ಸಾರಾಂಶ
ನಾಗನಕಟ್ಟೆಯಲ್ಲಿ ನಾಗನ ಕಲ್ಲಿಗೆ ಪಂಚಾಮೃತ ಅಭಿಷೇಕ ಮಂಗಳಾರತಿ ಮಹಾಪೂಜೆಯನ್ನು ನೆರವೇರಿಸಲಾಯಿತು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ನಾಪೋಕ್ಲು ಹೋಬಳಿ ವ್ಯಾಪ್ತಿಯ ವಿವಿಧೆಡೆ ನಾಗರಪಂಚಮಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಸಮೀಪದ ಪಾಲೂರು ಶ್ರೀ ಮಹಾಲಿಂಗೇಶ್ವರ ದೇವಾಲಯ, ಕಕ್ಕಬೆಯ ಪಾಡಿ ಶ್ರೀ ಇಗ್ಗುತಪ್ಪ ದೇವಾಲಯ, ಕೂರುಳಿ ಸುಭಾಷ್ ನಗರ ಹಾಗೂ ಬಲ್ಲಮಾವಟಿಯ ಶ್ರೀ ಭಗವತಿ ದೇವಾಲಯಗಳಲ್ಲಿ ನಾಗರ ಪಂಚಮಿಯನ್ನು ಆಚರಿಸಲಾಯಿತು. ಪಾಡಿ ಶ್ರೀ ಇಗ್ಗುತಪ್ಪದೇವಾಲಯದಲ್ಲಿ ಅರ್ಚಕ ಜಗದೀಶ್ ಭಟ್ ಅವರು ದೇವಾಲಯದ ನಾಗನ ಕಟ್ಟೆಯಲ್ಲಿ ವಿಶೇಷ ಪೂಜೆ ನೆರವೇರಿಸಿದರು. ಈ ಸಂದರ್ಭ ದೇವಾಲಯದ ದೇವತಕ್ಕರು, ಭಕ್ತ ಜನ ಸಂಘದ ಅಧ್ಯಕ್ಷರಾದ ಪರದಂಡ ಸುಮನ್ ಸುಬ್ರಮಣಿ ಸೇರಿದಂತೆ ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ಪೂಜೆ ನೆರವೇರಿಸಿ, ತೀರ್ಥ ಪ್ರಸಾದ ಸ್ವೀಕರಿಸಿದರು. ಬಳಿಕ ದೇವಾಲಯದಲ್ಲಿ ವಿಶೇಷ ಮಹಾಪೂಜೆ, ಅನ್ನದಾನ ನೆರವೇರಿತು.ಪಾಲೂರಿನ ಮಹಾಲಿಂಗೇಶ್ವರ ದೇವಾಲಯದಲ್ಲಿ ಅರ್ಚಕ ದೇವಿಪ್ರಸಾದ್ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ದೇವಾಲಯದಲ್ಲಿನ ನಾಗನ ಕಲ್ಲಿಗೆ ಹಾಲು, ಎಳನೀರು ಅಭಿಷೇಕ ಸೇರಿದಂತೆ ಹಣ್ಣು ಕಾಯಿ ಪೂಜೆಯನ್ನು ನೆರವೇರಿಸಿ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿತರಿಸಿದರು. ಈ ಸಂದರ್ಭ ದೇವಾಲಯದ ಪಾರುಪತ್ತೆಗಾರ ಮನು ಸೇರಿದಂತೆ, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.
ಕೂರುಳಿ ಸುಭಾಷ್ ನಗರದಲ್ಲಿ ಶ್ರೀ ಭಗವತಿ ದೇವಾಲಯದ ಅರ್ಚಕ ಹರೀಶ್ ಭಟ್ ನಾಗನಕಟ್ಟೆಯಲ್ಲಿ ನಾಗನ ಕಲ್ಲಿಗೆ ಪಂಚಾಮೃತ ಅಭಿಷೇಕ ಮಂಗಳಾರತಿ ಮಹಾಪೂಜೆಯನ್ನು ನೆರವೇರಿಸಿದರು. ಬಲ್ಲಮಾವಟಿ ಗ್ರಾಮದ ಭಗವತಿ ದೇವಾಲಯದ ಸಮೀಪ ನಾಗನಕಟ್ಟೆಯಲ್ಲಿನ ನಾಗದೇವರಿಗೆ ಅರ್ಚಕ ಶಶಿಧರ ಭಟ್ ವಿಶೇಷ ಪೂಜೆ ನೆರವೇರಿಸಿದರು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.