ನಾರಾಯಣಸಾ ಭಾಂಡಗೆ ಬಿಜೆಪಿ ರಾಜ್ಯಸಭೆ ಅಭ್ಯರ್ಥಿ

| Published : Feb 12 2024, 01:32 AM IST / Updated: Feb 12 2024, 01:12 PM IST

 Narayan Sa Bhanda

ಸಾರಾಂಶ

ರಾಜೀವ್‌ ಚಂದ್ರಶೇಖರ್‌ ಸ್ಥಾನಕ್ಕೆ ಹುರಿಯಾಳು ನಾರಾಯಣಸಾ ಭಾಂಡಗೆಯನ್ನು ರಾಜ್ಯಸಭಾ ಅಭ್ಯರ್ಥಿಯಾಗಿ ಘೋಷಿಸಲಾಗಿದೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿಯ ಅಚ್ಚರಿಯ ಅಭ್ಯರ್ಥಿಯಾಗಿ ವಿಧಾನ ಪರಿಷತ್ತಿನ ಮಾಜಿ ಸದಸ್ಯ ನಾರಾಯಣಸಾ ಕೆ. ಭಾಂಡಗೆ ಅವರು ಕಣಕ್ಕಿಳಿಯಲಿದ್ದಾರೆ.

ಇತರ ಹಿಂದುಳಿದ ವರ್ಗಕ್ಕೆ (ಒಬಿಸಿ) ಸೇರಿದ ಬಾಗಲಕೋಟೆ ಮೂಲದ ಭಾಂಡಗೆ ಅವರನ್ನು ಅಭ್ಯರ್ಥಿಯನ್ನಾಗಿ ಭಾನುವಾರ ಸಂಜೆ ಬಿಜೆಪಿ ರಾಷ್ಟ್ರೀಯ ಘಟಕ ಘೋಷಣೆ ಮಾಡಿದೆ.

ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಅವರಿಂದ ತೆರವಾಗಲಿರುವ ಸ್ಥಾನಕ್ಕೆ ಭಾಂಡಗೆ ಅಭ್ಯರ್ಥಿಯಾಗಲಿದ್ದಾರೆ. 

ರಾಜ್ಯ ವಿಧಾನಸಭೆಯಿಂದ ನಾಲ್ವರು ಸದಸ್ಯರನ್ನು ರಾಜ್ಯಸಭೆಗೆ ಆಯ್ಕೆ ಮಾಡಬೇಕಿದ್ದು, ಪಕ್ಷಗಳ ಸಂಖ್ಯಾ ಬಲಾಬಲದ ಆಧಾರದ ಮೇಲೆ ಬಿಜೆಪಿಗೆ ಒಂದು ಸ್ಥಾನ ಸುಲಭವಾಗಿ ಲಭಿಸಲಿದೆ. 

ಹೀಗಾಗಿ, ಭಾಂಡಗೆ ಗೆಲುವು ಖಚಿತವಾಗಿದೆ. ನಾಮಪತ್ರ ಸಲ್ಲಿಸಲು ಫೆ.15 ಕೊನೆಯ ದಿನವಾಗಿದ್ದು, ಫೆ.27ರಂದು ಚುನಾವಣೆ ನಡೆಯಲಿದೆ. 

ಆರ್‌ಎಸ್‌ಎಸ್‌ ಮೂಲದ ಭಾಂಡಗೆ: ತಮ್ಮ 17ನೇ ವಯಸ್ಸಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೂಲಕ ಸಾರ್ವಜನಿಕ ಜೀವನಕ್ಕೆ ಪ್ರವೇಶಿಸಿ ಅಲ್ಲಿಂದ ಈವರೆಗೆ ರಾಜಕೀಯ, ಧಾರ್ಮಿಕ, ಶಿಕ್ಷಣ, ಸಾಮಾಜಿಕ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಾ ಬಂದಿರುವ ಭಾಂಡಗೆ ಅವರು ಎಬಿವಿಪಿ, ವಿಶ್ವಹಿಂದು ಪರಿಷತ್‌, ಭಾರತೀಯ ಮಜ್ದೂರ್‌ ಸಂಘ ಹಾಗೂ ಬಿಜೆಪಿಯಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. 

ಆಯೋಧ್ಯೆಯ ರಾಮ ಮಂದಿರ ನಿರ್ಮಾಣ ಸಂಬಂಧ ಶಿಲಾ ಸಂಗ್ರಹ, ಈದ್ಗಾ ಮೈದಾನದಲ್ಲಿ ತ್ರಿವರ್ಣ ಧ್ವಜಾರೋಹಣ ಹೋರಾಟ ಸೇರಿದಂತೆ ಹಲವಾರು ಹೋರಾಟಗಳಲ್ಲಿ ಭಾಗಿಯಾಗಿದ್ದರು.

ಬಾಗಲಕೋಟೆ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ, ಜಿಲ್ಲಾ ಅಧ್ಯಕ್ಷ, ರಾಜ್ಯ ಬಿಜೆಪಿ ಕಾರ್ಯದರ್ಶಿ, ಬಿಜೆಪಿ ರಾಷ್ಟ್ರೀಯ ಸಮಿತಿಯ ಸದಸ್ಯ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. 

ಒಂದು ಬಾರಿ ವಿಧಾನ ಪರಿಷತ್‌ ಸದಸ್ಯರಾಗಿ ಸಹ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಅಖಿಲ ಭಾರತ ಸೋಮವಂಶ ಸಹಾಸ್ರರ್ಜುನ ಕ್ಷತ್ರಿಯ ಸಮಾಜದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.