ಅಖಿಲ ಭಾರತ ಬಿಲ್ಲವರ ಯೂನಿಯನ್ ಮತ್ತು ನಾರಾಯಣಗುರು ವಿದ್ಯಾಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ 172ನೇ ಜನ್ಮಜಯಂತಿ ಆಚರಣೆ ಪ್ರಯುಕ್ತ ನಗರದ ಪುರಭವನದಲ್ಲಿ ನಡೆದ ‘ಗುರು ಚಿತ್ತಾರ-2026’ ಚಿತ್ರಕಲಾ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮ
ಮಂಗಳೂರು: ನಾರಾಯಣ ಗುರುಗಳು ಅಂದು ಸಮಾಜದಲ್ಲಿದ್ದ ಅನೇಕ ಪಿಡುಗುಗಳ ವಿರುದ್ಧ ಯಾವುದೇ ಸಂಘರ್ಷವಿಲ್ಲದೇ ವಿಶಿಷ್ಟ ರೀತಿಯಲ್ಲಿ ಸಮಾಜ ಸುಧಾರಣೆ, ಜನರಲ್ಲಿ ಮನಪರಿವರ್ತನೆ ಮೂಲಕ ಮಾಡಿದ ಸಮಾಜ ಸುಧಾರಣೆಗಳು ಇಂದಿಗೂ ಮಾದರಿ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಹೇಳಿದರು.ಅಖಿಲ ಭಾರತ ಬಿಲ್ಲವರ ಯೂನಿಯನ್ ಮತ್ತು ನಾರಾಯಣಗುರು ವಿದ್ಯಾಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ 172ನೇ ಜನ್ಮಜಯಂತಿ ಆಚರಣೆ ಪ್ರಯುಕ್ತ ನಗರದ ಪುರಭವನದಲ್ಲಿ ನಡೆದ ‘ಗುರು ಚಿತ್ತಾರ-2026’ ಚಿತ್ರಕಲಾ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾನತೆಗೆ ಮೀಸಲಾತಿ ಅಗತ್ಯ: ಸಾಮಾಜಿಕ ಸಮಾನತೆಗಾಗಿ ದಲಿತರು, ಹಿಂದುಳಿದವರಿಗೆ ಮೀಸಲಾತಿ ಅತ್ಯಗತ್ಯವಾಗಿ ಇರಬೇಕು. ನಾಲ್ವಡಿ ಕೃಷ್ಣರಾಜ ಒಡೆಯರ್ ತಮ್ಮ ಆಡಳಿತದಲ್ಲಿ ಶೇ.75ರಷ್ಟುಮೀಸಲಾತಿಯನ್ನು ಕೊಟ್ಟಿದ್ದು ಇಂದಿಗೆ ಸ್ಮರಣೀಯ. ನಾರಾಯಣಗುರುಗಳು ಕೇವಲ ಅಸ್ಪೃಶ್ಯತೆ ವಿರುದ್ಧ ಹೋರಾಟ ಮಾಡಿಲ್ಲ. ಸಮಾನತೆಗಾಗಿ ಹೋರಾಡಿದರು ಎಂದರು.ಬಹುಮಾನ ವಿತರಿಸಿ ಮಾತನಾಡಿದ ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್, ಶೈಕ್ಷಣಿಕ ಜಾಗೃತಿ ಕಾರ್ಯವಾಗಬೇಕು. ಸಮಾಜದ ಸುಧಾರಣೆ, ಸಾಮರಸ್ಯದ ಪರಿವರ್ತನೆ ಆಗಬೇಕಿದೆ. ಹಿಂದುಳಿದ ವರ್ಗಗಳು ಸಂಘಟಿತರಾಗಿ ಸಮಾಜದಲ್ಲಿ ನೇತೃತ್ವ ವಹಿಸಬೇಕು ಎಂದರು.
ಸೋಲೂರು ಮಠದ ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾಧಿಪತಿ ವಿಖ್ಯಾತಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಸಮಾಜದ ಹಿಂದುಳಿದ, ಬಡ ಮಕ್ಕಳಿಗಾಗಿ ಸರ್ಕಾರ ಬೆಂಗಳೂರಿನಲ್ಲೊಂದು ಸುಸಜ್ಜಿತ ಹಾಸ್ಟೆಲ್ ನಿರ್ಮಾಣ ಮಾಡಬೇಕು ಎಂದರು.ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್‌ಚಂದ್ರ ಡಿ.ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಯೂನಿಯನ್‌ನ ಮಹಿಳಾ ಸಂಘದ ಅಧ್ಯಕ್ಷೆ ಸುಮಲತಾ ಎನ್.ಸುವರ್ಣ, ಉಭಯ ಜಿಲ್ಲೆಯ ವಿವಿಧ ತಾಲೂಕು ಅಧ್ಯಕ್ಷರಾದ ಜಯವಿಕ್ರಮ್ ಕಲ್ಲಾಪು, ಸತೀಶ್ ಕುಮಾರ್ ಕೆಡಿಂಜೆ, ಶಶಧರ ಎಂ.ಅಮೀನ್ ಉಡುಪಿ, ಅಶೋಕ್ ಪೂಜಾರಿ ಬೀಜಾಡಿ, ಪ್ರಮಲ್ ಕುಮಾರ್ ಮತ್ತಿತರರು ಇದ್ದರು.
ಕಿಶೋರ್ ಕುಮಾರ್ ಎಸ್.ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಎಂ.ಎಸ್.ಕೋಟ್ಯಾನ್ ಪ್ರಾಸ್ತಾವಿಕ ಮಾತನಾಡಿದರು. ಜೀವನ್ ಕುಮಾರ್ ಸ್ವಾಗತಿಸಿದರು. ಕೇಶವ ಬಂಗೇರ ನಿರೂಪಿಸಿದರು.ಬಿ.ಕೆ.ಹರಿಪ್ರಸಾದ್ ಅವರನ್ನು ಗೌರವಿಸಲಾಯಿತು. ನರೇಶ್ ಕುಮಾರ್ ಸಸಿಹಿತ್ಲು ಅಭಿನಂದನಾ ಮಾತನಾಡಿದರು.