ಸಾರಾಂಶ
ಕನ್ನಡಪ್ರಭ ವಾರ್ತೆ ಮುಧೋಳ
ನಾರದ ಮುನಿಗಳು ಲೋಕಕಲ್ಯಾಣಕ್ಕಾಗಿ ತ್ರಿಲೋಕ ಸಂಚಾರ ಮಾಡುತ್ತಾ, ದೇವದಾನವರಿಗೂ ಪ್ರೀಯರಾಗಿದ್ದುಕೊಂಡು ಒಬ್ಬ ಜವಾಬ್ದಾರಿಯುತ ಪತ್ರಕರ್ತನಂತೆ ಕೆಲಸ ಮಾಡುತ್ತಿದ್ದರು ಎಂದು ಹಿಂದೂ ಜಾಗರಣ ವೇದಿಕೆ ರಾಜ್ಯ ಮಾತೃ ಸುರಕ್ಷಾ ವಿಭಾಗದ ಸಂಚಾಲಕ ಶಿವಾನಂದ ಬಡಿಗೇರ ತಿಳಿಸಿದರು.ನಗರದ ಪ್ರಗತಿ ಶಾಲೆಯ ಸಭಾಭವನದಲ್ಲಿ ಸಾಮರಸ್ಯ ವೇದಿಕೆ ಆಶ್ರಯದಲ್ಲಿ ನಡೆದ ನಾರದರ ಜಯಂತಿ ಕಾರ್ಯಕ್ರಮದ ಮುಖ್ಯ ವಕ್ತಾರರಾಗಿ ಭಾಗವಹಿಸಿ ಮಾತನಾಡಿದ ಅವರು, ನಾರದರು ಮೇಲ್ನೋಟಕ್ಕೆ ದೇವಿದಾನವರ ಮಧ್ಯೆ ಪರಸ್ಪರ ಜಗಳ ಹಚ್ಚುತ್ತಾರೆ, ಚಾಂಡಿ ಹೇಳುತ್ತಾರೆ ಎಂದೆನಿಸಿದರೂ ಅವರ ಮೂಲ ಉದ್ದೇಶ ಲೋಕಕಲ್ಯಾಣವೇ ಆಗಿರುತ್ತಿತ್ತು. ಹೀಗಾಗಿ ನಾರದರು ಬಂದರೆ ಇವನೇನು ಸುದ್ದಿತಂದನಪ್ಪ ಎಂದು ದೇವದಾನವರು ಹೆದರುತ್ತಿದ್ದರು ಮತ್ತು ನಾರದರನ್ನು ಪ್ರೀತಿ ಗೌರವದಿಂದಲೇ ಕಾಣುತ್ತಿದ್ದರು. ದೇವದಾನವರೂ ನಾರದರ ಸಲಹೆಗಳನ್ನು ಕೇಳುತ್ತಿದ್ದರು ಮತ್ತು ಪಾಲಿಸುತ್ತಿದ್ದರು ಆದರೆ ಅದರ ಪರಿಣಾಮ ದುಷ್ಟವಿಚಾರದ ಸಂಹಾರವೇ ಆಗಿರುತ್ತಿತ್ತು ಎಂದರು.
ಪತ್ರಕರ್ತ ಅಶೋಕ ಕುಲಕರ್ಣಿ ಸನ್ಮಾನ ಸ್ವೀಕರಿಸಿ ಮಾತನಾಡಿ, ದೇಶದ ಸಂದಿಗ್ಧ ಪರಿಸ್ಥಿತಿಯಲ್ಲಿ ಪತ್ರಕರ್ತರ ಪಾತ್ರ ತುಂಬಾ ಮಹತ್ವದ್ದಾಗಿದೆ. ಅವರು ಮಾಡುವ ಸುದ್ದಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತವೆ. ಅದರಿಂದ ದೇಶದ ಭದ್ರತೆಯ ಮೇಲೆ, ದೇಶ ವಿದೇಶಗಳ ಸಂಬಂಧಗಳ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಆದ್ದರಿಂದ ರಾಜಕಾರಣಿಗಳು ಕೊಡುವ ಹೇಳಿಕೆಗಳು ಮತ್ತು ಪತ್ರಕರ್ತರು ಮಾಡುವ ವರದಿಗಳಿಂದ ಯುದ್ಧದ ಕಾರ್ಮೋಡ ಸಂದರ್ಭದಲ್ಲಿ ಪಾಕಿಸ್ತಾನದಲ್ಲಿ ಚರ್ಚೆಯಾದದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಿದ ಅವರು, ಪತ್ರಿಕೆಗಳಿಗೆ ಮಾಧ್ಯಮಗಳಿಗೆ ವರದಿ ಮಾಡಿ ಹಣ ಹೆಸರುಗಳಿಕೆಯೊಂದೇ ನಮ್ಮ ಉದ್ದೇಶವಾಗಿರದೆ. ಆ ವರದಿ ಪರಿಣಾಮದಿಂದ ಜನರು ಮೇಲೆ ಮತ್ತು ದೇಶದ ಮೇಲೆ ಏನು ಪ್ರಭಾವ ಬೀರುತ್ತದೆ ಎಂಬ ಕಲ್ಪನೆ ನಮಗಿರಬೇಕು ಎಂದರು.ಉದ್ಯಮಿ ವೆಂಕನಗೌಡ ನಾಡಗೌಡ ಅಧ್ಯಕ್ಷತೆ ವಹಿಸಿ ಸಾಂದರ್ಭಿಕವಾಗಿ ಮಾತನಾಡಿದರು. ಪ್ರಮುಖರಾದ ಬಸವರಾಜ ಮಾನೆ, ರಾಜಕುಮಾರ ಜೋಶಿ, ರಾಜು ಟಂಕಸಾಲಿ, ರಾಮಕೃಷ್ಣ ಬುದ್ನಿ, ಸಂಜಯ ಬಾಜಿ, ಸೋಮಶೇಖರ ಗೋಸಾರ, ಶ್ರೀನಿವಾಸ ಬಿರಾದಾರ ಪಾಟೀಲ್, ನಿಂಗನಗೌಡ ನಾಡಗೌಡ, ಬಸವರಾಜ ದಾಸರ, ಸೇರಿದಂತೆ ಹಲವರು ಭಾಗವಹಿಸಿದ್ದರು. ಪ್ರಾರಂಭದಲ್ಲಿ ನಾರದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಸಲ್ಲಿಸಿ, ಗೌರವಿಸಲಾಯಿತು. ಮೋಹನ್ ರಿಸಬೂಡ ಸ್ವಾಗತಿಸಿ, ಶಂಕರ ನಾಯಿಕ ಅತಿಥಿಗಳನ್ನು ಪರಿಚಯಿಸಿ, ಭೀಮಶಿ ಹುನ್ನೂರ ನಿರೂಪಿಸಿ, ವಿ.ಸಿ.ಬದಾಮಿ ವಂದಿಸಿದರು.