ನಾಪೋಕ್ಲು ನಾಡು ಶ್ರೀ ಭಗವತಿ ದೇವರ ಉತ್ಸವ ಸಂಪನ್ನ

| Published : Mar 21 2025, 12:32 AM IST

ಸಾರಾಂಶ

ನಾಡು ಶ್ರೀ ಭಗವತಿ ದೇವರ ಉತ್ಸವ ವಿಜೃಂಭಣೆಯಿಂದ ಜರುಗಿತು. ಪಟ್ಟಣಿ ಆಚರಣೆಯೊಂದಿಗೆ ಸಂಪನ್ನಗೊಂಡಿತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಇಲ್ಲಿಯ ನಾಡು ಶ್ರೀ ಭಗವತಿ ದೇವರ ವಾರ್ಷಿಕ ಉತ್ಸವ ಬುಧವಾರ ವಿಜೃಂಭಣೆಯಿಂದ ಜರುಗಿತು. ಮಾರ್ಚ್ 17 ರಿಂದ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆದುಕೊಂಡು ಬಂದ ಶ್ರೀ ಭಗವತಿ ದೇವರ ಹಬ್ಬವು ಪಟ್ಟಣಿ ಆಚರಣೆಯೊಂದಿಗೆ ಸಾಂಪ್ರದಾಯಕವಾಗಿ ಹಾಗೂ ಶ್ರದ್ಧಾ ಭಕ್ತಿಯಿಂದ ಸಂಪನ್ನ ಗೊಂಡಿತ್ತು.

ಆರಂಭದಲ್ಲಿ ತಕ್ಕರ ಮನೆಯಿಂದ ದೇವರ ಬಂಡಾರವನ್ನು ದೇವಾಲಯಕ್ಕೆ ತರಲಾಯಿತು. ನಂತರ ಅಂದಿಬೊಳಕು, ರಾತ್ರಿ ಶ್ರೀ ಭದ್ರಕಾಳಿ ದೇವರ ಕೋಲ, ದೇವರ ಊರ ಪ್ರದಕ್ಷಿಣೆ ನೆರವೇರಿತು. ಬುಧವಾರ ಪಟ್ಟಣಿ ಹಬ್ಬದ ವಿಶೇಷ ಪೂಜಾ ಕಾರ್ಯಗಳು ಜರುಗಿದವು. ಬೆಳಗ್ಗೆ ದೇವರ ದರ್ಶನ ಅನಂತರ ಎತ್ತುಪೋರಾಟ ವಿಶೇಷ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ಬಳಿಕ ನೆರೆದಿದ್ದ ಭಕ್ತಾದಿಗಳಿಗೆ ಅನ್ನದಾನ ಕಾರ್ಯಕ್ರಮ ಜರುಗಿ. ಮಧ್ಯಾಹ್ನದ ಬಳಿಕ ಗ್ರಾಮಸ್ಥರಿಂದ ಬೋಳಕಾಟ್, ದೇವರ ಪ್ರದರ್ಶನ ನೃತ್ಯ ಮಹೋತ್ಸವ ಸಾಂಗವಾಗಿ ನೆರವೇರಿತು. ಉತ್ಸವದ ಧಾರ್ಮಿಕ ಪೂಜಾ ವಿಧಿ ವಿಧಾನವನ್ನು ಹರೀಶ್ ತಂತ್ರಿ, ದೇವಾಲಯದ ಮುಖ್ಯ ಅರ್ಚಕ ಹರೀಶ್ ಕೆಕುಣ್ಣಾಯ, ಸುರೇಶ್ ಹಾಗೂ ದೇವರ ನೃತ್ಯ ಮಹೋತ್ಸವವನ್ನು ಜಯಚಂದ್ರ (ಪುಂಡ) ನೆರವೇರಿಸಿ ಕೊಟ್ಟರು.

ಈ ಸಂದರ್ಭ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ, ನಿವೃತ್ತ ಶಿಕ್ಷಕರು ಆದ ಕುಲ್ಲೇಟಿರ ಗುರುವಪ್ಪ, ಕಾರ್ಯದರ್ಶಿ ಕಂಗಂಡ ಜಾಲಿ ಪೂವಪ್ಪ, ಆಡಳಿತ ಮಂಡಳಿ ನಿರ್ದೇಶಕರು, ಕೆಲೇಟಿರ, ತಿರೋಡಿರ, ಕುಲ್ಲೇಟಿರ, ನಾಟೋಳಂಡ ತಕ್ಕ ಮುಖ್ಯಸ್ಥರ ಮುಂದಾಳತ್ವದಲ್ಲಿ ವಾರ್ಷಿಕ ಉತ್ಸವ ಅತ್ಯಂತ ಯಶಸ್ವಿ ಆಗಿ ಜರುಗಿತು. ಊರು ಪರ ಊರಿನ ಭಕ್ತಾದಿಗಳು ಶ್ರದ್ಧಾ ಭಕ್ತಿಯಿಂದ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ವಿವಿಧ ಹರಕೆ, ಕಾಣಿಕೆ ಸೇವೆಯನ್ನು ನೆರವೇರಿಸಿಕೊಂಡರು.

ಗುರುವಾರ ಸಂಜೆ ಪವಿತ್ರ ಕಾವೇರಿ ನದಿಯಲ್ಲಿ ಭಗವತಿ ದೇವರ ಅವಭೃತಸ್ನಾನ ಮತ್ತು ನಗರದಲ್ಲಿ ಚೆಂಡೆ ಮೇಳಗಳೊಂದಿಗೆ ಮೆರವಣಿಗೆ ನಡೆಯಲಿದೆ. ನಂತರ ದೇವಾಲಯಕ್ಕೆ ಹಿಂತಿರುಗಿ ನೃತ್ಯೋತ್ಸವ, ರಾತ್ರಿ ನರಿಪೂಧ, ನುಚ್ಚುಟೆ, ಅಂಜಿ ಕೂಟ್ ಮೂರ್ತಿ, ಕಲಿಯಾಟ ಅಜ್ಜಪ್ಪ ಮತ್ತು ವಿ಼ಷ್ಣು ಮೂರ್ತಿ ದೇವರ ಕೋಲ ಸೇರಿದಂತೆ ವಿವಿಧ ಭೂತಾರಾಧನೆ ನಡೆದು ಅನ್ನದಾನದೊಂದಿಗೆ ಹಬ್ಬವು ಸಂಪನ್ನಗೊಳ್ಳಲಿದೆ.