ಸಾರಾಂಶ
ಡಿ. 8ವರೆಗೆ ನಡೆಯುವ ಸೇನಾ ನೇಮಕಾತಿ ರ್‍ಯಾಲಿಗೆ ಚಾಲನೆ ನಲಿನ್ ಅತುಲ್ಕನ್ನಡಪ್ರಭ ವಾರ್ತೆ ಕೊಪ್ಪಳ
ಡಿ. 8ವರೆಗೆ ನಮ್ಮ ಜಿಲ್ಲೆಯಲ್ಲಿ ಸೇನಾ ನೇಮಕಾತಿ ರ್‍ಯಾಲಿ ನಡೆಯುತ್ತಿದ್ದು, ಇದರಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ತೊಂದರೆಯಾಗದ ರೀತಿಯಲ್ಲಿ ಅವರಿಗೆ ಊಟ, ವಸತಿ ಮತ್ತು ಸ್ವಚ್ಛತೆ ಸೇರಿದಂತೆ ಇತರೆ ಸೂಕ್ತ ವ್ಯವಸ್ಥೆಯನ್ನು ಜಿಲ್ಲಾಡಳಿತದಿಂದ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು.ಮಂಗಳವಾರ ಜಿಲ್ಲಾ ಕ್ರೀಡಾಂಗಣದಲ್ಲಿ ಸೇನಾ ನೇಮಕಾತಿ ರ್‍ಯಾಲಿಗೆ ಭಾರತೀಯ ಸೇನೆಯ ಡೆಪ್ಯುಟಿ ಡೈರೆಕ್ಟರ್ ಜನರಲ್ ಆಫ್ ರಿಕ್ರೂಟಿಂಗ್ ಬೆಂಗಳೂರಿನ ಬ್ರಿಗೇಡಿಯರ್ ಎಸ್.ಕೆ. ಸಿಂಗ್ ಅವರೊಂದಿಗೆ ಚಾಲನೆ ನೀಡಿ ಮಾತನಾಡಿದರು.
ಈ ರ್‍ಯಾಲಿಗೆ 30 ಸಾವಿರಕ್ಕಿಂತ ಹೆಚ್ಚು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. 9130 ಅಭ್ಯರ್ಥಿಗಳು ಅರ್ಹತೆ ಪಡೆದವರು ಈ ರ್‍ಯಾಲಿಯಲ್ಲಿ ಭಾಗವಹಿಸುತ್ತಿದ್ದಾರೆ. ಪ್ರತಿದಿನ 700ರಿಂದ 900 ಅಭ್ಯರ್ಥಿಗಳಿಗೆ ಕ್ರೀಡಾಂಗಣದಲ್ಲಿ ಅವರ ವಿವಿಧ ಅರ್ಹತಾ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಇದರಲ್ಲಿ ಭಾಗವಹಿಸುತ್ತಿರುವ ಅಭ್ಯರ್ಥಿಗಳಿಗೆ ಶುಭವಾಗಲಿ. ಉತ್ತಮ ಪ್ರದರ್ಶನ ನೀಡುವ ಮೂಲಕ ಭಾರತೀಯ ಸೇನೆಗೆ ಆಯ್ಕೆಯಾಗಿ ಎಂದು ಅಭ್ಯರ್ಥಿಗಳಿಗೆ ಜಿಲ್ಲಾಧಿಕಾರಿ ಶುಭ ಕೋರಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ಮಾತನಾಡಿ, ಸೇನಾ ನೇಮಕಾತಿ ರ್‍ಯಾಲಿಗೆ ಬರುವ ಅಭ್ಯರ್ಥಿಗಳಿಗೆ ತೊಂದರೆಯಾಗದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಪೊಲೀಸ್ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಸೇರಿದಂತೆ ಒಟ್ಟು 150 ಜನರನ್ನು ಈ ರ್‍ಯಾಲಿಗೆ ನಿಯೋಜನೆ ಮಾಡಲಾಗಿದೆ ಎಂದು ಹೇಳಿದರು.
ಈ ಸಂದರ್ಭ ಡೈರೆಕ್ಟರ್ ರಿಕ್ರೂಟಿಂಗ್ ಎ.ಆರ್.ಒ ಬೆಳಗಾವಿಯ ಕರ್ನಲ್ ಎ.ಕೆ. ಉಪಾಧ್ಯಾಯ, ಸುಬೇದಾರ ಮೇಜರ್ ದಿನೇಶ್ ರಾಮ್ ಲೋಹಿಯಾ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಉಪ ವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ ಸೇರಿದಂತೆ ಭಾರತೀಯ ಸೇನೆಯ ಇತರೆ ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.ವಿವಿಧ ಪರೀಕ್ಷೆ:ಅಭ್ಯರ್ಥಿಗಳಿಗೆ ರನ್ನಿಂಗ್, ಲಾಂಗ್‌ಜಂಪ್, ಹೈಜಂಪ್, ಶಾಟಪುಟ್, ಮೆಡಿಕಲ್ ಪರೀಕ್ಷೆ, ಮೂಲ ದಾಖಲಾತಿಗಳ ಪರೀಕ್ಷೆ ಸೇರಿದಂತೆ ವಿವಿಧ ಪರೀಕ್ಷೆಗಳಿಗೆ ಒಳಪಡಿಸಲಾಗುತ್ತದೆ. ನ. 26ರಿಂದ ಡಿ. 8ರವರೆಗೆ ಈ ರ್‍ಯಾಲಿ ನಡೆಯುತ್ತಿರುವುದರಿಂದ ಅಭ್ಯರ್ಥಿಗಳಿಗೆ ತೊಂದರೆಯಾಗದಂತೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕೊಪ್ಪಳ ವಿಭಾಗದಿಂದ ಕೊಪ್ಪಳ ರೈಲು ನಿಲ್ದಾಣ ಹಾಗೂ ಕೊಪ್ಪಳ ಕೇಂದ್ರ ಬಸ್ ನಿಲ್ದಾಣದಿಂದ ಜಿಲ್ಲಾ ಕ್ರೀಡಾಂಗಣದವರೆಗೆ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಗೆ ಅಭ್ಯರ್ಥಿಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕೊಪ್ಪಳ ಜಿಲ್ಲಾಡಳಿತವು ವಿವಿಧ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ಹಲವು ಸಮಿತಿಗಳನ್ನು ರಚಿಸಿ ಸೇನಾ ನೇಮಕಾತಿ ರ್‍ಯಾಲಿಯನ್ನು ಸುಸೂತ್ರವಾಗಿ ನಡೆಯುವಂತೆ ವ್ಯವಸ್ಥೆ ಮಾಡಿದೆ.