ತಾಲೂಕನ್ನು ಬರಗಾಲ ಪೀಡಿತವೆಂದು ಸರ್ಕಾರ ಘೋಷಣೆ ಮಾಡಬೇಕು. ಆ ನಿಟ್ಟಿನಲ್ಲಿ ಸೆ.12ರಂದು ನರಗುಂದ ಬಂದ್‌ಗೆ ಕರೆ ನೀಡಲಾಗಿದೆ.
ಕನ್ನಡಪ್ರಭ ವಾರ್ತೆ ನರಗುಂದ
ತಾಲೂಕನ್ನು ಬರಗಾಲ ಪೀಡಿತವೆಂದು ಸರ್ಕಾರ ಘೋಷಣೆ ಮಾಡಬೇಕು. ಆ ನಿಟ್ಟಿನಲ್ಲಿ ಸೆ.12ರಂದು ನರಗುಂದ ಬಂದ್‌ಗೆ ಕರೆ ನೀಡಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸೇನೆ ಅಧ್ಯಕ್ಷ ಶಂಕ್ರಣ್ಣ ಅಂಬಲಿ ಹೇಳಿದರು.ಮಂಗಳವಾರ ಪಟ್ಟಣದ ಮಹದಾಯಿ ಮಹಾವೇದಿಕೆಯಲ್ಲಿ ರೈತ ಸಂಘ, ವಿವಿಧ ಸಂಘಟನೆಗಳ ಆಶ್ರಯದಲ್ಲಿ ನಡೆದ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಈ ಬಂದ್ ಕರೆಗೆ ವ್ಯಾಪಾರಸ್ಥರು, ಕೂಲಿ ಕಾರ್ಮಿಕರು, ವಿವಿಧ ಸಂಘ-ಸಂಸ್ಥೆಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಈ ವರ್ಷ ಮುಂಗಾರು ಹಂಗಾಮಿನಲ್ಲಿ ಅಲ್ಪಸ್ವಲ್ಪ ಮಳೆಯಿಂದ ತಾಲೂಕಿನ ರೈತರು ವಿವಿಧ ಬೆಳೆ ಬಿತ್ತನೆ ಮಾಡಿದ್ದರು. ಆದರೆ ಸಕಾಲಕ್ಕೆ ಮಳೆಯಾಗದೆ ಸದ್ಯ ಬೆಳೆಗಳು ತೇವಾಂಶ ಕೊರತೆಯಿಂದ ಬಿಸಿಲಿನ ತಾಪಕ್ಕೆ ಒಣಗಿವೆ. ಜಿಲ್ಲೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಭೇಟಿ ನೀಡಿ ಬರ ಪರಿಶೀಲನೆ ಮಾಡಿದರೂ ಸಹ ಈ ತಾಲೂಕನ್ನು ಬರಗಾಲಪೀಡಿತ ಎಂದು ಘೋಷಣೆ ಮಾಡದೆ ಅನ್ಯಾಯ ಮಾಡಿದ್ದಾರೆಂದು ಆರೋಪಿಸಿದರು.
ಸರ್ಕಾರ ತಕ್ಷಣವೇ ಈ ತಾಲೂಕನ್ನು ಬರಗಾಲಪೀಡಿತವೆಂದು ಘೋಷಣೆ ಮಾಡಬೇಕು, ರೈತರು ಕೃಷಿಗಾಗಿ ರಾಷ್ಟ್ರೀಯ ಕೃಷಿ ಮತ್ತು ಸಹಕಾರಿ ಸಂಘಗಳಿಂದ ಪಡೆದ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು, ಬೆಳೆ ಹಾನಿ ಮಾಡಿಕೊಂಡ ರೈತರಿಗೆ ಪ್ರತಿ ಎಕರಗೆ ₹50 ಸಾವಿರ ಪರಿಹಾರ ನೀಡಬೇಕು, ಬೆಳೆ ವಿಮೆ ತುಂಬಿದ ರೈತರಿಗೆ ತಕ್ಷಣವೇ ಬೆಳೆ ವಿಮೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.ಈ ಸಂದರ್ಭ ಬಸವರಾಜ ಸಾಬಳೆ, ಚನ್ನು ನಂದಿ, ಉಮೇಶ ಮರ್ಚಪ್ಪನವರು, ಶಂಕರಗೌಡ ಪಾಟೀಲ, ವೀರಣ್ಣ ಸೋಪ್ಪಿನ, ವಿಠಲ ಜಾಧವ, ಮನೋಹರ ಹುಯಿಲಗೋಳ, ರಾಚನಗೌಡ ಪಾಟೀಲ, ಚಳ್ಳಪ್ಪ ನಾಯ್ಕರ, ಜಿ.ಎಸ್. ಪಾಟೀಲ, ಎಸ್.ಎಂ. ಮರಿಗೌಡ್ರ, ಈರಣ್ಣ ಗಡಗಿ, ಬುಡ್ನಸಾಬ ಮೇಯಕರ ಸೇರಿದಂತೆ ಮುಂತಾದವರು ಇದ್ದರು.