ಗಂಗೊಳ್ಳಿ ಗ್ರಾ.ಪಂ.ನಲ್ಲಿ ನಮಾಜ್‌: ಕಾನೂನು ಕ್ರಮಕ್ಕೆ ಆಗ್ರಹ

| Published : Jan 04 2025, 12:33 AM IST

ಗಂಗೊಳ್ಳಿ ಗ್ರಾ.ಪಂ.ನಲ್ಲಿ ನಮಾಜ್‌: ಕಾನೂನು ಕ್ರಮಕ್ಕೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಗಂಗೊಳ್ಳಿ ಗ್ರಾಮ ಪಂಚಾಯಿತಿ ಕಚೇರಿಯೊಳಗೆ ಪಂಚಾಯಿತಿ ಉಪಾಧ್ಯಕ್ಷ ಅಧಿಕಾರ ಸ್ವೀಕಾರದ ಸಂದರ್ಭದಲ್ಲಿ ಮೌಲ್ವಿಗಳ ಮೂಲಕ ನಮಾಜ್‌ ಮಾಡಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಗಂಗೊಳ್ಳಿ ಹಿಂದೂ ಹಿತರಕ್ಷಣಾ ಸಮಿತಿ ಶುಕ್ರವಾರ ಪ್ರತಿಭಟನೆ ನಡೆಸಿತು.

ಕನ್ನಡಪ್ರಭ ವಾರ್ತೆ ಬೈಂದೂರು

ಇಲ್ಲಿನ ಗಂಗೊಳ್ಳಿ ಗ್ರಾಮ ಪಂಚಾಯಿತಿ ಕಚೇರಿಯೊಳಗೆ ಪಂಚಾಯಿತಿ ಉಪಾಧ್ಯಕ್ಷ ಅಧಿಕಾರ ಸ್ವೀಕಾರದ ಸಂದರ್ಭದಲ್ಲಿ ಮೌಲ್ವಿಗಳ ಮೂಲಕ ನಮಾಜ್‌ ಮಾಡಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಗಂಗೊಳ್ಳಿ ಹಿಂದೂ ಹಿತರಕ್ಷಣಾ ಸಮಿತಿ ಶುಕ್ರವಾರ ಪ್ರತಿಭಟನೆ ನಡೆಸಿತು.

ಈ ಸಂದರ್ಭ ಮಾತನಾಡಿದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಕಾಂಗ್ರೆಸ್ ಸರ್ಕಾರವು ಸರ್ಕಾರಿ ಕಟ್ಟಡಗಳನ್ನು ರಾಜಕೀಯ ಲಾಭಗೋಸ್ಕರ ಕಾನೂನುಬಾಹಿರ ಚಟುವಟಿಕೆಗಳಿಗೆ ಅನುವು ಮಾಡಿಕೊಡುತ್ತಿರುವುದನ್ನು ವಿರೋಧಿಸುತ್ತೇವೆ. ಕಾಂಗ್ರೆಸ್‌ ಒಂದು ಕಡೆ ಎಸ್‌ಡಿಪಿಐ ಸಮಾಜಘಾತುಕ ಶಕ್ತಿ, ದೇಶದ್ರೋಹಿಗಳಿಗೆ ಬೆಂಬಲ ನೀಡುತ್ತಿದೆ, ಅದನ್ನು ನಿಷೇಧಿಸಬೇಕು ಎಂದು ದೇಶಾದ್ಯಂತ ಹೇಳುತ್ತಿದೆ. ಆದರೆ ಅಧಿಕಾರಕ್ಕೋಸ್ಕರ, ಪಂಚಾಯತ್‌ ಆಡಳಿತಕ್ಕೋಸ್ಕರ ಅದೇ ಪಕ್ಷದ ಜತೆ ಅನೈತಿಕ ಸಂಬಂಧ ಮಾಡಿಕೊಳ್ಳುತ್ತದೆ ಎಂದು ಆರೋಪಿಸಿದರು.ಸೈದ್ಧಾಂತಿಕತೆ ಮಾರಾಟ ಮಾಡಿ, ಅಧಿಕಾರ ಮಾತ್ರ ಮುಖ್ಯ ಎಂದು ಕಾಂಗ್ರೆಸ್‌ ತೋರಿಸಿಕೊಟ್ಟಿದೆ ಎಂದು ಆಕ್ರೋಷ ವ್ಯಕ್ತಪಡಿಸಿದರು.

ಅಧಿಕಾರಕ್ಕೋಸ್ಕರ ಕಾಂಗ್ರೆಸ್ ನ ತುಷ್ಟೀಕರಣ ಸಾಬೀತಾಗಿದೆ, ಕಾಂಗ್ರೆಸ್‌ ಪಕ್ಷ ಈಗ ಎಸ್‌ಡಿಪಿಐ ಅಡಿಯಾಳಾಗಿದೆ ಎಂದರು.

ನಮಾಜ್ ಗೆ ಅನುವು ಮಾಡಿಕೊಟ್ಟವರ ಮೇಲೆ ಕ್ರಮ ಕೈಗೊಳ್ಳುವಂತೆ ಕುಂದಾಪುರ ತಹಸೀಲ್ದಾರ್‌ ಮಲ್ಲಿಕಾರ್ಜುನ್‌ ಮತ್ತು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಡಾ.ರವಿ ಕುಮಾರ್‌ ಹುಕ್ಕೇರಿ ಅವರಿಗೆ ಮನವಿ ಸಲ್ಲಿಸಲಾಯಿತು.

ಮೌಲ್ವಿಯಿಂದ ಪ್ರಾರ್ಥನೆ: ವಿಡಿಯೋ ವೈರಲ್‌ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಎಸ್‌ಡಿಪಿಐ ಬೆಂಬಲಿತ ಉಪಾಧ್ಯಕ್ಷ ಅಧಿಕಾರ ಸ್ವೀಕಾರ ವೇಳೆ ಮೌಲ್ವಿಯಿಂದ ಪ್ರಾರ್ಥನೆ ಮಾಡಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಪ್ರಾಥನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಹಿಂದೂ ಸಂಘಟನೆಗಳಿಂದ ಆಕ್ರೋಶ ವ್ಯಕ್ತವಾಗಿದೆ.ಗಂಗೊಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕಾಂಗ್ರೆಸ್‌- ಎಸ್‌ಡಿಪಿಐ ಮೈತ್ರಿಯ ಆಧಾರದಲ್ಲಿ ಅಧಿಕಾರಕ್ಕೇರಿದ್ದು, ಅಧ್ಯಕ್ಷರಾಗಿ ಕಾಂಗ್ರೆಸ್‌ ಬೆಂಬಲಿತ ಜಯಂತಿ ಖಾರ್ವಿ ಹಾಗೂ ಉಪಾಧ್ಯಕ್ಷರಾಗಿ ಎಸ್‌ಡಿಪಿಐ ಬೆಂಬಲಿತ ಸದಸ್ಯ ತಬ್ರೇಜ್‌ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷ ತಬ್ರೇಜ್‌ ಅಧಿಕಾರ ಸ್ವೀಕಾರ ವೇಳೆ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಎಸ್‌ಡಿಪಿಐ ಮುಖಂಡರು ಮೌಲ್ವಿಯಿಂದ ದುವಾ ಮಾಡಿಸಿದ್ದಾರೆ. ಈ ವಿಡಿಯೋ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಧಾರ್ಮಿಕ ಕಾರ್ಯ ನಡೆಸಿರುವ ಬಗ್ಗೆ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.