ಸಾರಾಂಶ
- ದೇವರ ಉತ್ಸವ ಮೂರ್ತಿಗೆ ಎಂಜಲು ನೀರನ್ನು ಎರಚಿ ಅಪಮಾನ
- ಕಿಡಿಗೇಡಿಗಳನ್ನು ಬಂಧಿಸುವಂತೆ ಒತ್ತಾಯಕನ್ನಡಪ್ರಭ ವಾರ್ತೆ ನಂಜನಗೂಡುಅಂಧಕಾಸುರನ ಸಂಹಾರದ ವೇಳೆ ಧಾರ್ಮಿಕ ಕಾರ್ಯಕ್ರಮಗಳಿಗೆ ಅಡ್ಡಿಪಡಿಸಿ, ದೇವರ ಉತ್ಸವ ಮೂರ್ತಿಗೆ ಎಂಜಲು ನೀರನ್ನು ಎರಚಿ ಅಪಮಾನಗೊಳಿಸಿರುವ ಕಿಡಿಗೇಡಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಶ್ರೀಕಂಠೇಶ್ವರ ಭಕ್ತರು ಸೇರಿ ಜ. 4ರ ಗುರುವಾರ ಸ್ವಯಂ ಘೋಷಿತ ನಂಜನಗೂಡು ಬಂದ್ ಗೆ ಕರೆ ನೀಡಲಾಗಿದೆ ಎಂದು ಯುವ ಬ್ರಿಗೇಡ್ ಮುಖಂಡ ಗಿರೀಶ್ ಹೇಳಿದರು.
ರಾಕ್ಷಸನೆಂದರೆ ಕೋರೆಹಲ್ಲು, ದೊಡ್ಡಮೀಸೆ, ಕೈಯಲ್ಲಿ ಹಿಡಿದ ಖಡ್ಗ, ವಿಷಜಂತು, ಕೈಯಲ್ಲಿ ಹಿಡಿದಿರುವುದು ಸಾಮಾನ್ಯ, ಇನ್ನು ಬೌದ್ದ ಬಿಕ್ಕು ಎಂದು ಹೇಳುವ ಇವರು ಯಾವುದೇ ಬೌದ್ದ ಬಿಕ್ಕು ಹಣೆಯಲ್ಲಿ ತಿಲಕ ಇಡುವುದಿಲ್ಲ. ಆದ್ದರಿಂದ ದೇವಾಲಯದ ಸಂಪ್ರದಾಯದಂತೆ ಹಾಗೂ ಧಾರ್ಮಿಕ ದತ್ತಿ ಇಲಾಖೆಯು ತನ್ನ ಕೈಪಿಡಿಯಲ್ಲಿರುವಂತೆ ಅನೂಚಾನವಾಗಿ ಅಂಧಕಾಸುರನ ಚಿತ್ರ ಬರೆದು ಸರ್ಕಾರದ ವತಿಯಿಂದ ಸಂಹಾರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ಕೆಲವು ಕಿಡಿಗೇಡಿಗಳು ಧಾರ್ಮಿಕ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿ ದೇವರ ಮೇಲೆ ಎಂಜಲು ನೀರನ್ನು ಎರಚಿ ಕೋಟ್ಯಾಂತರ ಭಕ್ತರ ನಂಬಿಕೆಗೆ ಧಕ್ಕೆ ತಂದಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.ಈ ಘಟನೆ ತಡೆಯಬೇಕಾದ ಪೊಲೀಸರೇ ರಾಜಕೀಯ ಒತ್ತಡಕ್ಕೆ ಮಣಿದು, ಕಿಡಿಗೇಡಿಗಳೊಂದಿಗೆ ಶಾಮೀಲಾಗಿ ಶ್ರೀಕಂಠೇಶ್ವರನ ಭಕ್ತರ ಮೇಲೆಯೇ ದೂರು ದಾಖಲು ಮಾಡಿದ್ದಾರೆ. ಹೀಗಾದರೆ ಯಾವ ಭಕ್ತರು ದೇವರ ಉತ್ಸವಾದಿಗಳಲ್ಲಿ ಭಾಗವಹಿಸುತ್ತಾರೆ? ಭಕ್ತರನ್ನು ತಡೆ ಹಿಡಿಯುವ ಉದ್ದೇಶದಿಂದ ಈ ಘಟನೆ ನಡೆಸಿದ್ದಾರೆ. ಈ ಘಟನೆಗೆ ಪೊಲೀಸರ ವೈಫಲ್ಯವೇ ಕಾರಣ ಎಂದು ಆಪಾದಿಸಿದರು.
ದುರ್ಘಟನೆಗೆ ಕಾರಣರಾದ ಕಿಡಿಗೇಡಿಗಳನ್ನು ಬಂಧಿಸುವಂತೆ ಒತ್ತಾಯಿಸಿ ದೇವಾಲಯದ ಮುಂಭಾಗ ಪ್ರತಿಭಟನೆ ನಡೆಸಿತ್ತು. ಘಟನೆ ನಡೆದು 5 ದಿನಗಳೇ ಕಳೆದರೂ ಸಹ ಕಿಡಿಗೇಡಿಗಳನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಆದ್ದರಿಂದ ನಂಜನಗೂಡಿನ ವರ್ತಕರು, ಆಟೋ ಚಾಲಕರು, ಹೋಟೆಲ್ ಮಾಲೀಕರು ಎಲ್ಲ ಸೇರಿ ಒಮ್ಮತದಿಂದ ಜ. 4ರ ಗುರುವಾರ ಬೆಳಗ್ಗೆ 6 ರಿಂದ ಸಂಜೆ 5ರವರೆಗೆ ಬಂದ್ ಆಚರಣೆ ನಡೆಸಲು ತೀರ್ಮಾನಿಸಿದೆ. ಎಲ್ಲರೂ ಸಹ ಸ್ವಯಂ ಘೋಷಿತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್ ಆಚರಣೆ ನಡೆಸಲಿದ್ದಾರೆ. ಒಂದು ವೇಳೆ ಇನ್ನೂ ಕಿಡಿಗೇಡಿಗಳನ್ನು ಬಂಧಿಸಲು ಮೀನಾಮೇಷ ಎಣಿಸಿದಲ್ಲಿ ಜಿಲ್ಲಾದ್ಯಂತ ಬಂದ್ ಗೆ ಕರೆ ನೀಡಲಾಗುವುದು ಎಂದು ಎಚ್ಚರಿಸಿದರು.ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಎನ್.ಆರ್. ಕೃಷ್ಣಪ್ಪಗೌಡ ಮಾತನಾಡಿ, ಕೆಲವು ಕಿಡಿಗೇಡಿಗಳು ದೇವಾಲಯದ ಇಓ ಅವರ ಬಳಿ ಕಾರ್ಯಕ್ರಮ ನಡೆಸದಂತೆ ಹಿಂದಿನ ದಿನವೇ ಒತ್ತಡ ಹೇರಿದ್ದರೆಂದು ಮಾಹಿತಿ ತಿಳಿದು ಬಂದಿದೆ. ಇನ್ನು ಕಾರ್ಯಕ್ರಮದ ದಿನದಂದು ಬೆಳಗ್ಗೆಯಿಂದಲೇ ಚಿತ್ರ ಬರೆಯಲಾಗಿದೆ. ಮಹಿಷಾಸುರನ ಚಿತ್ರಕ್ಕೆ ನೀರು ಎರಚಲು ತಂದಿದ್ದು ಎಂದು ವಾದ ಮಾಡುವ ಕಿಡಿಗೇಡಿಗಳು ಬೆಳಗ್ಗೆಯೇ ಚಿತ್ರಕ್ಕೆ ನೀರು ಹಾಕಿ ಅಳಸಿ ಹಾಕಬಹುದಿತ್ತು. ದುರುದ್ದೇಶದಿಂದಲೇ ದೇವರು ಬರುವವರೆಗೂ ಕಾದು ದೇವರ ಮೇಲೆ ಎಂಜಲು ನೀರು ಎರಚಿದ್ದಾರೆ. ಈ ಘಟನೆಯ ನಡೆದ ಬಗ್ಗೆ ಇಓ ರವರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳವರೆಗೂ ಸಹ ಕ್ರಮಕ್ಕೆ ಪತ್ರ ಬರೆದು ಆಗ್ರಹಿಸಬಹುದಿತ್ತು. ಆದರೆ ದೇವಾಲಯದ ಇಓ ಸಹ ವರದಿ ನೀಡದೆ ತಪ್ಪಿಸಿಕೊಂಡಿದ್ದಾರೆ. ಆದ್ದರಿಂದ ದೇವಾಲಯ ಇಓ ಮೇಲೂ ಕ್ರಮಕೈಗೊಳ್ಳಬೇಕು. ಮತ್ತು ಘಟನೆಗೆ ಕಾರಣರಾದ ಕಿಡಿಗೇಡಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಬಂದ್ಗೆ ಕರೆ ನೀಡಲಾಗಿದೆ. ಇದಕ್ಕೂ ಬಗ್ಗದೆ ಹೋದಲ್ಲಿ ಜಿಲ್ಲಾ ಬಂದ್ ಗೆ ಕರೆ ನೀಡುವ ಜೊತೆಗೆ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದರು.
ನಗರಸಭಾ ಸದಸ್ಯ ಕಪಿಲೇಶ್, ಶಂಕರಪ್ಪ, ಕುಮಾರ್, ನಿತಿನ್, ಸಿದ್ದರಾಜು, ಮಧುರಾಜು, ಕುಮಾರ್, ರಾಮ್ ಮೋಹನ, ಕಿಟ್ಟಿ ಇದ್ದರು.