ಸಂಭ್ರಮ, ಭಾವೈಕ್ಯದ ನಮ್ಮೂರ ಲಕ್ಷ ದೀಪೋತ್ಸವ

| Published : Dec 17 2024, 01:02 AM IST

ಸಾರಾಂಶ

ಗದಗ ತಾಲೂಕಿನ ಹರ್ಲಾಪುರ ಗ್ರಾಮದಲ್ಲಿ ಭಾನುವಾರ ಸಂಜೆ ಶ್ರೀ ಕೊಟ್ಟೂರೇಶ್ವರ ಮಠದ ಆಶ್ರಯದಲ್ಲಿ ಕಾರ್ತಿಕ ಮಾಸದಂಗವಾಗಿ ನಮ್ಮೂರ ಲಕ್ಷ ದೀಪೋತ್ಸವ ಸಂಭ್ರಮದಿಂದ ಜರುಗಿತು.

ಗದಗ: ತಾಲೂಕಿನ ಹರ್ಲಾಪುರ ಗ್ರಾಮದಲ್ಲಿ ಭಾನುವಾರ ಸಂಜೆ ಶ್ರೀ ಕೊಟ್ಟೂರೇಶ್ವರ ಮಠದ ಆಶ್ರಯದಲ್ಲಿ ಕಾರ್ತಿಕ ಮಾಸದಂಗವಾಗಿ ಹಮ್ಮಿಕೊಂಡ ನಮ್ಮೂರ ಲಕ್ಷ ದೀಪೋತ್ಸವ ಭಕ್ತಿ-ಭಾವಗಳ ಮಧ್ಯೆ ಸಂಭ್ರಮದಿಂದ ಜರುಗಿತು.

ಕೊಟ್ಟೂರೇಶ್ವರ ಮಠ ಸೇರಿದಂತೆ ಗ್ರಾಮದ ಹರ್ತಿ ಮಠ, ರಾಮಕರುಣಾನಂದ ಮಠ, ರಂಗನಾಥ ಮಠ, ಗೆಜ್ಜೆ ಸಿದ್ದೇಶ್ವರ ಮಠ, ಚಿದಾನಂದಪ್ಪಜ್ಜನಮಠ, ತೋಂಟದಾರ್ಯಮಠ, ದುರ್ಗಾದೇವಿ, ಮೈಲಾರಲಿಂಗ, ದ್ಯಾಮವ್ವ, ಕಾಳಮ್ಮದೇವಿ, ಇಟಗಿ ಭೀಮಾಂಬಿಕಾ, ಯಲ್ಲಮ್ಮ, ಬೀರಲಿಂಗೇಶ್ವರ, ಗಾಳಮ್ಮ ದೇವಿ, ಬಸವೇಶ್ವರ, ವೀರಭದ್ರೇಶ್ವರ, ಮಾರುತಿ, ಬಾಲ ಬಸವೇಶ್ವರ, ಗೋಣಿ ಬಸವೇಶ್ವರ ದೇವಸ್ಥಾಗಳು ಸೇರಿದಂತೆ ದೊಡ್ಡ ಮಸೀದಿ, ಸಣ್ಣ ಮಸೀದಿ, ಈದ್ಗಾ ಮೈದಾನ ಹಾಗೂ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭಾವೈಕ್ಯತೆಯ ದೀಪೋತ್ಸವ ಕಾರ್ಯಕ್ರಮ ನಡೆಯಿತು.

ಗ್ರಾಮದ ಪ್ರತಿ ಮನೆಯ ಭಕ್ತರು ತಮ್ಮ ಮನೆಯ ಮುಂದೆ ದೀಪಗಳನ್ನು ಹಚ್ಚಿ ಭಕ್ತಿಯಿಂದ ಕಾರ್ತೀಕೋತ್ಸವ ಆಚರಿಸಿದರು. ಇಡೀ ಗ್ರಾಮವೇ ಲಕ್ಷ ದೀಪೋತ್ಸದಿಂದ ಝಗಮಗಿಸುತ್ತಿತ್ತು. ಇಡೀ ದಿನ ಅನ್ನ ಸಂತರ್ಪಣೆ ನಡೆಯಿತು. ಗ್ರಾಪಂ ಸದಸ್ಯರು, ಗಣ್ಯರು, ಯುವಕರು, ಮಹಿಳೆಯರು ಲಕ್ಷ ದೀಪೋತ್ಸವದಲ್ಲಿ ಪಾಲ್ಗೊಂಡಿದ್ದರು.

ಸಿ.ಸಿ. ಪಾಟೀಲ ಚಾಲನೆ: ಹರ್ಲಾಪುರ ಕೊಟ್ಟೂರೇಶ್ವರ ಮಠದಲ್ಲಿ ದೀಪವನ್ನು ಬೆಳಗುವ ಮೂಲಕ ಮಾಜಿ ಸಚಿವ ನರಗುಂದ ಮತಕ್ಷೇತ್ರ ಶಾಸಕ ಸಿ.ಸಿ. ಪಾಟಿಲ ಲಕ್ಷ ದೀಪೋತ್ಸವಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಮನುಷ್ಯನನ್ನು ಕತ್ತಲೆಯಿಂದ ಬೆಳಕಿನೆಡೆಗೆ ತರುವುದೇ ಕಾರ್ತಿಕೋತ್ಸವದ ಮೂಲ ಉದ್ದೇಶವಾಗಿದೆ. ಕೆಟ್ಟದನ್ನು ತೊರೆದು ಸನ್ಮಾರ್ಗದಲ್ಲಿ ಹೋಗುವುದಕ್ಕೆ ಕಾರ್ತಿಕ ಮಾಸವು ನಮಗೆ ಸಂಪ್ರದಾಯ ಮತ್ತು ಸಂಸ್ಕೃತಿಯ ಸಂಕೇತವಾಗಿದೆ. ಈ ನಿಟ್ಟಿನಲ್ಲಿ ಕೊಟ್ಟೂರೇಶ್ವರ ಮಠವು ಲಕ್ಷ ದೀಪೋತ್ಸವದ ಮೂಲಕ ಗ್ರಾಮಸ್ಥರಲ್ಲಿ ಬೆಳಕಿನ ಮಹತ್ವ ಅರ್ಥೈಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು.

ಡಾ. ಕೊಟ್ಟೂರೇಶ್ವರ ಶ್ರೀಗಳು, ಮಳಖೇಡದ ಕೊಟ್ಟೂರೇಶ್ವರ ಶಿವಾಚಾರ್ಯರು, ಜಾಕನಪಲ್ಲಿಯ ಗವಿಶಿದ್ದಲಿಂಗ ಶಿವಾಚಾರ್ಯರು ಸೇರಿದಂತೆ ಹರಗುರು ಚರ ಮೂರ್ತಿಗಳು ಇದ್ದರು.