ಪ್ರಜಾಪ್ರಭುತ್ವ ಆಶಯಗಳನ್ನು ಜಾರಿಗೆ ತಂದ ನಾಲ್ವಡಿ ಕೃಷ್ಣರಾಜ ಒಡೆಯರ್

| Published : Nov 07 2025, 01:30 AM IST

ಸಾರಾಂಶ

ಸಮಾಜದ ಸರ್ವಾಂಗೀಣ ಅಭಿವೃದ್ಧಿ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಯೋಚಿಸಿದ ನಾಲ್ವಡಿ ಅವರು ಮೈಸೂರು ಸಂಸ್ಥಾನದಲ್ಲಿ ಮೀಸಲಾತಿ ಜಾರಿಗೊಳಿಸುವ ಮೂಲಕ‌ ಸಾಮಾಜಿಕ ಸುಧಾರಣೆಗೆ ಕಾರಣರಾದರು.

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ಭಾರತ ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಪ್ರಜಾಪ್ರತಿನಿಧಿ ಸ್ಥಾಪಿಸುವ ಮೂಲಕ ಪ್ರಜಾಪ್ರಭುತ್ವದ ರೂವಾರಿಯಾದವರು ನಾಲ್ವಡಿ ಕೃಷ್ಣರಾಜ ಒಡೆಯರ್ ಆಗಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್.ಶಂಕರಯ್ಯ ತಿಳಿಸಿದರು.

ಕನ್ನಡ ಜಾಗೃತ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಜಾಗೃತ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಸಾಹಿತ್ಯ ವಿಜ್ಞಾನ ಸಂಸ್ಕೃತಿ ಸಮಾಗಮ ಕಾರ್ಯಕ್ರಮದ ಭಾಗವಾಗಿ ಎಂಎಬಿಎಲ್‌ ಶಾಲೆಯಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕುರಿತು ಉಪನ್ಯಾಸ ನೀಡಿದರು.

ಸಮಾಜದ ಸರ್ವಾಂಗೀಣ ಅಭಿವೃದ್ಧಿ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಯೋಚಿಸಿದ ನಾಲ್ವಡಿ ಅವರು ಮೈಸೂರು ಸಂಸ್ಥಾನದಲ್ಲಿ ಮೀಸಲಾತಿ ಜಾರಿಗೊಳಿಸುವ ಮೂಲಕ‌ ಸಾಮಾಜಿಕ ಸುಧಾರಣೆಗೆ ಕಾರಣರಾದರು. ಮಹಾತ್ಮ ಗಾಂಧಿಯವರಿಂದ ರಾಜರ್ಷಿ ಎಂದು ಕರೆಸಿಕೊಂಡ ಕೃಷ್ಣರಾಜ ಒಡೆಯರ್‌ ರಾಜ್ಯವನ್ನು ಆಳಿದ ರಾಜರುಗಳಲ್ಲಿ ಅತ್ಯಂತ ಜನಪರ ಕಾಳಜಿಯುಳ್ಳವರಾಗಿದ್ದರು ಎಂದರು.

ಒಡೆಯರ್ ಅವರ ಕಾಲದಲ್ಲಿ ಮೈಸೂರು ಸಂಸ್ಥಾನ ಸಮಗ್ರ ಅಭಿವೃದ್ಧಿ ಹೊಂದಿತು. ಶಿಕ್ಷಣ, ಕೃಷಿ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳು ಮಹತ್ವದ ಸಾಧನೆಯನ್ನು ಮಾಡಿದವು. ಮೂಢನಂಬಿಕೆಗಳನ್ನು ತೊಡೆದು ಹಾಕುವ ಮೂಲಕ ಜನರಲ್ಲಿ ಸಾಮಾಜಿಕ ಪ್ರಜ್ಞೆಯನ್ನು ಬೆಳೆಸಿದರು. ಮಹಿಳೆಯರಿಗೆ ಶಿಕ್ಷಣ, ಬಾಲ್ಯವಿವಾಹ ನಿಷೇಧ, ವಸತಿ ಶಾಲೆಗಳ ಪ್ರಾರಂಭ, ಅಣೆಕಟ್ಟು ನಿರ್ಮಾಣ, ಆಧುನಿಕ ಕಾರ್ಖಾನೆಗಳ ಸ್ಥಾಪನೆ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪಿಸುವ ಮೂಲಕ‌ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಅಪಾರ ಕೊಡುಗೆ ನೀಡಿದರು ಎಂದರು

ಆಧುನಿಕ ತಂತ್ರಜ್ಞಾನ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದ ಆರ್‌ಎಲ್‌ಜೆಐಟಿ ಪ್ರಾಧ್ಯಾಪಕ ಡಾ.ಕೆ.ಸುನೀಲ್ ಕುಮಾರ್, ವೈಜ್ಞಾನಿಕವಾಗಿ ಅಧ್ಯಯನ ಮಾಡುವ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಯೋಚನಾಶಕ್ತಿ ಬೆಳೆಯುತ್ತದೆ. ನಮ್ಮ ದೇಶದವರು ವಿದೇಶಿ ತಂತ್ರಜ್ಞಾನವನ್ನು ಅವಲಂಬಿಸುವುದನ್ನು ನಿಲ್ಲಿಸಬೇಕು. ಯಾವುದೇ ದೇಶ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮುಂದುವರಿದರೆ ಮಾತ್ರ ಅಭಿವೃದ್ಧಿ ಸಾಧಿಸುತ್ತದೆ. ಆಧುನಿಕ‌ ತಂತ್ರಜ್ಞಾನದ ತಿಳುವಳಿಕೆ ಪಡೆಯುವುದರ ಜೊತೆಗೆ ವಿದ್ಯಾರ್ಥಿಗಳು ಹೊಸ ಹೊಸ ಆವಿಷ್ಕಾರ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಎಂ.ಬಿ.ಗುರುದೇವ್, ಸಿಇಒ ಬಿ.ಪಿ.ಪ್ರಿಯಾಂಕ, ಕನ್ನಡ ಜಾಗೃತ ಸಮಿತಿ ಸದಸ್ಯರಾದ ಕೆ.ಮಹಾಲಿಂಗಯ್ಯ, ನಾಗರತ್ನಮ್ಮ, ಭಾರತ್ ಸ್ಕೌಟ್ಸ್ ಮತ್ತು ಗೈಡ್ ಜಿಲ್ಲಾ ಸಹಾಯಕ ಆಯುಕ್ತ ವೆಂಕಟರಾಜು, ಕನ್ನಡ ಜಾಗೃತ ಪರಿಷತ್ತಿನ ಕಾರ್ಯದರ್ಶಿ ಡಿ.ಪಿ.ಆಂಜನೇಯ, ನಿವೃತ್ತ ಶಿಕ್ಷಕ ವಿ.ಎಸ್.ಹೆಗಡೆ, ತಾ.ಕಸಾಪ ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ, ಕೋಶಾಧ್ಯಕ್ಷ ಜಿ.ಸುರೇಶ್, ಪ್ರತಿನಿಧಿ ಸಫೀರ್ ಮತ್ತಿತರರು ಉಪಸ್ಥಿತರಿದ್ದರು.ಫೋಟೋ-6ಕೆಡಿಬಿಪಿ1- ದೊಡ್ಡಬಳ್ಳಾಪುರದ ಎಂಎಬಿಎಲ್‌ ಶಾಲೆಯಲ್ಲಿ ಸಾಹಿತ್ಯ ಸಂಸ್ಕೃತಿ ವಿಜ್ಞಾನ ಸಮಾಗಮ ಕಾರ್ಯಕ್ರಮ ನಡೆಯಿತು.