ಹರಿಯಾಣದ ಪೈ. ಸುಮೀತ್ ಗುಜ್ಜರ್ ಗೆ ಸುತ್ತೂರು ಕೇಸರಿ ಪ್ರಶಸ್ತಿ

| Published : Feb 11 2024, 01:45 AM IST

ಸಾರಾಂಶ

ಉಳಿದಂತೆ ಮೈಸೂರು, ಚಾಮರಾಜನಗರ, ಹಾಸನ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ 65 ಜೊತೆ ಕುಸ್ತಿ ಪಟುಗಳು ಪಂದ್ಯಾವಳಿಯಲ್ಲಿ ಸೆಣೆಸಾಟ ನಡೆಸಿದರು. ಎಲ್ಲರಿಗೂ ತಲಾ 5 ನಿಮಿಷಕ್ಕೆ ನಿಗದಿ ಮಾಡಿ ಕಣಕ್ಕೆ ಬಿಡಲಾಗಿತ್ತು. ಭಾಗವಹಿಸಿದವರಿಗೆ ಪ್ರಮಾಣ ಪತ್ರ ಹಾಗೂ ಪಾರಿತೋಷಕ ನೀಡಿ

ಕನ್ನಡಪ್ರಭ ವಾರ್ತೆ ನಂಜನಗೂಡು

ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ನಡೆದ 42ನೇ ರಾಷ್ಟ್ರಮಟ್ಟದ ನಾಡಕುಸ್ತಿ ಪಂದ್ಯಾವಳಿಯಲ್ಲಿ ಪ್ರತಿಷ್ಟಿತ ಸುತ್ತೂರು ಕೇಸರಿ ಪ್ರಶಸ್ತಿಯನ್ನು ಹರಿಯಾಣದ ಪೈ. ಸುಮೀತ್ ಗುಜ್ಜರ್ ತಮ್ಮ ಎದುರಾಳಿ ಮಹಾರಾಷ್ಟ್ರದ ಪೈ. ಸಾಗರ್ ತಾಮಡೆಯನ್ನು ಮಣಿಸಿ ಸುತ್ತೂರು ಕೇಸರಿ ಪ್ರಶಸ್ತಿ ಪಡೆದುಕೊಂಡರು.

ಶನಿವಾರ ಸುತ್ತೂರು ಜಾತ್ರಾ ಮಹೋತ್ಸವದ ಅಂಗವಾಗಿ 42ನೇ ರಾಷ್ಟ್ರ ಮಟ್ಟದ 65 ಜೊತೆ ಕಾಟಾ ಕುಸ್ತಿ ಪಂದ್ಯಾವಳಿಯನ್ನು ಏರ್ಪಡಿಸಲಾಗಿತ್ತು. ಸುತ್ತೂರು ಮಠಾಧ್ಯಕ್ಷ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಮ್ಮುಖದಲ್ಲಿ ಅರಣ್ಯ ಸಚಿವ ಈಶ್ವರ್ ಬಿ. ಖಂಡ್ರೆ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದರು.

ಸುತ್ತೂರು ಕುಮಾರ ಪ್ರಶಸ್ತಿಗಾಗಿ ನಡೆದ ಸೆಣಸಾಟದ ಪಂದ್ಯದಲ್ಲಿ ಮೈಸೂರು ಚಾಮುಂಡಿ ಕ್ರೀಡಾಂಗಣದ ಪೈ. ನಿತಿನ್ ಮತ್ತೋರ್ವ ಕುಸ್ತಿಪಟು ಮೈಸೂರಿನ ಭೂತಪ್ಪನವರ ಗರಡಿ ಪೈ. ದೀಕ್ಷಿತ್ ಅವರನ್ನು ಮಣಿಸಿ ಸುತ್ತೂರು ಕುಮಾರ ಪ್ರಶಸ್ತಿಯನ್ನು ಜಯಿಸಿದರು.

ಉಳಿದಂತೆ ಮೈಸೂರು, ಚಾಮರಾಜನಗರ, ಹಾಸನ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ 65 ಜೊತೆ ಕುಸ್ತಿ ಪಟುಗಳು ಪಂದ್ಯಾವಳಿಯಲ್ಲಿ ಸೆಣೆಸಾಟ ನಡೆಸಿದರು. ಎಲ್ಲರಿಗೂ ತಲಾ 5 ನಿಮಿಷಕ್ಕೆ ನಿಗದಿ ಮಾಡಿ ಕಣಕ್ಕೆ ಬಿಡಲಾಗಿತ್ತು. ಭಾಗವಹಿಸಿದವರಿಗೆ ಪ್ರಮಾಣ ಪತ್ರ ಹಾಗೂ ಪಾರಿತೋಷಕ ನೀಡಿ ಗೌರವಿಸಿತು.

ಇನ್ನು ಕುಸ್ತಿಯನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಜನರು ಶಿಳ್ಳೆ. ಚಪ್ಪಾಳೆ ಮೂಲಕ ಪೈಲ್ವಾರನ್ನು ಹುರಿದುಂಬಿಸಿದರು. ಪೈಲ್ವಾನರ ಸೆಟಸಾಟದಲ್ಲಿ ಪಟ್ಟುಗಳನ್ನು ಹಾಕಿ ಗೆಲುವಿಗಾಗಿ ಹೋರಾಟ ನಡೆಸುವ ಹೋರಾಟವನ್ನು ಕಂಡು ಪ್ರೇಕ್ಷಕರು ಖುಷಿಪಟ್ಟರು.

ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಾತನಾಡಿ, ಬದಲಾದ ಪರಿಸ್ಥಿತಿಯಲ್ಲಿ ಜನರ ಜೀವನ ಶೈಲಿ ಹಾಗೂ ಆಹಾರ ಸೇವನೆ ಕ್ರಮ ಬದಲಾಗಿದ್ದು, ಜೊತೆಗೆ ದೈಹಿಕ ಕಸರತ್ತಿನ ಆಟೋಟ ಚಟುವಟಿಕೆಗಳಿಂದಲೂ ದೂರಾಗಿರುವುದರಿಂದ ರೋಗ ರುಜಿನಗಳಿಗೆ ತುತ್ತಾಗುತ್ತಿದ್ದಾರೆ. ಹೀಗಾಗಿ ನಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಂಡು ಆರೋಗ್ಯ ಪೂರ್ಣ ಜೀವನಕ್ಕೆ ಮುಂದಾಗಬೇಕು ಎಂದರು.

ಈ ಹಿಂದೆ ಹಳ್ಳಿಗಳಲ್ಲಿ ಕಾಣುತ್ತಿದ್ದ ವ್ಯಾಯಾಮ ಹಾಗೂ ಗರಡಿ ಮನೆಗಳು ಈಗ ಕಣ್ಮರೆಯಾಗುತ್ತಿದ್ದು, ಯುವ ಜನರು ಕುಸ್ತಿಯಂತಹ ದೇಸೀ ಕಲೆಗಳಿಂದ ದೂರಾಗಿ ಸಾಮಾಜಿಕ ಜಾಲತಾಣದ ದಾಸರಾಗುತ್ತಿದ್ದಾರೆ, ನಮ್ಮ ಆರೋಗ್ಯ ನಮ್ಮ ಕೈಯಲ್ಲಿಯೇ ಇದ್ದು, ನಿಯಮಿತವಾಗಿ ಯೋಗ, ವ್ಯಾಯಾಮ ಹಾಗೂ ಆಟೋಟ ಚಟುವಟಿಕೆಯಲ್ಲಿ ಭಾಗಿಯಾಗುವ ಮೂಲಕ ಉತ್ತಮ ಆರೋಗ್ಯವನ್ನು ರೂಢಿಸಿಕೊಳ್ಳಬೇಕು, ಈ ನಿಟ್ಟಿನಲ್ಲಿ ಜಾತ್ರೆಯಲ್ಲಿ ಕುಸ್ತಿಯಂತಹ ಸ್ಪರ್ಧೆಯನ್ನು ಆಯೋಜಿಸಿ ಪ್ರೋತ್ಸಾಹ ನೀಡುತ್ತಿರುವ ಸ್ವಾಮೀಜಿಯವರ ಕಾರ್ಯ ಮಹತ್ತರವಾದುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮೈಸೂರಿನ ಉರಿಲಿಂಗ ಪೆದ್ದಿಮಠದ ಶ್ರೀ ಜ್ಞಾನ ಪ್ರಕಾಶ್ ಸ್ವಾಮೀಜಿ, ಶಾಸಕರಾದ ಗಣೇಶ್ ಪ್ರಸಾದ್, ದೇವೇಂದ್ರಪ್ಪ, ಮಾಜಿ ಶಾಸಕ ಡಾ. ಯತೀಂದ್ರ ಸಿದ್ಧರಾಮಯ್ಯ, ಚಾಮುಲ್ ಅಧ್ಯಕ್ಷ ವೈ.ಸಿ. ನಾಗೇಂದ್ರ, ವಿಶ್ರಾಂತ ಕುಲಪತಿ ಹೇಮಂತ್ ಕುಮಾರ್ ಭಾಗವಹಿಸಿದ್ದರು.