ಚಾಮುಲ್ ಅಧ್ಯಕ್ಷರಾಗಿ ನಂಜುಂಡಸ್ವಾಮಿ ಅವಿರೋಧ ಆಯ್ಕೆ

| Published : Feb 11 2025, 12:47 AM IST

ಸಾರಾಂಶ

ಚಾಮರಾಜನಗರ ತಾಲೂಕಿನ ಕುದೇರಿನಲ್ಲಿರುವ ಚಾಮುಲ್‌ಗೆ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ನಂಜುಂಡಸ್ವಾಮಿ ಅವಿರೋಧವಾಗಿ ಆಯ್ಕೆಯಾದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜಿಲ್ಲಾ ಹಾಲು ಉತ್ಪಾದಕರ ಸಂಘ (ಚಾಮುಲ್) ನೂತನ ಅಧ್ಯಕ್ಷರಾಗಿ ಮಧುವನಹಳ್ಳಿ ನಂಜುಂಡಸ್ವಾಮಿ ಸೋಮವಾರ ಅವಿರೋಧ ಆಯ್ಕೆಯಾದರು.

ತಾಲೂಕಿನ ಕುದೇರು ಗ್ರಾಮದ ಚಾಮುಲ್‌ನ ಆಡಳಿತ ಕಚೇರಿಯಲ್ಲಿ ಸೋಮವಾರ ಚುನಾವಣೆ ನಡೆಯಿತು. ಇದಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ನಂಜುಂಡಸ್ವಾಮಿ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯಾಗಿದ್ದ ಶಿವಶಂಕರ್ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಿದರು.ಚಾಮುಲ್ ಅಧ್ಯಕ್ಷರಾಗಿದ್ದ ವೈ.ಸಿ.ನಾಗೇಂದ್ರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿ ಪದಚ್ಯುತಗೊಂಡ ಹಿನ್ನೆಲೆಯಲ್ಲಿ ಖಾಲಿಯಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಉಳಿದ ೨ ವರ್ಷ ೪ ತಿಂಗಳ ಅವಧಿಗೆ ನಂಜುಂಡಸ್ವಾಮಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇಂದಿನಿಂದಲೇ ರೈತರಿಗೆ ಒಂದು ರು.ಹೆಚ್ಚಳ:

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನಂಜುಂಡಸ್ವಾಮಿ ಮಾತನಾಡಿ, ನಾನು ರೈತರ ಪರವಾಗಿದ್ದೇನೆ. ಕರ್ನಾಟಕ ಹಾಲು ಮಹಾಮಂಡಲದಲ್ಲೂ ಕೆಲಸ ಮಾಡಿರುವ ಅನುಭವವಿದೆ. ನಿರ್ದೇಶಕನಾಗಿ ಆಯ್ಕೆಯಾದ ಬಳಿಕ ಹೈನುಗಾರರ ಸಮಸ್ಯೆಗಳ ಬಗ್ಗೆ ಸಾಕಷ್ಟು ಬೆಳಕು ಚೆಲ್ಲುವ ಕೆಲಸ ಮಾಡಿದ್ದೇನೆ. ನಾವು ಈಗ ನೀಡುತ್ತಿರುವ ಹಾಲಿನ ದರ ಕಡಿಮೆ ಇದ್ದು ಇದನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ವಹಿಸುತ್ತೇನೆ. ಇಂದಿನಿಂದ ಚಾಮುಲ್‌ನ ಹೈನಗಾರರಿಗೆ ಈ ಹಿಂದೆ ನಿಗದಿಯಾಗಿದ್ದಂತೆ ಲೀ.ಹಾಲಿಗೆ ೧ ರು. ಹೆಚ್ಚಳ ಮಾಡಲಾಗುವುದು. ಇದರೊಂದಿಗೆ ಚಾಮುಲ್‌ಗೆ ಸರ್ಕಾರದ ವತಿಯಿಂದ ೫೨ ಕೋಟಿ ರು. ಬಾಕಿ ಬರಬೇಕಿದ್ದು ಈ ಸಂಬಂಧ ಸಿಎಂ, ಡಿಸಿಎಂ ಹಾಗೂ ಸಹಕಾರ ಸಚಿವರನ್ನು ಭೇಟಿ ಮಾಡಿ ಈ ಹಣವನ್ನು ಆದಷ್ಟು ಬೇಗ ಬಿಡುಗಡೆಗೊಳಿಸಿ ಅನುಕೂಲ ಮಾಡಲಾಗುವುದು. ಇದರೊಂದಿಗೆ ಚಾಮುಲ್‌ನಲ್ಲಿ ೬೦ ಕೋಟಿ ರು. ವೆಚ್ಚದಲ್ಲಿ ನೂತನವಾಗಿ ಐಸ್ ಕ್ರೀಂ ಘಟಕ ಸ್ಥಾಪಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಜೊತೆಗೆ ಹೈನುಗಾರರಿಗೆ ಅನುಕೂಲವಾಗಲು ಲೀ. ಹಾಲಿಗೆ ಕನಿಷ್ಟ ೪೦ ರು. ದರ ನೀಡುವಂತೆ ಮನವಿ ಮಾಡಲಾಗುವುದು. ಹೈನುಗಾರರ ಹಿತ ಕಾಯುವ ಕೆಲಸವನ್ನು ನಾನು ಪ್ರಾಮಾಣಿಕವಾಗಿ ಮಾಡುವುದಾಗಿ ತಿಳಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿ, ಚಾ.ನಗರದಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ನಿರ್ಮಾಣಕ್ಕೆ ಸಹಕಾರ ಸಚಿವರಾಗಿದ್ದ ದಿ. ಎಚ್.ಎಸ್. ಮಹದೇವಪ್ರಸಾದ್ ಕೊಡುಗೆ ಬಹಳ ಇದೆ. ಅವರು ಮೈಸೂರಿನಿಂದ ಒಕ್ಕೂಟವನ್ನು ಪ್ರತ್ಯೇಕಗೊಳಿಸುವ ಜೊತೆಗೆ ಅಭಿವೃದ್ದಿಗಾಗಿ ನೂರಾರು ಕೋಟಿ ರು. ಯೋಜನೆಯನ್ನು ಅನುಷ್ಠಾನ ಮಾಡಿದರು. ಟೆಟ್ರಾ ಪ್ಯಾಕೇಟ್ ಯೂನಿಟ್ ಸ್ಥಾಪನೆ ಮತ್ತು ಸಹಕಾರ ತತ್ವದಲ್ಲಿ ಅವರಿಗೆ ಇದ್ದ ನಂಬಿಕೆ ಜಿಲ್ಲೆಯಲ್ಲಿ ಚಾಮುಲ್ ಬೆಳೆಯಲು ಕಾರಣವಾಗಿದೆ. ನಮ್ಮ ಪಕ್ಷದ ಮುಖಂಡರು ಅಧ್ಯಕ್ಷರಾಗಿದ್ದಾರೆ. ಅವರ ಆಶಯದಂತೆ ಕಾರ್ಯ ನಿರ್ವಹಣೆ ಮಾಡುವ ಮೂಲಕ ರೈತರಿಗೆ ಉಪಯುಕ್ತವಾದ ಯೋಜನೆಗಳನ್ನು ಜಾರಿ ಮಾಡುವಂತೆ ಸಲಹೆ ನೀಡಿದರು. ಹಿರಿಯ ನಿರ್ದೇಶಕ ಎಚ್.ಎಸ್.ನಂಜುಂಡಪ್ರಸಾದ್ ಮಾತನಾಡಿ, ಜಿಲ್ಲೆಯಲ್ಲಿ ೨೦೧೭ ರಲ್ಲಿ ಚಾಮುಲ್ ಘಟಕ ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಉದ್ಘಾಟಿಸಿದ್ದರು. ಇದಕ್ಕೆ ಕಾರಣರಾಗಿದ್ದು ಅಂದಿನ ಸಚಿವ ದಿ.ಮಹದೇವಪ್ರಸಾದ್, ಸಂಸದರಾಗಿದ್ದ ದಿ. ಆರ್. ಧ್ರುವನಾರಾಯಣ, ಶಾಸಕರಾದ ದಿ. ಎಸ್. ಜಯಣ್ಣ, ಸಿ. ಪುಟ್ಟರಂಗಶೆಟ್ಟಿ, ಆರ್. ನರೇಂದ್ರರ ಶ್ರಮವೂ ಇದೆ. ಕಳೆದ ವರ್ಷದಿಂದ ಚಾಮುಲ್‌ನಲ್ಲಿ ೧ ಕೋಟಿ ಲೀ. ಹಾಲು ಉತ್ಪಾದನೆಯಾಗುತ್ತಿದೆ. ಜಿಲ್ಲೆಯಲ್ಲಿ ಪ್ರತಿನಿತ್ಯ ೫೦ ರಿಂದ ೬೦ ಸಾವಿರ ಲೀ.ಖಾಸಗಿ ಹಾಲು ಪೂರೈಕೆಯಾಗುತ್ತಿದ್ದು ನಮ್ಮ ಬ್ರಾಂಡ್‌ನ ಮಾರುಕಟ್ಟೆ ಹೆಚ್ಚಿಸಲು ನೂತನ ಅಧ್ಯಕ್ಷರು ಶ್ರಮ ವಹಿಸಬೇಕು, ಹೈನುಗಾರರ ಹಾಗೂ ರೈತರ ಹಿತ ಕಾಯುವ ಕೆಲಸವನ್ನು ಮಾಡಬೇಕು ಎಂದು ಮನವಿ ಮಾಡಿದರು.ನೂತನ ಅಧ್ಯಕ್ಷರಿಗೆ ನೆರೆದಿದ್ದ ನೂರಾರು ಮಂದಿ ಅಭಿನಂದನೆಗಳನ್ನು ಸಲ್ಲಿಸಿದರು. ನಿರ್ದೇಶಕರಾದ ಮಹದೇವಪ್ರಸಾದ್, ಸದಾಶಿವಮೂರ್ತಿ, ಶೀಲಾಪುಟ್ಟರಂಗಶೆಟ್ಟಿ ಕಮರವಾಡಿ ರೇವಣ್ಣ, ಸಾಹುಲ್, ವ್ಯವಸ್ಥಾಪಕ ನಿರ್ದೇಶಕ ರಾಜ್‌ಕುಮಾರ್, ಶ್ರೀಕಾಂತ್ ಇದ್ದರು.