ಸಮಾಜದಲ್ಲಿ ನಾವು ಮನುಷ್ಯರಾಗಿ, ಗೌರವದಿಂದ ಬದುಕಲು ವಿದ್ಯೆಯು ಅತ್ಯಂತ ಅಗತ್ಯ ಎಂಬುದನ್ನು ಮನಗಂಡು ನಮಗೆ ಶಿಕ್ಷಣದ ಬಾಗಿಲು ತೆರೆದುಕೊಟ್ಟ ಮಹಾನ್ ಕ್ರಾಂತಿಕಾರಿ ಬ್ರಹ್ಮಶ್ರೀ ನಾರಾಯಣ ಗುರುಗಳು, ಶಿಕ್ಷಣ ಕ್ರಾಂತಿಯ ಮೂಲಕ ಸಮಾಜದ ಕತ್ತಲೆ ಹೋಗಲಾಡಿಸಿದ ಯುಗಪುರುಷ.

ಕನ್ನಡಪ್ರಭ ವಾರ್ತೆ ಮೈಸೂರು

ಸಾಮಾಜಿಕ ಸಮಾನತೆ ಮತ್ತು ಸೌಹಾರ್ದತೆಗೆ ನಾರಾಯಣ ಗುರುಗಳ ಚಿಂತನೆಗಳೇ ದಾರಿದೀಪ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ನಗರದ ಕಲಾಮಂದಿರಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರ ಪಾಲಿಕೆ ಹಾಗೂ ಬ್ರಹ್ಮ ಶ್ರೀ ನಾರಾಯಣ ಗುರು ಜಯಂತ್ಯುತ್ಸವ ಸಮಿತಿ ಸಂಯುಕ್ತವಾಗಿ ಶನಿವಾರ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿಯನ್ನು ಅವರು ಉದ್ಘಾಟಿಸಿ ಮಾತನಾಡಿದದರು.

ಸಮಾಜದಲ್ಲಿ ನಾವು ಮನುಷ್ಯರಾಗಿ, ಗೌರವದಿಂದ ಬದುಕಲು ವಿದ್ಯೆಯು ಅತ್ಯಂತ ಅಗತ್ಯ ಎಂಬುದನ್ನು ಮನಗಂಡು ನಮಗೆ ಶಿಕ್ಷಣದ ಬಾಗಿಲು ತೆರೆದುಕೊಟ್ಟ ಮಹಾನ್ ಕ್ರಾಂತಿಕಾರಿ ಬ್ರಹ್ಮಶ್ರೀ ನಾರಾಯಣ ಗುರುಗಳು, ಶಿಕ್ಷಣ ಕ್ರಾಂತಿಯ ಮೂಲಕ ಸಮಾಜದ ಕತ್ತಲೆ ಹೋಗಲಾಡಿಸಿದ ಯುಗಪುರುಷ ಎಂದರು.

ಕೇರಳದಲ್ಲಿ ಜನ್ಮತಾಳಿದ ಅವರು ಶಾಲೆಗಳನ್ನು ದೊಡ್ಡದು ಮಾಡಿ, ದೇವಸ್ಥಾನಗಳ ಆಡಂಬರವನ್ನು ಚಿಕ್ಕದು ಮಾಡಿ ಎಂಬ ಕ್ರಾಂತಿಕಾರಿ ಸಂದೇಶ ನೀಡಿದರು. ಮೂಢನಂಬಿಕೆಗಳಿಗಿಂತ ಅರಿವು ನೀಡುವ ಶಿಕ್ಷಣವೇ ಶ್ರೇಷ್ಠವೆಂಬುದನ್ನು ಜಗತ್ತಿಗೆ ಸಾರಿದರು. ಇಂತಹ ಮಹಾನ್ ಮಾನವತಾವಾದಿ ನಾರಾಯಣ ಗುರುಗಳ ವಿಚಾರಧಾರೆ ಹಾಗೂ ತತ್ತ್ವಗಳನ್ನು ಆಳವಾಗಿ ಅಧ್ಯಯನ ಮಾಡಲು ಮಂಗಳೂರಿನಲ್ಲಿ ಅಧ್ಯಯನ ಪೀಠಗಳನ್ನು ಸ್ಥಾಪಿಸಿ ಸಂಶೋಧನೆಗೆ ಪ್ರೋತ್ಸಾಹ ನೀಡುವಂತೆ ಮಾಡಲಾಗುತ್ತಿದೆ ಎಂದರು.

ನಮಗೆಲ್ಲರಿಗೂ ಸಮಾನತೆ, ಸ್ವಾತಂತ್ರ್ಯ ಮತ್ತು ಸಾಮಾಜಿಕ ನ್ಯಾಯವನ್ನು ಕಲ್ಪಿಸಿಕೊಡುವ ಬೃಹತ್ ಸಂವಿಧಾನವನ್ನು ಡಾ.ಬಿ.ಆರ್. ಅಂಬೇಡ್ಕರ್ ನೀಡಿದ್ದಾರೆ. ಸಮಾಜದಲ್ಲಿದ್ದ ಜಾತೀಯತೆ, ಅಸ್ಪೃಶ್ಯತೆ ಹಾಗೂ ತಾರತಮ್ಯಗಳ ವಿರುದ್ಧ ಹೋರಾಡಿ, ಇಂದಿಗೂ ಸಮಾಜದ ಶೂದ್ರ ಹಾಗೂ ಹಿಂದುಳಿದ ವರ್ಗಗಳಿಗೆ ಗೌರವಯುತ ಜೀವನ ಮತ್ತು ಸಾಮಾಜಿಕ ನೆಲೆಯನ್ನು ಕಲ್ಪಿಸಿಕೊಟ್ಟ ಕೀರ್ತಿ ಶ್ರೀ ನಾರಾಯಣ ಗುರುಗಳಿಗೆ ಸಲ್ಲುತ್ತದೆ ಎಂದು ಅವರು ತಿಳಿಸಿದರು.

ಶಿಕ್ಷಣ- ಸಂಘಟನೆ:

ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ. ಹರೀಶ್ ಗೌಡ ಮಾತನಾಡಿ, ನಾರಾಯಣ ಗುರುಗಳು ಸಮಾಜದಲ್ಲಿದ್ದ ತಾರತಮ್ಯ, ಅಸ್ಪೃಶ್ಯತೆ ಹಾಗೂ ಕಂದಾಚಾರಗಳನ್ನು ತೊಡೆದು ಹಾಕಿ, ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು ಎಂಬ ತತ್ತ್ವದ ಮೇಲೆ ಸಮಾನತೆಯ ಸಮಾಜವನ್ನು ಕಟ್ಟಲು ಶ್ರಮಿಸಿದವರು. ಅವರು ನೀಡಿದ ಮುಖ್ಯ ಸಂದೇಶಗಳಲ್ಲಿ ಶಿಕ್ಷಣ ಮತ್ತು ಸಂಘಟನೆ ಪ್ರಮುಖವಾದವು ಎಂದರು.

ಶಿಕ್ಷಣದಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಬಲಶಾಲಿಗಳಾಗಿ ಎಂದು ಅವರು ನೀಡಿದ ಕರೆ ತುಳಿತಕ್ಕೊಳಗಾದ ಸಮುದಾಯಗಳಿಗೆ ಜ್ಞಾನ ಮತ್ತು ಜಾಗೃತಿಯ ಬಾಗಿಲನ್ನು ತೆರೆಯಿತು. ದೇವಾಲಯಗಳ ನಿರ್ಮಾಣದ ಜೊತೆಗೆ ಶಾಲೆಗಳನ್ನು ಕಟ್ಟುವುದು ಮತ್ತು ಜ್ಞಾನಾರ್ಜನೆಗೆ ಮೊದಲ ಆದ್ಯತೆ ನೀಡುವುದು ಅವರ ಮೂಲ ಉದ್ದೇಶವಾಗಿತ್ತು ಎಂದು ಅವರು ಹೇಳಿದರು.

ಮಾನವಕುಲದ ಬೆಳಕು:

ಸಾನ್ನಿಧ್ಯ ವಹಿಸಿದ್ದ ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನದ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿದ್ದ ಜಾತೀಯತೆ, ಅಸ್ಪೃಶ್ಯತೆ ಹಾಗೂ ಮೂಢನಂಬಿಕೆಗಳ ವಿರುದ್ಧ ಶಸ್ತ್ರ ಹಿಡಿಯದೆ, ಶಾಂತಿ ಮತ್ತು ಜ್ಞಾನದ ಮಾರ್ಗದಲ್ಲೇ ಮಹಾನ್ ಕ್ರಾಂತಿ ಮಾಡಿದವರು ನಾರಾಯಣ ಗುರುಗಳು. ಕೇವಲ ಕಲ್ಲಿನ ವಿಗ್ರಹಗಳನ್ನಷ್ಟೇ ಅಲ್ಲದೆ, ನಂತರದ ದಿನಗಳಲ್ಲಿ ದೇವಾಲಯಗಳಲ್ಲಿ ಕನ್ನಡಿ ಹಾಗೂ ದೀಪಗಳನ್ನು ಇಟ್ಟು, ನಿನ್ನೊಳಗಿನ ದೇವನನ್ನು ನೀನು ಕಾಣು ಎಂಬ ಸಾಕ್ಷಾತ್ಕಾರದ ಸಂದೇಶ ನೀಡಿದರು. ಅವರು ಯಾವುದೇ ಒಂದು ನಿರ್ದಿಷ್ಟ ಜಾತಿ ಅಥವಾ ಸಮುದಾಯಕ್ಕೆ ಸೀಮಿತವಾದವರಲ್ಲ. ಅವರು ಇಡೀ ಮಾನವಕುಲದ ಬೆಳಕು ಎಂದು ತಿಳಿಸಿದರು.

ನಾರಾಯಣ ಗುರು ಅವರ ವಿಚಾರಗಳನ್ನು ಕೇವಲ ಭಾಷಣಕ್ಕೆ ಸೀಮಿತಗೊಳಿಸದೆ, ನಮ್ಮ ದಿನನಿತ್ಯದ ಬದುಕಿನಲ್ಲಿ ಅಳವಡಿಸಿಕೊಂಡು, ಜಾತಿ- ಮತಗಳ ತಾರತಮ್ಯವಿಲ್ಲದ ಸಮಾನತೆಯ ಸಮಾಜ ಕಟ್ಟುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದರು.

ತುಮಕೂರು ವಿವಿ ಪರೀಕ್ಷಾಂಗ ಕುಲಸಚಿವ ಡಾ. ಮೋಹನ ಚಂದ್ರಗುತ್ತಿ ಮುಖ್ಯ ಭಾಷಣ ಮಾಡಿದರು. ಶಿವಮೊಗ್ಗ ನಾರಾಯಣ ಗುರು ಮಹಾಸಂಸ್ಥಾನದ ಶ್ರೀ ರೇಣುಕಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ರಾಮಪ್ಪ, ಮೈಲ್ಯಾಕ್ ಅಧ್ಯಕ್ಷ ಎಚ್.ಡಿ. ಗಣೇಶ್, ಕಾಡಾ ಅಧ್ಯಕ್ಷ ಮರಿಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್, ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ.ಕೆ. ಪೋತರಾಜ್, ಪದಾಧಿಕಾರಿಗಳಾದ ಟಿ. ಶಿವಣ್ಣ, ರಾಜಶೇಖರ ಕದಂಬ, ರಾಜು, ಮುರಳಿ, ರಾಜಶೇಖರ ಮಾಂಬಳ್ಳಿ, ವಿದ್ಯಾಸಾಗರ ಕದಂಬ, ಜಯಣ್ಣ, ವೆಂಕಟೇಶ್ ಮೊದಲಾದರು ಇದ್ದರು.

ಇದಕ್ಕೂ ಮುನ್ನ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಕಲಾಮಂದಿರದವರೆಗೆ ವಿವಿಧ ಕಲಾತಂಡಗಳೊಂದಿಗೆ ಬ್ರಹ್ಮಶ್ರೀ ನಾರಾಯಗುರು ಭಾವಚಿತ್ರ ಮೆರವಣಿಗೆ ನಡೆಯಿತು.

ಶಾಲಾ ಕಾಲೇಜುಗಳ ಪಠ್ಯಪುಸ್ತಕಗಳಲ್ಲಿ ಶ್ರೀ ನಾರಾಯಣ ಗುರುಗಳ ಜೀವನ, ಅವರ ಸಾಹಿತ್ಯ ಮತ್ತು ಸಾಮಾಜಿಕ ಕೊಡುಗೆಗಳ ಬಗ್ಗೆ ಕಡ್ಡಾಯವಾಗಿ ಅಧ್ಯಯನ ಸಾಮಗ್ರಿಗಳನ್ನು ಅಳವಡಿಸಿ, ಯುವಜನರಲ್ಲಿ ಸೌಹಾರ್ದತೆ ಬೆಳೆಸಲಾಗುವುದು ಮತ್ತು ಮಾನವೀಯ ಮೌಲ್ಯಗಳನ್ನು ಬೋಧಿಸಿದ ಈ ಮಹಾನ್ ಚೇತನದ ಕೊಡುಗೆಯನ್ನು ಮುಂಬರುವ ಯುವ ಪೀಳಿಗೆಗೆ ತಲುಪಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

- ಮಧು ಬಂಗಾರಪ್ಪ, ಶಿಕ್ಷಣ ಸಚಿವರು