ನಂಜನಗೂಡಿನ ಆದರ್ಶ ಶಾಲೆಗಿಲ್ಲ ಶಿಕ್ಷಕರು; ವಿದ್ಯಾರ್ಥಿಗಳ ಭವಿಷ್ಯ ಹಾಳು..!

| Published : Jul 03 2025, 11:48 PM IST

ನಂಜನಗೂಡಿನ ಆದರ್ಶ ಶಾಲೆಗಿಲ್ಲ ಶಿಕ್ಷಕರು; ವಿದ್ಯಾರ್ಥಿಗಳ ಭವಿಷ್ಯ ಹಾಳು..!
Share this Article
  • FB
  • TW
  • Linkdin
  • Email

ಸಾರಾಂಶ

ಆದರ್ಶ ಶಾಲೆಯಲ್ಲಿ ಕಳೆದ ಒಂದು ವರ್ಷದಿಂದ ಮುಖ್ಯ ಶಿಕ್ಷಕರನ್ನು ನೇಮಕ ಮಾಡಿಲ್ಲ, ಅಲ್ಲದೆ ಸಮಾಜ ವಿಜ್ಞಾನ ವಿಷಯಕ್ಕೆ ಇಬ್ಬರು ಶಿಕ್ಷಕರಿದ್ದು ಒಬ್ಬರು ಹೆರಿಗೆ ರಜೆಯಲ್ಲಿದ್ದಾರೆ, ಮತ್ತೊಬ್ಬರು ಆರೋಗ್ಯ ಸಮಸ್ಯೆಯಿಂದ ಹಾಜರಾಗಿಲ್ಲ, ಇದರಿಂದ ಸಮಾಜ ವಿಜ್ಞಾನ ವಿಷಯ ಪಾಠ ನಡೆಯುತ್ತಿಲ್ಲ.

ಕನ್ನಡಪ್ರಭ ವಾರ್ತೆ ನಂಜನಗೂಡು

ಪಟ್ಟಣದ ಹುಲ್ಲಹಳ್ಳಿ ರಸ್ತೆಯಲ್ಲಿರುವ ಆದರ್ಶ ಶಾಲೆಯಲ್ಲಿ ಶಿಕ್ಷಕರಿಲ್ಲದೆ ವಿದ್ಯಾರ್ಥಿಗಳಿಗೆ ಸರಿಯಾದ ಪಾಠ ನಡೆಯದೆ ಭವಿಷ್ಯ ಹಾಳಾಗುವ ಆತಂಕವನ್ನು ಪೋಷಕರು ವ್ಯಕ್ತಪಡಿಸಿದ್ದಾರೆ.

ಶಾಲಾ ಅಭಿವೃದ್ಧಿ ಅಧ್ಯಕ್ಷೆ ರೇಖಾ ಮಾತನಾಡಿ, ಆದರ್ಶ ಶಾಲೆಯಲ್ಲಿ ಕಳೆದ ಒಂದು ವರ್ಷದಿಂದ ಮುಖ್ಯ ಶಿಕ್ಷಕರನ್ನು ನೇಮಕ ಮಾಡಿಲ್ಲ, ಅಲ್ಲದೆ ಸಮಾಜ ವಿಜ್ಞಾನ ವಿಷಯಕ್ಕೆ ಇಬ್ಬರು ಶಿಕ್ಷಕರಿದ್ದು ಒಬ್ಬರು ಹೆರಿಗೆ ರಜೆಯಲ್ಲಿದ್ದಾರೆ, ಮತ್ತೊಬ್ಬರು ಆರೋಗ್ಯ ಸಮಸ್ಯೆಯಿಂದ ಹಾಜರಾಗಿಲ್ಲ, ಇದರಿಂದ ಸಮಾಜ ವಿಜ್ಞಾನ ವಿಷಯ ಪಾಠ ನಡೆಯುತ್ತಿಲ್ಲ, ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದರು ಸಹ ಮುಖ್ಯ ಶಿಕ್ಷಕರ ನೇಮಕಾತಿಗೆ ಕ್ರಮವಹಿಸಿಲ್ಲ, ಅಲ್ಲದೆ ಸಮಾಜ ವಿಜ್ಞಾನ ಪಠ್ಯ ವಿಷಯದ ಬಗ್ಗೆ ಪಾಠ ಮಾಡಲು ತಾತ್ಕಾಲಿಕವಾಗಿಯಾದರೂ ಶಿಕ್ಷಕರನ್ನು ನೇಮಕ ಮಾಡಿಕೊಂಡಿಲ್ಲ, ಕಳೆದ ಹಲವಾರು ವರ್ಷಗಳಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇಕಡ ನೂರರಷ್ಟು ಫಲಿತಾಂಶವನ್ನು ನೀಡುತ್ತಾ ಬಂದಿರುವ ಶಾಲೆಯಲ್ಲಿ ಈ ಬಾರಿ ಫಲಿತಾಂಶ ಕುಂಠಿತಗೊಂಡು ವಿದ್ಯಾರ್ಥಿಗಳ ಭವಿಷ್ಯ ಹಾಳಾಗುವ ಆತಂಕದಲ್ಲಿ ಎಲ್ಲ ಪೋಷಕರು ಇದ್ದೇವೆ, ನಮ್ಮ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಮೇಲಾಧಿಕಾರಿಗಳು ಕ್ರಮವಹಿಸಿ ಶಿಕ್ಷಕರನ್ನು ನೇಮಕಾತಿಗೊಳಿಸಬೇಕು ಎಂದು ಒತ್ತಾಯಿಸಿದರು.

ಶಾಲಾ ಅಭಿವೃದ್ಧಿ ಸಮಿತಿ ಸದಸ್ಯ ಹಾಗೂ ಪೋಷಕರಾದ ರಾಜಣ್ಣ ಮಾತನಾಡಿ, ಶಾಲೆಯಲ್ಲಿ ಸುಮಾರು 520 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಮುಖ್ಯವಾಗಿ ಶಾಲಾ ವಿದ್ಯಾರ್ಥಿಗಳಿಗೆ ಸರ್ಕಾರ ನಿಗದಿಪಡಿಸಿರುವ ಮೆನು ಚಾರ್ಟ್ ಪ್ರಕಾರ ಊಟವನ್ನು ನೀಡುತ್ತಿಲ್ಲ, ಶಾಲೆಯಲ್ಲಿ ಮುಖ್ಯ ಅಡುಗೆ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿಲ್ಲ, ಶಾಲೆಯ ದೈಹಿಕ ಶಿಕ್ಷಕರಾದ ಯಶೋದ್ ಅವರಿಗೆ ಅಡುಗೆಯ ಉಸ್ತುವಾರಿಯನ್ನು ವಹಿಸಲಾಗಿದೆ.

ಸರ್ಕಾರ ನಿಗದಿಪಡಿಸಿರುವ ಮೆನು ಚಾರ್ಟ್ ಪ್ರಕಾರ ಏಕೆ ನೀವು ಊಟವನ್ನು ನೀಡುತ್ತಿಲ್ಲ ಎಂದು ಪ್ರಶ್ನಿಸಿದರೆ, ಅವರು ನಮಗೆ ದೂರವಾಣಿ ಕರೆ ಮೂಲಕ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಮೇಲಾಧಿಕಾರಿಗಳಿಗೆ ದೂರು ನೀಡಿದ್ದರೂ ಸಹ ಅವರು ಕ್ರಮ ವಹಿಸಲು ಮುಂದಾಗಿಲ್ಲ, ಶಾಲೆಯಲ್ಲಿ ಮುಖ್ಯ ಶಿಕ್ಷಕರಿಲ್ಲದೆ ಕೆಲವು ಶಿಕ್ಷಕರು ಲಂಗು- ಲಗಾಮಿಲ್ಲದೆ ಅತಿರೇಕದಿಂದ ವರ್ತಿಸುತ್ತಿದ್ದು, ಈ ಬಗ್ಗೆ ಶಾಸಕರು ಮತ್ತು ಅಧಿಕಾರಿಗಳು ಕ್ರಮವಹಿಸಿ ಮುಖ್ಯ ಶಿಕ್ಷಕರನ್ನು ನೇಮಿಸಬೇಕು ಮತ್ತು ತಾತ್ಕಾಲಿಕವಾಗಿ ಸಮಾಜ ವಿಜ್ಞಾನ ಶಿಕ್ಷಕರನ್ನು, ಅಲ್ಲದೆ ಮುಖ್ಯ ಅಡುಗೆ ಸಿಬ್ಬಂದಿಯನ್ನು ನೇಮಿಸಬೇಕು ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ರೂಪಿಸಲಾಗುವುದು ಎಂದು ಅವರು ಎಚ್ಚರಿಸಿದರು.

ಪೋಷಕರಾದ ರಾಜಶೇಖರ್, ದೇಸಿ ಗೌಡ, ಮಮತಾ, ಗಿರೀಶ್, ನವೀನ್, ವಕೀಲರಾದ ಗಿರೀಶ್, ಹಲವಾರು ಪೋಷಕರು ಇದ್ದರು.