ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್‌) ಮೊದಲ ಬಾರಿಗೆ 14 ಮೆಟ್ರಿಕ್‌ ಟನ್‌ ನಂದಿನಿ ತುಪ್ಪವನ್ನು ಅಮೆರಿಕ, ಆಸ್ಟ್ರೇಲಿಯಾ ಮತ್ತು ಸೌದಿ ಅರೇಬಿಯಾ ದೇಶಗಳಿಗೆ ರಫ್ತು ಮಾಡುತ್ತಿದ್ದು, ಈ ‘ನಂದಿನಿ ತುಪ್ಪದ ವಾಹನ’ಕ್ಕೆಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಸಿರು ನಿಶಾನೆ ತೋರಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್‌) ಮೊದಲ ಬಾರಿಗೆ 14 ಮೆಟ್ರಿಕ್‌ ಟನ್‌ ನಂದಿನಿ ತುಪ್ಪವನ್ನು ಅಮೆರಿಕ, ಆಸ್ಟ್ರೇಲಿಯಾ ಮತ್ತು ಸೌದಿ ಅರೇಬಿಯಾ ದೇಶಗಳಿಗೆ ರಫ್ತು ಮಾಡುತ್ತಿದ್ದು, ಈ ‘ನಂದಿನಿ ತುಪ್ಪದ ವಾಹನ’ಕ್ಕೆಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಸಿರು ನಿಶಾನೆ ತೋರಿಸಿದರು.

ಮಂಗಳವಾರ ಬೆಳಗ್ಗೆ ಮುಖ್ಯಮಂತ್ರಿಯವರ ಅಧಿಕೃತ ನಿವಾಸ ಕಾವೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಂದಿನಿ ತುಪ್ಪ ಸಾಗಿಸುವ ವಾಹನಕ್ಕೆ ಚಾಲನೆ ನೀಡಿ ಮಾತನಾಡಿ, ಕರ್ನಾಟಕದ ನಂದಿನಿ ತುಪ್ಪಕ್ಕೆ ದೇಶ, ವಿದೇಶಗಳಲ್ಲೂ ಬೇಡಿಕೆ ಹೆಚ್ಚುತ್ತಿದೆ. ಆಸ್ಟ್ರೇಲಿಯಾ, ಅಮೆರಿಕ ಹಾಗೂ ಸೌದಿ ಅರೇಬಿಯಾ ದೇಶಗಳಿಗೆ ನಂದಿನಿ ತುಪ್ಪ ರಫ್ತು ಮಾಡಲಾಗುತ್ತಿದೆ ಎಂದರು.

ಮೂಲತಃ ಮೈಸೂರು ಜಿಲ್ಲೆಯ ಕುಮಾರ ಎಂಬುವರು ಅಮೆರಿಕದಲ್ಲಿ ನೆಲೆಸಿದ್ದು, ಕೆಎಂಎಫ್‌ ಏಜೆನ್ಸಿ ಪಡೆದಿದ್ದಾರೆ. ಅತ್ಯುತ್ತಮ ಗುಣಮಟ್ಟದ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ದೇಶ, ವಿದೇಶಗಳಲ್ಲಿ ಬೇಡಿಕೆ ಹೆಚ್ಚುತ್ತಿರುವುದು ಸಂತಸದ ಸಂಗತಿ. ಈ ಮೂಲಕ ರೈತರ ಸಂಸ್ಥೆ ಗುಣಮಟ್ಟದ ಹಾಲಿನ ಉತ್ಪನ್ನ ಮಾರಾಟ ಮಾಡುತ್ತಿದ್ದು, ರೈತರ ಅಭಿವೃದ್ಧಿಗೂ ಸಹಕಾರಿಯಾಗಲಿದೆ. ಕೆಎಂಎಫ್‌ ಮಾರುಕಟ್ಟೆ ವಿಸ್ತರಿಸುತ್ತಿದ್ದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.

ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್‌ ಮಾತನಾಡಿ, ನಂದಿನಿ ಹಾಲು, ತುಪ್ಪ, ಐಸ್ ಕ್ರೀಂ, ಸಿಹಿ ತಿನಿಸುಗಳಿಗೆ ಬೇಡಿಕೆ ಬಂದಿದೆ. ದುಬೈನಲ್ಲೂ ನಂದಿನಿ ಐಸ್ ಕ್ರೀಂಗೆ ಬೇಡಿಕೆ ಇದೆ. ಕರ್ನಾಟಕದವರೇ ಅಮೆರಿಕ, ಆಸ್ಟ್ರೇಲಿಯಾದಲ್ಲಿ ಏಜೆನ್ಸಿ ಮಾಡಿದ್ದು ಮಾರುಕಟ್ಟೆ ವಿಸ್ತರಣೆಗೆ ಸಹಕಾರಿಯಾಗಿದೆ ಎಂದ ಅವರು, ನಂದಿನಿ ಬ್ರ್ಯಾಂಡ್‌ ಹೆಸರಿನಲ್ಲಿ ನಕಲಿ ತುಪ್ಪ ಮಾರಾಟಕ್ಕೆ ಕಡಿವಾಣ ಹಾಕಲಾಗಿದೆ. ನಕಲಿ ತುಪ್ಪ ಮಾರುತ್ತಿರುವ ದೂರುಗಳು ಬಂದರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್‌ ಇದ್ದರು.----