ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ಭೈರವೈಕ್ಯ ಡಾ.ಬಾಲಗಂಗಾಧರನಾಥ ಶ್ರೀಗಳನ್ನು ಪುಣ್ಯಸ್ಮರಣೆ, ಜಯಂತ್ಯುತ್ಸವಕ್ಕೆ ಸೀಮಿತಗೊಳಿಸದೆ ಪ್ರತಿನಿತ್ಯ ಅವರ ನಾಮಸ್ಮರಣೆ ಮಾಡಬೇಕಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಭಿಪ್ರಾಯಪಟ್ಟರು.ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಬಿಜಿಎಸ್ ಸಭಾಂಗಣದಲ್ಲಿ ಭೈರವೈಕ್ಯ ಶ್ರೀ ಡಾ.ಬಾಲಗಂಗಾಧರನಾಥ ಸ್ವಾಮೀಜಿಯವರ 80ನೇ ಜಯಂತ್ಯುತ್ಸವ ಹಾಗೂ 12ನೇ ವರ್ಷದ ಸಂಸ್ಮರಣಾ ಮಹೋತ್ಸವದ ಪ್ರಯುಕ್ತ ಬುಧವಾರ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಭೈರವೈಕ್ಯ ಶ್ರೀಗಳ ಪರಿಶ್ರಮದಿಂದ ಅನ್ನ, ಅಕ್ಷರ ಆರೋಗ್ಯ ದಾಸೋಹಕ್ಕೆ ಹೆಸರಾಗಿರುವ ಆದಿಚುಂಚನಗಿರಿ ಮಠ ದೇಶ ವಿದೇಶಗಳಲ್ಲಿಯೂ ಪ್ರಸಿದ್ಧಿ ಪಡೆದು ಬಹುದೊಡ್ಡ ಹೆಮ್ಮರವಾಗಿ ಬೆಳೆಯುತ್ತಿದೆ. ಒಂದು ಮಠ ಸಮಾಜ ಕಟ್ಟುವ ಕೆಲಸದಲ್ಲಿ ಹೇಗೆ ತೊಡಗಿಸಿಕೊಳ್ಳುತ್ತದೆ ಎಂಬುದಕ್ಕೆ ಶ್ರೀಕ್ಷೇತ್ರದಲ್ಲಿ ನಡೆಯುವ ಅನೇಕ ಕಾರ್ಯಕ್ರಮಗಳೇ ಸಾಕ್ಷಿ ಎಂದು ಬಣ್ಣಿಸಿದರು.ಭೈರವೈಕ್ಯಶ್ರೀಗಳ ಸಾಧನೆ ಧಾರ್ಮಿಕ ಕ್ಷೇತ್ರದ ಅಭಿವೃದ್ಧಿಗಷ್ಟೇ ಸೀಮಿತವಾಗದೆ ನಮ್ಮಂತ ಅನೇಕರಿಗೆ ಅವರ ಮಾರ್ಗದರ್ಶನ ಮತ್ತು ಆಶೀರ್ವಾದದಿಂದ ಜೀವನದ ಬದಲಾವಣೆಯಾಗಲು ಸಾಧ್ಯವಾಗುತ್ತದೆ. ಭೈರವೈಕ್ಯಶ್ರೀಗಳ ಆಶಯದಂತೆ ಈ ಕ್ಷೇತ್ರವನ್ನು ನಿರ್ಮಲಾನಂದನಾಥಶ್ರೀಗಳು ಉತ್ತಮ ರೀತಿಯಲ್ಲಿ ಮುನ್ನಡೆಸುತ್ತಿದ್ದಾರೆ ಎಂದು ಬಣ್ಣಿಸಿದರು.
ಮಕ್ಕಳು ವಿದ್ಯಾಭ್ಯಾಸಕ್ಕೆ ಪುಸ್ತಕದಲ್ಲಿರುವುದನ್ನು ಓದಿದರಷ್ಟೇ ಸಾಲದು. ಇತರೆ ವಿಚಾರಗಳ ಬಗ್ಗೆ ಜ್ಞಾನ ಬೆಳೆಸಿಕೊಳ್ಳುವುದು ಅತಿ ಮುಖ್ಯ. ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಜ್ಞಾನ, ಸಮಯ ಪ್ರಜ್ಞೆ, ಸಾಮಾಜಿಕ ಚಿಂತನೆ, ಸಂಸ್ಕಾರ ಅತ್ಯವಶ್ಯಕ ಎಂದರು.ಪ್ರೌಢಶಾಲೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ಹಮ್ಮಿಕೊಂಡಿರುವುದು ಶ್ಲಾಘನೀಯ. ಕಳೆದ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲೂ ಸಹ ಕಡಿಮೆ ಫಲಿತಾಂಶ ಬಂದಿತ್ತು. ಈ ಬಾರಿ ಫಲಿತಾಂಶ ಹೆಚ್ಚಿಸಲು ಈಗಾಗಲೇ ಜಿಲ್ಲೆಯ ಎಲ್ಲ ಶಿಕ್ಷಕರಿಗೂ ಸೂಕ್ತ ತರಬೇತಿ ನೀಡಿ ಪರೀಕ್ಷೆ ಬರೆಯಲು ಯಾವ ರೀತಿ ಮಾನಸಿಕವಾಗಿ ಸಿದ್ಧರಾಗಿ ಪರೀಕ್ಷೆ ಎದುರಿಸಬೇಕೆಂಬುದನ್ನು ಮಕ್ಕಳು ತಿಳಿಸುವ ಮೂಲಕ ಒಳ್ಳೆಯ ಕೆಲಸ ಮಾಡಿದ್ದಾರೆ. ಹಾಗಾಗಿ ಮಕ್ಕಳು ಭಯಪಡದೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಉತ್ತಮ ಫಲಿತಾಂಶ ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್‌ಸಿಂಗ್, ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿದರು. ಸಾನಿಧ್ಯ ವಹಿಸಿದ್ದ ಶ್ರೀಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಶ್ರೀಗಳು ಆಶೀರ್ವಚನ ನೀಡಿದರು.ಇದಕ್ಕೂ ಮುನ್ನ ಶ್ರೀರಂಗಪಟ್ಟಣದ ಪರಿವರ್ತನಾ ಶಾಲೆ ಮುಖ್ಯಸ್ಥ ಚೇತನ್‌ರಾಮ್ ಮಕ್ಕಳಿಗೆ ವಿಶೇಷ ಉಪನ್ಯಾಸ ನೀಡಿದರು.
ಶ್ರೀಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಬೆಂಗಳೂರಿನ ಗೋಸಾಯಿ ಮಠದ ಮಂಜುನಾಥ ಗೋಸಾಯಿ ಸ್ವಾಮೀಜಿ, ಮೈಸೂರು ವಿಭಾಗದ ಜಂಟಿ ನಿರ್ದೇಶಕ ಪಾಂಡುರಂಗ, ಡಿಡಿಪಿಐ ಎಚ್.ಶಿವರಾಮೇಗೌಡ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಆಡಳಿತಾಧಿಕಾರಿ ಡಾ.ಎ.ಟಿ.ಶಿವರಾಂ, ಬಿಇಒ ಕೆ.ಯೋಗೇಶ್, ಕ್ಷೇತ್ರ ಸಮನ್ವಯಾಧಿಕಾರಿ ಕೆ.ರವೀಶ್ ಸೇರಿದಂತೆ ವಿವಿಧ ಶಾಖಾ ಮಠಗಳ ಶ್ರೀಗಳು ಹಾಗೂ 3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದರು.ವಿಶೇಷ ಹೋಮ, ಧಾರ್ಮಿಕ ಕಾರ್ಯಕ್ರಮ
ನಾಗಮಂಗಲ:ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಭೈರವೈಕ್ಯ ಶ್ರೀ ಡಾ.ಬಾಲಗಂಗಾಧರನಾಥ ಸ್ವಾಮೀಜಿಯವರ 80ನೇ ಜಯಂತ್ಯುತ್ಸವ ಹಾಗೂ 12ನೇ ವರ್ಷದ ಸಂಸ್ಮರಣಾ ಮಹೋತ್ಸವದ ಪ್ರಯುಕ್ತ ವಿಶೇಷ ಹೋಮ ಹವನಾದಿ ಧಾರ್ಮಿಕ ಕೈಂಕರ್ಯಗಳು ನಡೆದವು.
ಶ್ರೀಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಶ್ರೀಗಳ ಸಾನಿಧ್ಯದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಪಾಲ್ಗೊಂಡರು. ಬಳಿಕ ಭೈರವೈಕ್ಯಶ್ರೀಗಳ ಮಹಾಗದ್ದುಗೆಗೆ ಪ್ರದಕ್ಷಿಣೆ ಹಾಕಿ ನಮಸ್ಕರಿಸಿ ಕ್ಷೇತ್ರಾಧಿದೇವತೆಗಳು ಹಾಗೂ ಶ್ರೀಗಳ ಆಶೀರ್ವಾದ ಪಡೆದುಕೊಂಡರು.ಶ್ರೀಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಹಾಸನ ಶಾಖಾ ಮಠದ ಶಂಭೂನಾಥಸ್ವಾಮೀಜಿ ಸೇರಿದಂತೆ ವಿವಿಧ ಶಾಖಾ ಮಠಗಳ ಶ್ರೀಗಳು ಮತ್ತು ನೂರಾರು ಭಕ್ತರು ಇದ್ದರು.