ಸಾರಾಂಶ
ವಿಶೇಷ ವರದಿ
ಕನ್ನಡಪ್ರಭ ವಾರ್ತೆ ಮಂಗಳೂರುಕಳೆದ 15ಕ್ಕೂ ಅಧಿಕ ವರ್ಷಗಳಿಂದ ವಾಹನ ದಟ್ಟಣೆಯಿಂದ ನಲುಗಿಹೋಗಿದ್ದ ನಗರದ ನಂತೂರು ಸರ್ಕಲ್‌ನ ಟ್ರಾಫಿಕ್ ಜ್ಯಾಂ ಸಮಸ್ಯೆಗೆ ಇದೇ ಮೊದಲ ಬಾರಿಗೆ ಅರ್ಧ ಮುಕ್ತಿ ದೊರೆತಿದೆ. ಆದರೆ ಕಾಮಗಾರಿಯಿಂದಾಗಿ ಧೂಳಿನ ದಟ್ಟಣೆಗೆ ಭಡ್ತಿ ಸಿಕ್ಕಿದೆ!
ಹೌದು. ಕಳೆದ ಕೆಲವು ದಿನಗಳಿಂದ ವೆಹಿಕ್ಯುಲರ್ ಓವರ್‌ಪಾಸ್ ಕಾಮಗಾರಿಗಾಗಿ ಜಂಕ್ಷನ್‌ನ್ನು ಅಗಲಗೊಳಿಸಲಾಗಿದೆ. ಜಂಕ್ಷನ್‌ನ ಮೂರೂ ಬದಿಯಿಂದ ರಸ್ತೆಯನ್ನು ಅಗಲಗೊಳಿಸಿದ್ದರಿಂದ ವಾಹನ ದಟ್ಟಣೆಯ ಸಮಸ್ಯೆ ಕಾಮಗಾರಿಗೆ ಮೊದಲೇ ಅರ್ಧ ಪರಿಹಾರವಾದಂತಾಗಿದೆ.ಒಂದೂವರೆ ದಶಕದ ಹಿಂದೆ ನಂತೂರಿನ ವಾಹನ ದಟ್ಟಣೆ ನೀಗಿಸಲು ಫ್ಲೈಓವರ್ ನಿರ್ಮಾಣ ಮಾಡುವ ಪ್ರಸ್ತಾಪ ಇತ್ತು. ಆದರೆ ಸಕಾಲದಲ್ಲಿ ಭೂಸ್ವಾಧೀನವಾಗದೆ ಕಾಮಗಾರಿ ನಡೆಯಲಿಲ್ಲ. ನಂತರ ಭೂಸ್ವಾಧೀನವಾದರೂ ಯೋಜನಾ ವೆಚ್ಚ ಹೆಚ್ಚಿದ್ದರಿಂದ ಗುತ್ತಿಗೆ ಸಂಸ್ಥೆಯು ಕಾಮಗಾರಿಗೆ ಒಪ್ಪದೆ ನೆನೆಗುದಿಗೆ ಬಿದ್ದಿತ್ತು. ಅಂದು ಸ್ವಾಧೀನಪಡಿಸಿದ ಭೂಮಿಯನ್ನು ಅಗೆದು ಜಂಕ್ಷನ್‌ನ್ನು ಕೊಂಚ ಅಗಲಗೊಳಿಸಿದ್ದರೂ ಸಾಕಿತ್ತು, ಇಷ್ಟು ವರ್ಷಗಳ ಕಾಲ ಜನರು ಬವಣೆಪಡುವುದು ತಪ್ಪುತ್ತಿತ್ತು. ಈಗ ವೆಹಿಕ್ಯುಲರ್ ಓವರ್‌ಪಾಸ್ ಕಾಮಗಾರಿ ಆರಂಭಿಸುವ ನೆಪದಲ್ಲಾದರೂ ರಸ್ತೆ ಅಗಲಗೊಂಡು ಸಮಸ್ಯೆ ಅರ್ಧಕ್ಕರ್ಧ ನೀಗಿದೆ.
ನಂತೂರಲ್ಲಿ ದಶಕದ ಮೊದಲು ಬೆಳಗ್ಗೆ ಮತ್ತು ಸಂಜೆ ಹೊತ್ತಿನಲ್ಲಿ ಮಾತ್ರ ಹೆಚ್ಚು ದಟ್ಟಣೆ ಇದ್ದರೆ, ಬರಬರುತ್ತಾ ದಿನವಿಡಿ ಇದೇ ಗೋಳಾಗಿತ್ತು. ನಗರದಲ್ಲಿ ಏನಾದರೂ ದೊಡ್ಡ ಕಾರ್ಯಕ್ರಮ, ವಿವಿಐಪಿಗಳು ಬರುವುದಿದ್ದರಂತೂ ಕಿ.ಮೀ.ಗಟ್ಟಲೆ ಟ್ರಾಫಿಕ್ ಜ್ಯಾಂ ಉಂಟಾಗಿ ಮಂಗಳೂರು ನಗರಕ್ಕೆ ಈ ಸಮಸ್ಯೆಯೇ ದೊಡ್ಡ ಕಪ್ಪು ಚುಕ್ಕೆಯಾಗಿತ್ತು. ಅಲ್ಲದೆ ಸಾಲು ಸಾಲು ಅಪಘಾತಗಳು ಸಂಭವಿಸಿ ಹಲವು ಮಂದಿ ಸಾವಿಗೀಡಾಗಿ ನಂತೂರು ಸರ್ಕಲ್ ಕುಖ್ಯಾತಿ ಪಡೆದಿತ್ತು. ಕೊನೆಗೂ ಸಮಸ್ಯೆಯಿಂದ ಕೊಂಚ ರಿಲೀಫ್ ಸಿಕ್ಕಿದಂತಾಗಿದೆ.ಇದೀಗ ಆರಂಭಗೊಂಡಿರುವ ವೆಹಿಕ್ಯುಲರ್ ಓವರ್‌ಪಾಸ್ ಕಾಮಗಾರಿ ಪೂರ್ತಿಯಾದರೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ತಡೆರಹಿತ ಸಂಚಾರಕ್ಕೆ ಅವಕಾಶ ದೊರೆಯಲಿದ್ದು, ಸಮಸ್ಯೆ ಬಹುತೇಕ ನೀಗುವ ನಿರೀಕ್ಷೆಯಿದೆ. ಅದಕ್ಕೆ ಇನ್ನೂ ಎರಡು ವರ್ಷ ಕಾಯಬೇಕು.
ಇನ್ನೂ ಸರಿಯಾಗದ ರಸ್ತೆ, ಧೂಳಿನ ದಟ್ಟಣೆ ಬೇರೆ!ನಂತೂರು ಜಂಕ್ಷನ್‌ನಲ್ಲಿ ಟ್ರಾಫಿಕ್ ಸಮಸ್ಯೆಗೆ ಕೊಂಚ ಮುಕ್ತಿ ಸಿಕ್ಕಿದ್ದರೂ, ಕಾಮಗಾರಿಯಿಂದ ವಿಪರೀತ ಧೂಳಿನ ಸಮಸ್ಯೆ ತಲೆದೋರಿದೆ. ರಸ್ತೆ ಅವ್ಯವಸ್ಥೆ ಇನ್ನೂ ಮುಂದುವರಿದಿದೆ.
ವಾಹನಗಳು ಸಲೀಸಾಗಿ ಸಂಚರಿಸಬೇಕಿರುವ ಜಂಕ್ಷನ್‌ನಲ್ಲೇ ಮಳೆಗಾಲದಲ್ಲಿ ದೊಡ್ಡ ಗುಂಡಿಗಳೆದ್ದು ಗಬ್ಬೆದ್ದು ಹೋಗಿತ್ತು. ಈ ಕುರಿತು ‘ಕನ್ನಡಪ್ರಭ’ ಅ.24ರಂದು ‘ಟ್ರಾಫಿಕ್ ಜ್ಯಾಂ ಕುಖ್ಯಾತಿಯ ನಂತೂರಲ್ಲಿ ತೇಪೆ ಯಾವಾಗ?’ ಎಂಬ ವಿಶೇಷ ವರದಿ ಪ್ರಕಟಿಸಿ ಆಡಳಿತದ ಗಮನ ಸೆಳೆದಿತ್ತು. ಇದರ ಬೆನ್ನಲ್ಲೇ ತೇಪೆ ಹಚ್ಚುವ ಕಾಮಗಾರಿ ನಡೆದಿತ್ತು. ಆದರೆ ಹಾಕಿದ ತೇಪೆ ನೋಡಿದರೆ ‘ಹೀಗೂ ಉಂಟೇ..!’ ಎಂದು ಮೂಗಿನ ಮೇಲೆ ಬೆರಳಿಟ್ಟು ನೋಡುವಂತಿದೆ.‘ಜಲ್ಲಿ- ಡಾಂಬರು ಮಿಶ್ರಣವನ್ನು ಹೊಂಡಗಳಿದ್ದಲ್ಲಿ ಸುರಿದು ಹೋಗಿದ್ದಾರಷ್ಟೇ. ಅದನ್ನು ಸಮತಟ್ಟು ಮಾಡುವ ಕೆಲಸವನ್ನೂ ಮಾಡಿಲ್ಲ. ತೇಪೆ ಹಾಕುವಾಗ ಸಣ್ಣಪುಟ್ಟ ಹೊಂಡಗಳಂತೂ ಕಣ್ಣಿಗೇ ಬಿದ್ದಿಲ್ಲವೇನೋ. ಜಂಕ್ಷನ್‌ನ ಸುತ್ತಲೂ ರಸ್ತೆ ಏರು-ತಗ್ಗುಗಳಿಂದ ಕೂಡಿದೆ. ತೇಪೆ ಹಾಕುವುದನ್ನಾದರೂ ಸೂಕ್ತ ಮೇಲ್ವಿಚಾರಣೆಯಲ್ಲಿ ಮಾಡಬಾರದೇ’ ಎಂದು ಪ್ರಶ್ನಿಸುತ್ತಾರೆ ಬಿಕರ್ನಕಟ್ಟೆಯ ಯೋಗೀಶ್.
ಜಂಕ್ಷನ್‌ನ ಮೂರು ದಿಕ್ಕಿನಲ್ಲೂ ರಸ್ತೆ ಅಗೆದ ಭಾಗದಲ್ಲಿ ವಾಹನಗಳು ಸಂಚರಿಸುತ್ತಿದ್ದರೆ ಭಾರೀ ಧೂಳು ಸುತ್ತೆಲ್ಲ ಆವರಿಸುತ್ತಿದೆ. ಕಾಮಗಾರಿ ಮುಗಿಯುವವರೆಗೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡಬೇಕು ಎನ್ನುವ ಆಗ್ರಹ ಇದೆ.