ಸಾರಾಂಶ
ಚಿಕ್ಕಮಗಳೂರು ಜಿಲ್ಲಾ ಬಿಎಸ್‌ಪಿ ಕಚೇರಿಯಲ್ಲಿ ಮಂಗಳವಾರ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮವನ್ನು ಕೆ.ಟಿ. ರಾಧಾಕೃಷ್ಣ ಅವರು ಉದ್ಘಾಟಿಸಿದರು. ಕುಮಾರ್, ರತ್ನ, ಮಂಜುಳಾ ತಂಬನ್ ಇದ್ದರು.
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಸಮಾಜದಲ್ಲಿ ಜಾತಿ, ಮತ ಭೇದಗಳು ಹೆಚ್ಚಾಗಿದ್ದ ಕಾಲದಲ್ಲಿ ನಾರಾಯಣ ಗುರುಗಳು ಸಮಾಜ ಸುಧಾರಕರಾಗಿ ಉದಯಿಸಿ, ಸಮಾಜದ ತಾರತಮ್ಯ ಕಡಿಮೆ ಮಾಡಲಿಕ್ಕೆ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟರು ಎಂದು ಬಿಎಸ್‌ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಹೇಳಿದರು.ಪಟ್ಟಣದ ಜಿಲ್ಲಾ ಬಿಎಸ್‌ಪಿ ಕಚೇರಿಯಲ್ಲಿ ಮಂಗಳವಾರ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಒಂದೇ ಜಾತಿ, ಒಂದೇ ಮತ ಹಾಗೂ ಒಂದೇ ದೇವರೆಂಬ ಸತ್ಯ ವಾಕ್ಯವನ್ನು ಸಂಸ್ಕೃತ ಭಾಷೆಯಲ್ಲಿ ಅದ್ವಿತೀಯ ಪಂಡಿತರಾಗಿದ್ದ ನಾರಾಯಣ ಗುರುಗಳು, ಸಮಾಜದಲ್ಲಿ ಅಸ್ಪೃಶ್ಯತೆಯ ಪಿಡುಗಿಗೆ ತಮ್ಮದೇ ಆದ ನಿಲುವಿನಲ್ಲಿ, ಸಮಾಧಾನಕರವಾದ ಉಪಾಯಗಳನ್ನು ಕಂಡುಕೊಳ್ಳುವುದರ ಮೂಲಕ ಕೋಮು ಸೌಹಾರ್ದತೆ ಮತ್ತು ಸಾರ್ವತ್ರಿಕ ಸಹೋದರತ್ವ ಸಾಕಾರಗೊಳಿಸಿದರು. ಈ ಹಿನ್ನೆಲೆ ಕೇರಳ ರಾಜ್ಯ ಹೆಚ್ಚು ಮಾನವೀಯ ಮತ್ತು ಸಮಾನತೆಯ ಸಮಾಜವಾಗಿ ಅಭಿವೃದ್ಧಿ ಹೊಂದಿತು. ಈ ತತ್ವವು ಕೇರಳ ರಾಜ್ಯಕ್ಕೆ ಒಂದು ಜೀವನ ವಿಧಾನವಾಗಿದೆ ಎಂದು ತಿಳಿಸಿದರು.ಸಮಾಜದಲ್ಲಿ ಅಸ್ಪೃಶ್ಯತೆ ತಾಂಡವವಾಡುತ್ತಿದ್ದ ಸಂದರ್ಭದಲ್ಲಿ ಕೆಳವರ್ಗದ ಜನರಿಗೆ ದೇವಾಲಯ ಪ್ರವೇಶವಿಲ್ಲದಂತಹ ಕಾಲದಲ್ಲಿ ನಾರಾಯಣ ಗುರುಗಳು ಐವತ್ತಕ್ಕೂ ಹೆಚ್ಚು ದೇವಾಲಯಗಳನ್ನು ನಿರ್ಮಿಸಿ ಮಾನವತ್ವದಿಂದ ದೈವತ್ವದೆಡೆಗೆ ಹೋಗಬಹುದು ಎನ್ನುವುದಕ್ಕೆ ನಾರಾಯಣ ಗುರುಗಳು ಉದಾಹರಣೆ ಎಂದರು.
ಕಾರ್ಯಕ್ರಮದಲ್ಲಿ ಬಿಎಸ್‌ಪಿ ಜಿಲ್ಲಾ ಉಪಾಧ್ಯಕ್ಷೆ ಕೆ.ಎಸ್.ಮಂಜುಳಾ, ಕಚೇರಿ ಕಾರ್ಯದರ್ಶಿ ಪಿ.ವಿ.ತಂಬನ್, ಅಸೆಂಬ್ಲಿ ಪ್ರಧಾನ ಕಾರ್ಯದರ್ಶಿ ಆರ್.ವಸಂತ್, ಉಪಾಧ್ಯಕ್ಷ ಹೊನ್ನಪ್ಪ, ಸಿದ್ದಯ್ಯ, ಖಜಾಂಚಿ ಟಿ.ಎಚ್.ರತ್ನ, ತಾಲೂಕು ಅಧ್ಯಕ್ಷ ಕುಮಾರ್, ಗಿರೀಶ್, ಉಪನ್ಯಾಸಕರಾದ ಉಮಾಶಂಕರ್, ಮುಖಂಡರಾದ ಸಿರವಾಸೆ ಕಿಶೋರ್, ರಾಮನಹಳ್ಳಿ ರವಿ, ಗಿಡ್ಡಯ್ಯ ಉಪಸ್ಥಿತರಿದ್ದರು.