೆಗೆ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ನಡೆದ ‘ವರ್ಲ್ಡ್ ಕಲ್ಚರ್ಸ್ ಫಿಲ್ಮ್ ಫೆಸ್ಟಿವಲ್’ನಲ್ಲಿ ಸೆಮಿಫೈನಲಿಸ್ಟ್ ಹಂತಕ್ಕೆ ಆಯ್ಕೆಯಾಗಿತ್ತು.ಸಿಐಎಸ್‌ಡಿ ಸಂಯೋಜಕ ಡಾ. ಪ್ರವೀಣ್ ಕೆ. ಶೆಟ್ಟಿ ಅವರು, ಈ ಪ್ರಶಸ್ತಿಯು ಶೈಕ್ಷಣಿಕ ಸಂಶೋಧನೆ ಮತ್ತು ಸಾಂಸ್ಕೃತಿಕ ದಾಖಲೀಕರಣದ ನಡುವೆ ಅರ್ಥಪೂರ್ಣ ಸೇತುವೆ ನಿರ್ಮಿಸುವ ಹಾಗೂ ಅಂತರಶಿಸ್ತೀಯ ಸಂಶೋಧನೆಗೆ ಉತ್ತೇಜನ ನೀಡಿದೆ. ಈ ಸಾಕ್ಷ್ಯಚಿತ್ರದ ಯಶಸ್ಸು, ಆಳವಾದ ಸಂಶೋಧನೆ ಮತ್ತು ನವೀನ ಕಥಾವಾಚನದ ಮೂಲಕ ಭಾರತದ ಪರಂಪರೆಗಳೊಂದಿಗೆ ನಿರಂತರ ಸಂಪರ್ಕವನ್ನು ಸಾಧಿಸುವಲ್ಲಿ ಸಿಐಎಸ್‌ಡಿ ವಹಿಸುತ್ತಿರುವ ಮಹತ್ವದ ಪಾತ್ರವನ್ನು ಪುನರುಚ್ಚರಿಸುತ್ತದೆ ಎಂದು ತಿಳಿಸಿದ್ದಾರೆ.