ಪ್ರತಿ ನಾಲ್ಕು ಕಿಲೋ ಮೀಟರ್ ಗಳಿಗೆ ಕಾಲ್ನಡಿಗೆಯಲ್ಲಿ ಬರುವ ಭಕ್ತರ ಆಯಾಸ ನೀಗಿಸಲು ಅಲ್ಲಲ್ಲಿ ಉಪಾಹಾರ, ಕಾಫಿ, ಟೀ, ಬಾದಾಮಿ ಹಾಲು, ಮಜ್ಜಿಗೆ, ಜ್ಯೂಸ್, ನೀರು, ಬಿಸ್ಕೆಟ್, ಗ್ಲುಕೋಸ್, ಚಾಕೋಲೇಟ್, ಕಲ್ಲುಸಕ್ಕರೆ, ಖರ್ಜೂರ ಸೇರಿದಂತೆ ಹಣ್ಣುಗಳನ್ನು ವಿತರಿಸಲಾಗುವುದು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಆರೋಗ್ಯ ಹಾಗೂ ಆಧ್ಯಾತ್ಮದ ಸಮ್ಮಿಲನದ ಗುರುತಾಗಿ ಚಿಕ್ಕಬಳ್ಳಾಪುರದ ನಂದಿ ಗಿರಿಧಾಮದ ಬಳಿ ಫೆಬ್ರವರಿ 1 ರಂದು ನಂದಿಗಿರಿ ಪ್ರದಕ್ಷಿಣೆ ಹಮ್ಮಿಕೊಳ್ಳಲಾಗಿದೆ ಎಂದು ಸಂಸದ ಡಾ.ಕೆ.ಸುಧಾಕರ್‌ ತಿಳಿಸಿದರು.

ನಗರದ ಸಂಸದರ ಗೃಹ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಫೆಬ್ರವರಿ 1ರ ಭಾನುವಾರ ಮಾಘಮಾಸದ ಹುಣ್ಣಿಮೆಯ ಅಂಗವಾಗಿ ಸಂಜೆ 4 ಗಂಟೆಗೆ ನಂದಿ ಗ್ರಾಮದ ಶ್ರೀ ಭೋಗನಂದೀಶ್ವರ ದೇವಾಲಯದಿಂದ ನಂದಿಗಿರಿ ಪ್ರದಕ್ಷಿಣೆ ಆರಂಭವಾಗಲಿದೆ. ಈ ಕುರಿತು ವಿವಿಧ ಭಜನಾ ಮಂಡಳಿಗಳ ಪ್ರತಿನಿಧಿಗಳು ಹಾಗೂ ಸಾಂಸ್ಕೃತಿಕ ಸಂಘಗಳ ಮುಖಂಡರೊಂದಿಗೆ ಪೂರ್ವಭಾವಿ ಸಭೆ ನಡೆಸಿರುವುದಾಗಿ ತಿಳಿಸಿದರು.

1928ರಿಂದ ಗಿರಿ ಪ್ರದಕ್ಷಿಣೆ ಆರಂಭ:

1936ರಲ್ಲಿ ಮಹಾತ್ಮ ಗಾಂಧೀಜಿಯವರು ನಂದಿಗಿರಿಧಾಮಕ್ಕೆ ನಡೆದುಕೊಂಡು ಹೋಗಿ 45 ದಿನಗಳ ಕಾಲ ವಿಶ್ರಾಂತಿ ಪಡೆದಿದ್ದರು. ಆ ಸಮಯದಲ್ಲಿ ಅವರು ನಂದಿ ಬೆಟ್ಟವನ್ನು ‘ಆರೋಗ್ಯಧಾಮʼ ಎಂದು ಬಣ್ಣಿಸಿದ್ದರು. ನಂದಿ ಬೆಟ್ಟವನ್ನು ದಕ್ಷಿಣದ ಕಾಶಿ ಎಂದೂ ಕರೆಯಲಾಗುತ್ತದೆ. ಮಾಘಮಾಸದ ಹುಣ್ಣಿಮೆಯ ದಿನದಂದು ಸಂಜೆ 4 ಗಂಟೆಗೆ ನಂದಿಗಿರಿಧಾಮದ ಪ್ರದಕ್ಷಿಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ಪ್ರತಿ ಪೌರ್ಣಮಿಗೆ ಅರುಣಾಚಲ ಗಿರಿಯ ಪ್ರದಕ್ಷಿಣೆ ಮಾಡಿದರೆ ಕೈಲಾಸವನ್ನು ಪ್ರದಕ್ಷಿಣೆ ಮಾಡಿದಷ್ಟೇ ಪುಣ್ಯ ಎಂಬ ನಂಬಿಕೆ ಇಂದಿಗೂ ಇದೆ. ಆದರೆ ದೂರದ ತಿರುವಣ್ಣಾಮಲೈಗೆ ತೆರಳಲು ಆಗದು ಎಂದು ನಂದಿಗಿರಿಗೆ ಪ್ರದಕ್ಷಿಣೆ ಮಾಡಿದರೆ ಅದೇ ಪುಣ್ಯ ಲಭಿಸುತ್ತದೆ ಎಂದು 1928ರಲ್ಲಿ ದೊಡ್ಡಬಳ್ಳಾಪುರದ ಸುಬ್ಬರಾಯಪ್ಪ ಮತ್ತು ಗೌರಿಬಿದನೂರು ತಾಲೂಕು ನಾಮಗೊಂಡ್ಲು ಚಿಕ್ಕಣ್ಣ ಎಂಬುವರಿಂದ ಪ್ರದಕ್ಷಿಣಾ ಕಾರ್ಯ ಪ್ರಾರಂಭವಾಯಿತು.

ಧಾರ್ಮಿಕ ನಂಬಿಕೆ:

ಈ ಕಾರ್ಯಕ್ರಮಕ್ಕೆ ಹಲವು ದಶಕಗಳ ಇತಿಹಾಸವಿದೆ. ಪ್ರತಿ ವರ್ಷ ಆಷಾಢ ಮಾಸದ ಕೊನೆ ಸೋಮವಾರ ದಿಬ್ಬಗಿರಿ, ಬ್ರಹ್ಮಗಿರಿ, ನಂದಿಗಿರಿ (ನಂದಿಬೆಟ್ಟ), ಚೆನ್ನಗಿರಿ, ಗೋವರ್ಧನ ಗಿರಿ ಸೇರಿದಂತೆ ಪಂಚಗಿರಿಗಳನ್ನು ಭಕ್ತಿಯಿಂದ ಪ್ರದಕ್ಷಿಣೆ ಮಾಡಿದರೆ ಕೈಲಾಸ ಪರ್ವತವನ್ನು ಸುತ್ತಿದಂತೆ ಎನ್ನುವ ನಂಬಿಕೆ ಈ ಭಾಗದ ಆಸ್ತಿಕರದ್ದಾಗಿದ್ದು, ಅದೇ ರೀತಿಯಲ್ಲಿ ಇಲ್ಲಿಯೂ ಶ್ರೇಷ್ಠವಾದ ಪ್ರದಕ್ಷಿಣೆ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಯಾವುದೇ ಜಾತಿ, ಧರ್ಮದ ಭೇದವಿಲ್ಲದೆ ಎಲ್ಲರೂ ಇದರಲ್ಲಿ ಭಾಗವಹಿಸಬಹುದು ಎಂದು ಹೇಳಿದರು.

ಪೂರ್ಣಚಂದ್ರನ ಶ್ರೇಷ್ಠತೆ:

ಹುಣ್ಣಿಮೆ ಎಂದರೆ ಚಂದ್ರನು ಪೂರ್ಣರೂಪದಲ್ಲಿ ಬೆಳಗುವ ದಿನವಾಗಿದೆ. ಸೂರ್ಯ ಚಂದ್ರರು ಕಣ್ಣಿಗೆ ಕಾಣುವ ದೇವರೆಂದು ಎಲ್ಲರೂ ನಂಬುತ್ತಾರೆ. ಹಿಂದೂಗಳು ಮಾತ್ರವಲ್ಲದೆ, ಮುಸ್ಲಿಮರು ಕೂಡ ರಂಜಾನ್‌ ಸಮಯದಲ್ಲಿ ಚಂದ್ರನ ಗೋಚರತೆಯನ್ನು ಆಧರಿಸಿ ಹಬ್ಬವನ್ನು ಆಚರಿಸುತ್ತಾರೆ. ಆದ್ದರಿಂದ ಎಲ್ಲ ಧರ್ಮದವರೂ ಚಂದ್ರನನ್ನು ಶ್ರೇಷ್ಠವೆಂದು ಪರಿಗಣಿಸುತ್ತಾರೆ. ಮಾಘಮಾಸದ ಹುಣ್ಣಿಮೆಯ ದಿನ ಶ್ರೇಷ್ಠವಾಗಿದ್ದು, ಇದೇ ದಿನದಂದು ಪ್ರದಕ್ಷಿಣೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಪ್ರದಕ್ಷಿಣೆ ಮಾರ್ಗ:

ನಂದಿಯ ಶ್ರೀ ಭೋಗನಂದಿಶ್ವರಸ್ವಾಮಿ ದೇವಾಲಯದಿಂದ ಆರಂಭಗೊಳ್ಳುವ ಪ್ರದಕ್ಷಿಣೆ ಅಂಗಟ್ಟ, ಈರೇನಹಳ್ಳಿ, ಕುಡುವತಿ, ಕಾರಹಳ್ಳಿ ಕ್ರಾಸ್,ಕಣಿವೆಪುರ, ಬೆಟ್ಟದ ಕ್ರಾಸ್, ಹೆಗ್ಗಡಿಹಳ್ಳಿ, ಮೊಡಕು ಹೊಸಹಳ್ಳಿ.ಕಣಿವೆ ಬಸವಣ್ಣನ ದೇವಾಲಯದಲ್ಲಿ ಬಸವನ ದರ್ಶನ ಪಡೆದು, ಸುಲ್ತಾನ್ ಪೇಟೆ ಮಾರ್ಗವಾಗಿ ಸುಮಾರು 16 ಕಿ.ಮೀ ಕಾಲ್ನಡಿಗೆಯಲ್ಲಿ ಪ್ರದಕ್ಷಿಣೆ ಹಾಕಿ, ಮತ್ತೆ ನಂದಿಯ ಶ್ರೀ ಭೋಗನಂದೀಶ್ವರ ಸ್ವಾಮಿ ಆಲಯಕ್ಕೆ ವಾಪಸ್ ಬಂದ ಬಳಿಕ ಶ್ರೀ ಭೋಗನಂದಿಶ್ವರಸ್ವಾಮಿಗೆ ಮಹಾಮಂಗಳಾರತಿ ಎತ್ತಿದ ಬಳಿಕ ಉಪಾಹಾರದ ನಂತರ ಕಾರ್ಯಕ್ರಮಕ್ಕೆ ಅಂತ್ಯ ಹಾಡಲಾಗುವುದು ಎಂದರು.

ಭಕ್ತರಿಗೆ ಅಗತ್ಯ ವ್ಯವಸ್ಥೆ:

ಪ್ರತಿ ನಾಲ್ಕು ಕಿಲೋ ಮೀಟರ್ ಗಳಿಗೆ ಕಾಲ್ನಡಿಗೆಯಲ್ಲಿ ಬರುವ ಭಕ್ತರ ಆಯಾಸ ನೀಗಿಸಲು ಅಲ್ಲಲ್ಲಿ ಉಪಾಹಾರ, ಕಾಫಿ, ಟೀ, ಬಾದಾಮಿ ಹಾಲು, ಮಜ್ಜಿಗೆ, ಜ್ಯೂಸ್, ನೀರು, ಬಿಸ್ಕೆಟ್, ಗ್ಲುಕೋಸ್, ಚಾಕೋಲೇಟ್, ಕಲ್ಲುಸಕ್ಕರೆ, ಖರ್ಜೂರ ಸೇರಿದಂತೆ ಹಣ್ಣುಗಳನ್ನು ವಿತರಿಸಲಾಗುವುದು. ಕತ್ತಲೆಯಾಗುವುದರಿಂದ ದಾರಿಯುದ್ದಕ್ಕೂ ಲೈಟಿಂಗ್ ವ್ಯವಸ್ಥೆ, ಕಾಡು ಪ್ರಾಣಿಗಳು ಬರುವ ಸಾಧ್ಯತೆ ಇರುವುದರಿಂದ ಅರಣ್ಯ ಮತ್ತು ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್, ಇದಲ್ಲದೆ ಉಚಿತ ಆರೋಗ್ಯ ಶಿಬಿರ ಮತ್ತು ಔಷಧ ವಿತರಣೆಗೆ ವ್ಯವಸ್ಥೆ ಮಾಡಲಾಗುವುದು.

ನಂದಿ ಗಿರಿ ಪ್ರದಕ್ಷಿಣೆಯಲ್ಲಿ ಭಾಗವಹಿಸುವುದು ಖುಷಿಯ ವಿಚಾರ. ಕುಟುಂಬ, ಸ್ನೇಹಿತರ ಬಳಗದೊಂದಿಗೆ ನಡೆದುಕೊಂಡು ಹೋಗುವುದರಿಂದ ವಿಶೇಷ ಅನುಭವ ಆಗುವುದು, ದಿನ ನಿತ್ಯ ಕಾಂಕ್ರಿಟ್ ಕಾಡಿನಲ್ಲಿ ಕೆಲಸದ ಒತ್ತಡದಲ್ಲಿ ಜೀವಿಸುವ ನಮಗೆ ಆಧ್ಯಾತ್ಮಿಕತೆಯ ಭಾವನೆಯಲ್ಲಿ ಬೆಟ್ಟ-ಗುಡ್ಡಗಳ ನಡುವೆ ಕಾಲ್ನಡಿಗೆಯಲ್ಲಿ ಸಾಗುವ ಗಿರಿ ಪ್ರದಕ್ಷಿಣೆಯು ದೈಹಿಕ ಕಸರತ್ತಿನ ಜತೆಗೆ ಮನಸ್ಸಿಗೂ ಖುಷಿ ನೀಡುತ್ತದೆ. ಗಿರಿಪ್ರದಕ್ಷಿಣೆಯ ಕಾರ್ಯಕ್ರಮದಿಂದ ಎಲ್ಲರಲ್ಲೂ ಭಕ್ತಿಭಾವ, ಆಧ್ಯಾತ್ಮಿಕ ಚಿಂತನೆ, ಮಾನಸಿಕ ನೆಮ್ಮದಿ ಹಾಗೂ ದೈಹಿಕ ಆರೋಗ್ಯ ದೊರೆಯಲಿದೆ. ಇದು ಆರೋಗ್ಯ ಹಾಗೂ ಆಧ್ಯಾತ್ಮದ ಸಮ್ಮಿಲನದ ಕಾರ್ಯಕ್ರಮವಾಗಿದೆ ಎಂದು ಹೇಳಿದರು.