ನಂದಿನಿ ಹಾಲು ದೆಹಲಿ ಮಾರುಕಟ್ಟೆಯವರೆಗೂ ವಿಸ್ತರಣೆ: ಮನ್ಮುಲ್ ಅಧ್ಯಕ್ಷ ಬೋರೇಗೌಡ

| Published : Aug 20 2024, 12:48 AM IST

ನಂದಿನಿ ಹಾಲು ದೆಹಲಿ ಮಾರುಕಟ್ಟೆಯವರೆಗೂ ವಿಸ್ತರಣೆ: ಮನ್ಮುಲ್ ಅಧ್ಯಕ್ಷ ಬೋರೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಹಾಲು ಪೂರೈಕೆಯಲ್ಲಿ ಡಿಂಕಾ ಡೇರಿ ತಾಲೂಕಿಗೆ ಮೊದಲ ಸ್ಥಾನದಲ್ಲಿದೆ. ಕ್ಯಾತನಹಳ್ಳಿ ತಾಲೂಕಿಗೆ ದೊಡ್ಡಗ್ರಾಮ. ಇಲ್ಲಿ ಮುಂದಿನ ದಿನಗಳಲ್ಲಿ ರೈತರು ಅಧಿಕ ಹಾಲು ಉತ್ಪಾದನೆ ಕಡೆಗೆ ಗಮನಹರಿಸಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಮನ್ಮುಲ್ ಒಕ್ಕೂಟ ನಂದಿನಿ ಹಾಲನ್ನು ದೆಹಲಿ ಮಾರುಕಟ್ಟೆಯವರೆಗೂ ವಿಸ್ತರಣೆ ಮಾಡಲು ಮುಂದಾಗಿದ್ದೇವೆ ಎಂದು ಅಧ್ಯಕ್ಷ ಬೋರೇಗೌಡ ಹೇಳಿದರು.

ತಾಲೂಕಿನ ಕ್ಯಾತನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಬಿಎಂಸಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ,

ಹಾಲಿನ ಗುಣಮಟ್ಟವನ್ನು ಕಾಪಾಡುವ ಉದ್ದೇಶದಿಂದ ಡೇರಿಗಳಲ್ಲಿ ಬಿಎಂಸಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಒಕ್ಕೂಟಕ್ಕೆ 11 ಲಕ್ಷಕ್ಕೂ ಅಧಿಕ ಹಾಲು ಪೂರೈಕೆ ಯಾಗುತ್ತಿದೆ ಎಂದರು.

ಒಕ್ಕೂಟದಿಂದ ಮಾರುಕಟ್ಟೆ ವಿಸ್ತರಣೆ ಮಾತ್ರ ಕಡಿಮೆ ಇದೆ. ಇದರಿಂದ ಸಾಕಷ್ಟು ನಷ್ಟವಾಗುತ್ತಿದೆ. ಹೀಗಾಗಿ ಹಾಲು ಮಾರುಕಟ್ಟೆಯನ್ನು ದೆಹಲಿ ಮಾರುಕಟ್ಟೆವರೆಗೂ ವಿಸ್ತರಣೆ ಮಾಡಲು ಮುಂದಾಗಿದೆ. ಮುಂದಿನ ತಿಂಗಳಿಂದ ನಮ್ಮ ಹಾಲನ್ನು ದೆಹಲಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುವುದು ಎಂದು ಹೇಳಿದರು.

ಡೇರಿಗಳಲ್ಲಿ ಆನ್‌ಲೈನ್ ಅವಳಡಿಕೆ ಮಾಡಿಕೊಳ್ಳಬೇಕು, ರೈತರಿಗೆ ಹಾಲಿನ ಫ್ಯಾಟ್ ಮೇಲೆ ದರ ನಿಗಧಿಪಡಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು. ಕಾಮನ್ ಸಾಪ್ಟವೇರ್ ಅಳವಡಿಕೆ ಮಾಡಿಕೊಂಡರೆ ಯಂತ್ರವೇ ಹಾಲಿನ ಫ್ಯಾಟ್, ದರ ನಿಗಧಿಪಡಿಸಲಿದೆ. ರೈತರು ಕಡ್ಡಾಯವಾಗಿ ರಾಸುಗಳಿಗೆ ವಿಮೆ ಮಾಡಿಸಬೇಕು, ಡೇರಿಗಳಲ್ಲಿ ರಾಸು ಅಭಿವೃದ್ದಿಯಲ್ಲಿ ಹಣವಿದ್ದರೆ ಆ ಹಣದಲ್ಲಿ ರಾಸುಗಳಿಗೆ ವಿಮೆ ಮಾಡಿಸಿ ಎಂದು ತಿಳಿಸಿದರು.

ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಮಾತನಾಡಿ, ಹಾಲು ಪೂರೈಕೆಯಲ್ಲಿ ಡಿಂಕಾ ಡೇರಿ ತಾಲೂಕಿಗೆ ಮೊದಲ ಸ್ಥಾನದಲ್ಲಿದೆ. ಕ್ಯಾತನಹಳ್ಳಿ ತಾಲೂಕಿಗೆ ದೊಡ್ಡಗ್ರಾಮ. ಇಲ್ಲಿ ಮುಂದಿನ ದಿನಗಳಲ್ಲಿ ರೈತರು ಅಧಿಕ ಹಾಲು ಉತ್ಪಾದನೆ ಕಡೆಗೆ ಗಮನಹರಿಸಬೇಕು ಎಂದರು.

ಮನ್ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಮಾತನಾಡಿ, ನಾನು ನಿರ್ದೇಶಕನಾದ ಬಳಿಕ 11 ಹೊಸ ಬಿಎಂಸಿ ಕೇಂದ್ರಗಳನ್ನು ಆರಂಭಿಸಿದ್ದೇನೆ. ಕೊನೆ ಸ್ಥಾನದಲ್ಲಿದ್ದ ಹಾಲಿನ ಗುಣಮಟ್ಟವನ್ನು ಜಿಲ್ಲೆಗೆ ಎರಡನೇ ಸ್ಥಾನಕ್ಕೆ ತಂದಿದ್ದೇನೆ ಎಂದು ತಿಳಿಸಿದರು.

ವ್ಯವಸ್ಥಾಪಕ ನಿರ್ದೇಶಕ ಪಿ.ಆರ್.ಮಂಜೇಶ್ ಮಾತನಾಡಿ, ಡೇರಿಗಳಲ್ಲಿ ಎಲ್ಲರೂ ಕಡ್ಡಾಯವಾಗಿ ಆನ್‌ಲೈನ್ ವ್ಯವಸ್ಥೆ ಮಾಡಿಕೊಳ್ಳಬೇಕು. ಜಿಲ್ಲೆಯ 200 ಡೇರಿಗಳಲ್ಲಿ ಡಿಜಿಟಲ್ ವ್ಯವಸ್ಥೆ ಮಾಡಲಾಗಿದೆ. ಹಾಲಿನ ಪೌಡರ್‌ಗೆ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಾಗಿ ನಷ್ಟವಾಗುತ್ತಿದೆ. ಅದಕ್ಕಾಗಿಯೇ ಒಕ್ಕೂಟವು ಹಾಲನ್ನು ದೆಹಲಿ ಮಾರುಕಟ್ಟೆಗೂ ತೆಗೆದುಕೊಂಡು ಹೋಗಲು ನಿರ್ಧರಿಸಿದೆ ಎಂದು ತಿಳಿಸಿದರು.

ಮನ್ಮುಲ್ ಉಪವ್ಯವಸ್ಥಾಪಕ ಆರ್.ಪ್ರಸಾದ್, ಸಹಾಯಕ ವ್ಯವಸ್ಥಾಪಕ ಪ್ರಪೂಲ್, ಮಾರ್ಗವಿಸ್ತರ್ಣಾಧಿಕಾರಿಗಳಾದ ಉಷಾ, ನಾಗೇಂದ್ರ, ಟಿಕ್ನಿಷಿಯನ್ ಆನಂದ್, ಡೇರಿ ಅಧ್ಯಕ್ಷ ಮಹದೇವು, ಉಪಾಧ್ಯಕ್ಷ ಎಲ್.ಮೋಹನ್‌ಕುಮಾರ್, ರೈತ ಮುಖಂಡ ದಯಾನಂದ, ಡಾ.ಕೆ.ವೈ.ಶ್ರೀನಿವಾಸ್, ನಿರ್ದೇಶಕರಾದ ಚೇತನ್, ಕೆ.ವಿನೋದ್, ಆನಂದಮೂರ್ತಿ, ಕೆ.ಎಸ್.ಗಿರೀಶ್, ಕೆ.ಎಸ್.ರವಿ, ಕೆ.ಎಂ.ದೇವರಾಜು, ಎಂ.ಸೋಮಶೇಖರ್, ಬಿ.ಎನ್.ಆಶಾ, ಲಕ್ಷ್ಮಮ್ಮ, ಕೆ.ಪಿ.ಅನಿಲ್‌ಕುಮಾರ್, ಕಾರ್‍ಯದರ್ಶಿ ಕೆ.ಆರ್.ವಿಶ್ವನಾಥ್, ಸಿಬ್ಬಂದಿ ಕೆ.ಪಿ.ಸಚ್ಚಿನ್, ಸಂಜಯ್‌ಗೌಡ, ಶ್ರೀಧರ ಸೇರಿ ಹಲವರು ಇದ್ದರು.