ಸಾರಾಂಶ
ರಾಜ್ಯಾದ್ಯಂತ ಸಂಚಲನ ಮೂಡಿಸಿರುವ ವಕ್ಫ್ ವಿವಾದವೂ ಈಗ ತಾಲೂಕಿಗೂ ಕಾಲಿಟ್ಟಿದ್ದು, ತಾಲೂಕಿನ ರೈತರು ಆತಂಕಗೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ಕುಷ್ಟಗಿ
ರಾಜ್ಯಾದ್ಯಂತ ಸಂಚಲನ ಮೂಡಿಸಿರುವ ವಕ್ಫ್ ವಿವಾದವೂ ಈಗ ತಾಲೂಕಿಗೂ ಕಾಲಿಟ್ಟಿದ್ದು, ತಾಲೂಕಿನ ರೈತರು ಆತಂಕಗೊಂಡಿದ್ದಾರೆ.ಪಟ್ಟಣ ಸೇರಿದಂತೆ ತಾಲೂಕಿನ ಜಾಲಿಹಾಳ ಹಾಗೂ ಶಿರಗುಂಪಿ ಗ್ರಾಮದ ಕೆಲ ರೈತರ ಪಹಣಿಗಳಲ್ಲಿ ವಕ್ಫ್ ಆಸ್ತಿಗಾಗಿ ಕಾಯ್ದಿರಿಸಿದೆ ಎಂದು ನಮೂದಾಗಿದ್ದು, ಕೆಲ ರೈತರಿಗೆ ವಕ್ಫ್ ಬೋರ್ಡಿನಿಂದ ನೋಟಿಸು ನೀಡುವ ಮೂಲಕ ಸರಿಯಾದ ಉತ್ತರ ನೀಡಿ ಪ್ರಕರಣ ಅಂತಿಮಗೊಳಿಸುವಂತೆ ನೋಟಿಸು ಕಳಿಸಲಾಗಿದ್ದು, ಇದನ್ನು ಕಂಡ ರೈತರು ಚಿಂತಾಕ್ರಾಂತರಾಗಿ ಕುಳಿತಿದ್ದಾರೆ.
ಯಾವ್ಯಾವ ಆಸ್ತಿ:ಕುಷ್ಟಗಿ ತಾಲೂಕಿನ ಜಾಲಿಹಾಳ ಸೀಮಾದ ಸರ್ವೆ ನಂಬರ್ 72/5 ದೇವಪ್ಪ ಬೈಲಕೂರ, ಸರ್ವೆ ನಂಬರ್ 72/4 ಬಸವನಗೌಡ ದೊಡ್ಡಬಸಪ್ಪನವರ, ಸರ್ವೆ 72/3 ಮಲ್ಲವ್ವ ಹಡಪದ ಸೇರಿದಂತೆ ಅನೇಕ ಕೆಲ ಗ್ರಾಮಗಳ ರೈತರ ಪಹಣಿಗಳಲ್ಲಿ ಈ ರೀತಿಯಾಗಿ ವಕ್ಫ್ ಆಸ್ತಿ ಎಂದು ನಮೂದಾಗಿದೆ. ಅಲೆದಾಟ:
ವಕ್ಫ್ ವಿವಾದ ಸೃಷ್ಟಿಯಾದ ಪರಿಣಾಮ ಕುಷ್ಟಗಿ ತಾಲೂಕಿನ ರೈತ ಸಮುದಾಯ ತಮ್ಮ ಜಮೀನುಗಳಿಗೆ ಸಂಬಂಧಪಟ್ಟ ಪಹಣಿಯನ್ನು ಪಡೆದುಕೊಳ್ಳಲು ಪಹಣಿ ವಿತರಣಾ ಕೇಂದ್ರ, ಇಂಟರ್‌ನೆಟ್ ಸೆಂಟರ್, ಗ್ರಾಮ ಒನ್ ಕೇಂದ್ರಗಳಿಗೆ ಅಲೆದಾಡುತ್ತಿರುವುದು ಕಂಡು ಬರುತ್ತಿದೆ.ಕುಷ್ಟಗಿ ತಾಲೂಕಿನ ಕೆಲ ರೈತರ ಪಹಣಿಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿರುವ ಪ್ರಕರಣಗಳು ಕಂಡು ಬಂದಿದ್ದು, ಈ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಅವರ ನಿರ್ದೇಶನದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಹಸೀಲ್ದಾರ ಅಶೋಕ ಶಿಗ್ಗಾಂವಿ ತಿಳಿಸಿದ್ದಾರೆ.