ನಿರಂತರ ಮಳೆಗೆ ಹೆಸರು ಬೆಳೆ ನಾಶ !

| Published : Aug 13 2024, 12:57 AM IST

ಸಾರಾಂಶ

ಹೆಸರು ಬೇಗ ಬಿತ್ತನೆಯಾದ ಬೆಳೆಗಳು ಈಗಾಗಲೇ ಕಟಾವಿಗೆ ಬಂದಿದೆಯಾದರೂ ನಿರೀಕ್ಷೆಯಂತೆ ಫಸಲು ಇಲ್ಲ ಕಾಳುಗಳು ಕಪ್ಪಾಗಿವೆ

ಮಹೇಶ ಛಬ್ಬಿ ಗದಗ

ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತ ಸಮುದಾಯಕ್ಕೆ ಕಳೆದೊಂದು ತಿಂಗಳಿಂದ ನಿರಂತರವಾಗಿ ಸುರಿದ ಮಳೆ ನಿರಾಸೆ ಮೂಡಿಸಿದೆ.

ಪ್ರಸಕ್ತ ವರ್ಷ ಮುಂಗಾರು ಪ್ರಾರಂಭದಲ್ಲಿ ಉತ್ತಮ ಮಳೆಯಾಗಿದ್ದರಿಂದ ಉತ್ಸುಕತೆಯಲ್ಲಿ ಬಿತ್ತನೆ ಕಾರ್ಯ ಮುಗಿಸಿದ ರೈತರು ಪ್ರಾರಂಭದಲ್ಲಿ ಉತ್ತಮವಾಗಿ ಬೆಳೆದ ಬೆಳೆ ಕಂಡು ಈ ಬಾರಿ ಉತ್ತಮ ಫಸಲಿನ ಆಶಾಭಾವನೆ ಹೊತ್ತ ರೈತರಿಗೆ ಮಳೆ ಬೆಳೆಗಳಿಗೆ ರೋಗ ಭಾದಿಸಿ ನಾಶ ಪಡಿಸಿದೆ.

ಬಿತ್ತನೆ ಹಿನ್ನಡೆ: ಮುಂಗಾರು ಪ್ರಮುಖ ವಾಣಿಜ್ಯ ಬೆಳೆಗಳಲ್ಲೊಂದಾದ ಹೆಸರು ಬೆಳೆಯು ಬಿತ್ತನೆ ಆದ ಪ್ರಾರಂಭದಲ್ಲಿ ಹುಲಸಾಗಿ ಬೆಳೆದು ಕಣ್ಣು ಕುಕ್ಕುವಂತಿಂತು. ಸದ್ಯ ನಿರಂತರ ಮಳೆಗೆ ತೇವಾಂಶ ಹೆಚ್ಚಾಗಿ ಬೆಳೆಗೆ ಬೂದಿ, ಚಿಬ್ಬು ರೋಗ ಬಾಧಿಸಿ ಸಂಪೂರ್ಣ ಬೆಳೆ ಆವರಿಸಿದ್ದು, ಬಿತ್ತನೆ ಮಾಡಿದ ಖರ್ಚು ಸಹ ಬಾರದಂತಾಗಿದೆ.

ಹೆಸರು ಬೇಗ ಬಿತ್ತನೆಯಾದ ಬೆಳೆಗಳು ಈಗಾಗಲೇ ಕಟಾವಿಗೆ ಬಂದಿದೆಯಾದರೂ ನಿರೀಕ್ಷೆಯಂತೆ ಫಸಲು ಇಲ್ಲ ಕಾಳುಗಳು ಕಪ್ಪಾಗಿವೆ. ತಡವಾಗಿ ಬಿತ್ತನೆಯಾದ ಹೆಸರು ಬೆಳೆಗಳಂತು ನಿರಂತರ ಮಳೆಯಿಂದ ಚಿಬ್ಬು ರೋಗ ಬಾಧಿಸಿ ಸಂಪೂರ್ಣ ನಾಶವಾಗಿವೆ ಎನ್ನುತ್ತಾರೆ ಈ ಭಾಗದ ರೈತರು.

ತಾಲೂಕಿನ ಚಿಂಚಲಿ, ಕಲ್ಲೂರ ನೀಲಗುಂದ, ಮುಳಗುಂದ, ಕುರ್ತಕೋಟಿ ಭಾಗಗಳಲ್ಲಿ ತಡವಾಗಿ ಹೆಸರು ಬಿತ್ತನೆ ಮಾಡಿದ ಹೊಲಗಳು ಮಳೆಯಿಂದ ಬೆಳೆಗಳಿಗೆ ಚಿಬ್ಬು,ಬೂದಿ ರೋಗ ಆವರಿಸಿ ಹೆಸರು ಬೆಳೆ ಸಂಪೂರ್ಣ ನಾಶವಾಗಿವೆ.

ಬೆಳೆ ರಕ್ಷಣೆಯಾಗಲಿಲ್ಲ: ಪ್ರಸಕ್ತ ವರ್ಷ ರೈತರು ಹೆಸರು ಬೆಳೆ ರಕ್ಷಣೆಗೆ ಎಷ್ಟೇ ಹರಸಾಹಸ ಪಟ್ಟರೂ ಬೆಳೆ ರಕ್ಷಣೆ ಸಾಧ್ಯವಾಗಲಿಲ್ಲ. ಪ್ರಾರಂಭದಲ್ಲಿ ಸಮೃದ್ಧವಾಗಿ ಬೆಳೆದ ಹೆಸರನ್ನು ಮಂಗ, ಜಿಂಕೆಗಳಿಂದ ಹರಸಾಹಸ ಪಟ್ಟು ರಕ್ಷಣೆ ಮಾಡಿದರು. ಬೆಳೆಗಳು ಸಮೃದ್ಧವಾಗಿ ಬೆಳೆದಿರುವುದು ರೈತರ ಸಂತೋಷಕ್ಕೆ ಪಾರಾವೇ ಇಲ್ಲದಂತಾಗಿತ್ತು, ಆದರೆ ಕಳೆದೊಂದು ತಿಂಗಳಿಂದ ನಿರಂತರ ಸುರಿಯುತ್ತಿರುವ ಮಳೆಗೆ ಬೆಳೆಗಳಿಗೆ ರೋಗ ಬಾಧಿಸಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ ನಾನೊಂದು ಬಗೆದರೆ ದೈವವೊಂದು ಬಗೆದಿತು ಎಂಬಂತೆ ರೈತರ ಸದ್ಯದ ಸ್ಥಿತಿಯಾಗಿದೆ.

ತಡವಾಗಿ ಬಿತ್ತೆನೆಯಾದ ಹೆಸರು ಬೆಳೆಗಳು ನಿರಂತರ ಮಳೆಗೆ ಸಂಪೂರ್ಣ ಬೂದಿ ರೋಗ ಆವರಿಸಿದೆ. ಎಕರೆಗೆ 1 ಚೀಲ ಸಹ ಬರುವುದಿಲ್ಲ. ಅದು ಕೂಡ ಸೀರ (ಸಣ್ಣ) ಕಾಳು, ಜೊಳ್ಳ ಕಾಳು ಅದು ಆಹಾರ ಪದಾರ್ಥಕ್ಕೂ ಉಪಯೋಗವಾಗುವುದಿಲ್ಲ. ವಿಮಾ ಕಂಪನಿ ಬೆಳೆವಿಮೆ ಮಾಡಿದಂತಹ ರೈತರಿಗೆ ಮಧ್ಯಂತರ ಪರಿಹಾರ ನೀಡಬೇಕು ಹಾಗೂ ಸರ್ಕಾರ ಬೆಳೆ ಹಾನಿ ಪರಿಹಾರ ನೀಡಬೇಕು ಎಂದು ರೈತ ಸಂಘದ ಅಧ್ಯಕ್ಷ ದೇವರಾಜ ಸಂಗನಪೇಟಿ ತಿಳಿಸಿದ್ದಾರೆ.

ಹೆಸರು ಬೆಳೆಗೆ ಈ ಬಾರಿ ಸೂಕ್ತ ವಾತಾವರಣವಿರಲಿಲ್ಲ. ಗದಗ ಜಿಲ್ಲೆಯಲ್ಲೆ ಕಡಿಮೆ ಮಳೆಯಾದ ಕೆಲ ಭಾಗಗಳಲ್ಲಿ ಹೆಸರು ಉತ್ತಮವಾಗಿದೆ ಎಂದರೂ ಇಳುವರಿ ಕಡಿಮೆ ಬಂದಿದೆ. ಇನ್ನು ಗದಗ ತಾಲೂಕಿನ ಮುಳಗುಂದ, ಕುರ್ತಕೋಟಿ, ಹುಲಕೋಟಿ, ಹೊಸಳ್ಳಿ, ಚಿಂಚಲಿ, ಕಲ್ಲೂರ ಸೇರಿದಂತೆ ಮಳೆ ಹೆಚ್ಚಾದ ಭಾಗಗಳಲ್ಲಿ ಹೆಸರು ಬೆಳೆಗೆ ಸರ್ಕೋಸಪರ್‌ ಎಲೆ ಚುಕ್ಕಿ, ಚಿಬ್ಬು, ಬೂದಿ ರೋಗ ಆವರಿಸಿದ್ದು, ಈ ರೋಗ ಗಾಳಿ ಮೂಲಕ ಅತಿ ವೇಗವಾಗಿ ಹರುತ್ತದೆ. ರೋಗ ನಿಯಂತ್ರಣ ಮಾಡುವುದು ಕಷ್ಟ ಸಾಧ್ಯ ಎಂದು ಕೀಟ ಶಾಸ್ತ್ರಜ್ಞ ಡಾ. ಸಿ.ಎಂ.ರಫೀ ತಿಳಿಸಿದ್ದಾರೆ.