ಸಾರಾಂಶ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ
ಮಲೆನಾಡು ನಾಗರಿಕ ರೈತ ಹಿತ ರಕ್ಷಣಾ ಸಮಿತಿ ಕರೆ ನೀಡಿದ್ದ ಬಂದ್ ಗೆ ಸಂಪೂರ್ಣ ಬೆಂಬಲ ವ್ಯಕ್ತವಾಗಿದ್ದು ಬಸ್ಸು, ಆಟೋ ರಿಕ್ಷಾಗಳು ರಸ್ತೆಗೆ ಇಳಿಯಲಿಲ್ಲ.ಅಂಗಡಿ, ಹೋಟೆಲ್, ತರಕಾರಿ ಅಂಗಡಿ, ಇತರೆ ವಾಣಿಜ್ಯ ಚಟುವಟಿಕೆ ಅಂಗಡಿಗಳು, ಬ್ಯಾಂಕ್ ಸಹ ಬಂದ್ ಆಗಿದ್ದವು. ಸರ್ಕಾರಿ ಶಾಲೆಗಳಿಗೆ ರಜೆ ಘೋಷಣೆ ಮಾಡಿರಲಿಲ್ಲ. ಆದ್ದರಿಂದ ಪಟ್ಟಣದ ಶಾಲೆಗಳಿಗೆ ಮಕ್ಕಳು ಬಂದಿದ್ದರು. ಆದರೆ, ಕೆಲವೇ ಹೊತ್ತಿನಲ್ಲಿ ಬಂದ್ ಗೆ ಕರೆ ನೀಡಿದ್ದ ಸಂಘಟಕರು ಶಾಲೆಗಳಿಗೆ ಆಗಮಿಸಿ ರಜೆ ಘೋಷಣೆ ಮಾಡಬೇಕು ಎಂದು ಮನವಿ ಮಾಡಿದ್ದರಿಂದ ಮಕ್ಕಳ ಹಿತ ದೃಷ್ಠಿಯಿಂದ ಶಾಲೆಗೆ ರಜೆ ಘೋಷಣೆ ಮಾಡಿ ಮಕ್ಕಳನ್ನು ಮನೆಗೆ ಕಳಿಸಲಾಯಿತು. ಕೆಲವು ಖಾಸಗಿ ಶಾಲೆಗಳು ಮುಂಚಿತವಾಗೇ ರಜೆ ಘೋಷಣೆ ಮಾಡಿದ್ದರು. ಗ್ರಾಮೀಣ ಭಾಗದಲ್ಲಿ ಶಾಲೆಗಳು ತೆರೆದಿದ್ದವು.
ಸರ್ಕಾರಿ ಕಚೇರಿಗಳಿಗೆ ಎಂದಿನಂತೆ ತೆರೆದಿದ್ದವು. ಆದರೆ, ಜನರು ಹೆಚ್ಚಾಗಿ ಬರಲಿಲ್ಲ. ನ್ಯಾಯಾಲಯ, ಅಂಚೆ ಕಚೇರಿ, ಆಸ್ಪತ್ರೆ, ಮೆಡಿಕಲ್ ಶಾಪ್, ಪೆಟ್ರೋಲ್ ಬಂಕ್ ಎಂದಿನಂತೆ ತೆರೆದಿದ್ದವು.ಬಸ್ ನಿಲ್ದಾಣಕ್ಕೆ ಯಾವುದೇ ಬಸ್ಸು ಬರದಿದ್ದರಿಂದ ಬಿಕೋ ಎನ್ನುತ್ತಿತ್ತು.ಕೆಲವು ಯುವಕರು ಬಸ್ಸು ನಿಲ್ದಾಣದಲ್ಲಿ ಕ್ರಿಕೆಟ್ ಆಟ ಆಡಿದರು. ಕುದುರೆಗುಂಡಿ, ಬಿ.ಎಚ್.ಕೈಮರ, ಶೆಟ್ಟಿಕೊಪ್ಪ, ಮುತ್ತಿನಕೊಪ್ಪದಲ್ಲೂ ಬಂದ್ ಸಂಪೂರ್ಣ ಯಶಸ್ವಿಯಾಗಿದೆ. ಶನಿವಾರ ಬೆಳಿಗ್ಗೆ ಎಲ್ಲಾ ರೈತರು ಪಕ್ಷಾತೀತವಾಗಿ ವಾಹನಗಳ ಮೂಲಕ ಕೊಪ್ಪದಲ್ಲಿ ನಡೆಯುವ ಪ್ರತಿಭಟನಾ ಸಭೆಗಳಿಗೆ ತೆರಳಿದರು.