ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಇಲ್ಲಿನ ಪುರಸಭೆ ಸಹ ಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ‘ನನ್ನ ಮರ ನನ್ನ ನೆರಳು’ ಕಾರ್ಯಕ್ರಮದಡಿ 5 ಮಂದಿ ಪರಿಸರ ಪ್ರೇಮಿಗಳಾಗಿ ಆಯ್ಕೆಯಾಗಿದ್ದಾರೆ.

ಪುರಸಭೆ ಕಚೇರಿ ಆವರಣದಲ್ಲಿ ನಡೆದ ಪರಿಸರ ಪ್ರೇಮಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಲಕ್ಕಿ ಡಿಪ್ ಎತ್ತುವ ಮೂಲಕ 5 ಮಂದಿ ಅದೃಷ್ಟಶಾಲಿ ವಿಜೇತರಾಗಿದ್ದಾರೆ ಎಂದು ಪುರಸಭೆ ಮುಖ್ಯಾಧಿಕಾರಿ ಎಸ್. ಸರವಣ ತಿಳಿಸಿದ್ದಾರೆ.

ಪಟ್ಟಣದ ಸಾತ್ವಿಕ, ಕಿರಣ್, ಅಂಜನ್ ಜೀವನ್, ತನುಶ್ರೀ, ಗೀತಾ ಪರಿಸರ ಪ್ರೇಮಿಗಳಾಗಿ ಆಯ್ಕೆಯಾಗಿದ್ದಾರೆ. ವಿಜೇತ ಐದು ಮಂದಿಗೆ ಅತೀ ಶ್ರೀಘ್ರದಲ್ಲಿ ಜಿಲ್ಲಾಧಿಕಾರಿ ಶ್ರೀರೂಪಾ, ಪುರಸಭೆ ಆಡಳಿತಾಧಿಕಾರಿ ದಿನೇಶ್‌ ಕುಮಾರ್‌ ಮೀನಾ ತಲಾ ಸಾವಿರ ನಗದು ಬಹುಮಾನ ಹಾಗೂ ವಿಶೇಷ ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು ಎಂದರು.

ಪರಿಸರ ಆಂದೋಲನದಲ್ಲಿ ಭಾಗವಹಿಸಿ ಗಿಡ ನೆಟ್ಟ ನೀರೆರೆದ ಎಲ್ಲಾ ೧೦೦ ಮಂದಿ ಸ್ಪರ್ಧಿಗಳಿಗೂ ಸಹ ಪುರಸಭೆಯು ಪ್ರೋತ್ಸಾಹಕ ಪ್ರಮಾಣ ಪತ್ರಗಳನ್ನೂ ವಿತರಿಸಲಾಗುವುದು ಎಂದರು.


ಗುಂಡ್ಲುಪೇಟೆ ಪುರಸಭೆ ಇತಿಹಾಸದಲ್ಲೇ ಇಂಥದೊಂದು ನಾಗರಿಕ ಕೇಂದ್ರೀತ ವಿನೂತನ ಪರಿಸರ ಸ್ಪರ್ಧೆ ಆಯೋಜಿಸಿರುವುದು ಇದೇ ಮೊದಲಾಗಿದೆ. ಪರಿಸರ ಆಂದೋಲನಕ್ಕೆ ಸಾರ್ವಜನಿಕರಿಂದಲೂ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ ಎಂದರು.ಪಟ್ಟಣದ ನೂರಾರು ಮಂದಿ ನಾಗರಿಕರು ಪರಿಸರ ಪ್ರೇಮಿಗಳಾಗಿ ತಮ್ಮ ತಮ್ಮ ಮನೆಗಳ ಮುಂದೆ ಸ್ವಯಂ ಪ್ರೇರಿತರಾಗಿ ಸಸಿಗಳನ್ನು ನೆಟ್ಟು, ಪೋಷಿಸುವ ಜವಾಬ್ದಾರಿ ಹೊತ್ತಿದ್ದಾರೆ. ಮುಂದಿನ ಪೀಳಿಗೆಗೆ ಮತ್ತು ಭವಿಷ್ಯದ ಮಕ್ಕಳ ಆರೋಗ್ಯಕ್ಕೆ ಉತ್ತಮ ಹಾಗೂ ಸ್ವಚ್ಛ ಪರಿಸರ ಉಡುಗೊರೆ ನೀಡುವುದು ಎಲ್ಲರ ಕರ್ತವ್ಯ ಎಂದರು.

ಪರಿಸರ ಆಂದೋಲನ ಕಾರ್ಯಕ್ರಮ ಯಶಸ್ವಿಗೆ ಪಟ್ಟಣದ ನೂರಾರು ಮಂದಿ ನಾಗರಿಕರು ಹಾಗೂ ಪುರಸಭೆ ಸಿಬ್ಬಂದಿ, ಪೌರ ಕಾರ್ಮಿಕರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದ್ದಾರೆ.--

18ಜಿಪಿಟಿ4

ಗುಂಡ್ಲುಪೇಟೆ ಪುರಸಭೆಯಲ್ಲಿ ಪರಿಸರ ಪ್ರೇಮಿಗಳ ಆಯ್ಕೆಯಾದವರ ಭಾವಚಿತ್ರವನ್ನು ಪುರಸಭೆ ಮುಖ್ಯಾಧಿಕಾರಿ ಎಸ್. ಸರವಣ ಬಿಡುಗಡೆಗೊಳಿಸಿದರು.