ವಿದ್ಯಾರ್ಥಿಗಳ ಶಿಕ್ಷಣವು ಕೇವಲ ಪಠ್ಯಪುಸ್ತಕಗಳಿಗೆ ಸೀಮಿತವಾಗದೆ ವ್ಯಕ್ತಿತ್ವ ನಿರ್ಮಾಣ, ಸಾಮಾಜಿಕ ಜವಾಬ್ದಾರಿ ಮತ್ತು ಜೀವನ ಕೌಶಲ್ಯಗಳ ಬೆಳವಣಿಗೆಯನ್ನೂ ಒಳಗೊಂಡಿರಬೇಕು
ಕನ್ನಡಪ್ರಭ ವಾರ್ತೆ ನಂಜನಗೂಡು
ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪೋಷಕರ ಪಾತ್ರ ಮಹತ್ವದ್ದು ಎಂದು ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಎಂ.ಎಸ್. ರಾಮಪ್ರಸಾದ್ ಹೇಳಿದರು.ಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಮಹಾ ಪೋಷಕರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಶಿಕ್ಷಣವು ಕೇವಲ ಪಠ್ಯಪುಸ್ತಕಗಳಿಗೆ ಸೀಮಿತವಾಗದೆ ವ್ಯಕ್ತಿತ್ವ ನಿರ್ಮಾಣ, ಸಾಮಾಜಿಕ ಜವಾಬ್ದಾರಿ ಮತ್ತು ಜೀವನ ಕೌಶಲ್ಯಗಳ ಬೆಳವಣಿಗೆಯನ್ನೂ ಒಳಗೊಂಡಿರಬೇಕು ಎಂದು ತಿಳಿಸಿದರು. ಇಂದಿನ ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದು, ಅವರಿಗೆ ಸರಿಯಾದ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡುವುದು ಪೋಷಕರ ಪ್ರಮುಖ ಕರ್ತವ್ಯವಾಗಿದೆ ಎಂದರು.ಮಕ್ಕಳ ಶೈಕ್ಷಣಿಕ ಸಾಧನೆಯ ಜೊತೆಗೆ ಅವರ ಮಾನಸಿಕ ಆರೋಗ್ಯ, ಮೌಲ್ಯಗಳು ಹಾಗೂ ಸಾಮಾಜಿಕ ನಡವಳಿಕೆಗಳ ಮೇಲೂ ಪೋಷಕರು ಗಮನಹರಿಸಬೇಕು ಎಂದು ಸಲಹೆ ನೀಡಿದರು.
ಆಂಗ್ಲ ಭಾಷೆ ಉಪನ್ಯಾಸಕ ರಂಗಸ್ವಾಮಿ ಮಾಹಿತಿ ನೀಡಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಕೇವಲ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಗಳಿಸುವುದಷ್ಟೇ ಅಲ್ಲದೆ, ಸಂವಹನ ಕೌಶಲ್ಯ, ನಾಯಕತ್ವ ಗುಣ, ಸಮಸ್ಯೆ ಪರಿಹಾರ ಸಾಮರ್ಥ್ಯ ಮತ್ತು ತಂತ್ರಜ್ಞಾನ ಜ್ಞಾನವನ್ನು ಬೆಳೆಸಿಕೊಳ್ಳುವುದು ಅಗತ್ಯವಾಗಿದೆ ಎಂದು ಹೇಳಿದರು.ಕಾಲೇಜಿನ ಶೈಕ್ಷಣಿಕ ಮತ್ತು ಆಡಳಿತಾತ್ಮಕ ನಿಯಮಗಳ ಕುರಿತು ಮಾತನಾಡಿದ ಹಿರಿಯ ಉಪನ್ಯಾಸಕ ಎಸ್. ಲಿಂಗಣ್ಣಸ್ವಾಮಿ ಅವರು, ವಿದ್ಯಾರ್ಥಿಗಳ ಹಾಜರಾತಿ, ಶಿಸ್ತು, ಪರೀಕ್ಷಾ ಕ್ರಮ, ಆಂತರಿಕ ಮೌಲ್ಯಮಾಪನ, ಗ್ರಂಥಾಲಯ ಬಳಕೆ ಹಾಗೂ ಕಾಲೇಜಿನ ವಿವಿಧ ಸೌಲಭ್ಯಗಳ ಕುರಿತು ಪೋಷಕರಿಗೆ ವಿವರವಾದ ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಸಿ.ಆರ್. ದಿನೇಶ್ ಮಾತನಾಡಿ, ವಿದ್ಯಾರ್ಥಿಗಳ ಯಶಸ್ಸು ಉಪನ್ಯಾಸಕರು ಮತ್ತು ಪೋಷಕರ ಜಂಟಿ ಪ್ರಯತ್ನದ ಫಲವಾಗಿದೆ ಎಂದು ತಿಳಿಸಿದರು.ವಿದ್ಯಾರ್ಥಿಗಳ ಹಾಜರಾತಿ, ಪರೀಕ್ಷಾ ಫಲಿತಾಂಶಗಳು, ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆ, ವೃತ್ತಿ ಮಾರ್ಗದರ್ಶನ ಹಾಗೂ ಮುಂದಿನ ಶೈಕ್ಷಣಿಕ ಯೋಜನೆಗಳ ಕುರಿತು ಪೋಷಕರೊಂದಿಗೆ ಮುಕ್ತ ಸಂವಾದ ನಡೆಯಿತು.
ಸಭೆಯಲ್ಲಿ ಉಪನ್ಯಾಸಕ ಟಿ.ಕೆ. ರವಿ, ಎಚ್.ಕೆ. ಸ್ವಾಮಿಗೌಡ, ಅದಿಲ್ಹ ಹುಸೇನ್, ಕಾಲೇಜು ಅಭಿವೃದ್ಧಿ ಅಭಿವೃದ್ಧಿ ಸದಸ್ಯರಾದ ಜಗದೀಶ್, ಪೋಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.