ಕೋಲಾರ ಜಿಲ್ಲೆ ಕಡಗಣನೆ । ಕಾಂಗ್ರೆಸ್ ಕಾರ್ಯಕರ್ತರಿಂದ ಆಕ್ರೋಶ । ಹೈಕಮಾಂಡ್ ವಿರುದ್ಧ ಧಿಕ್ಕಾರ
ಕನ್ನಡಪ್ರಭ ವಾರ್ತೆ ಬಂಗಾರಪೇಟೆಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂಪುಟದಲ್ಲಿ ಕೋಲಾರ ಜಿಲ್ಲೆಯನ್ನು ಕಡೆಗಣಿಸಿರುವುದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ರಸ್ತೆ ತಡೆ ನಡೆಸಿ ಹೈಕಮಾಂಡ್ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಸಂಪುಟದಲ್ಲಿಯೂ ಸಹ ಕೋಲಾರ ಜಿಲ್ಲೆಯ ಯಾವೊಬ್ಬ ಶಾಸಕರಿಗೂ ಮಂತ್ರಿ ಭಾಗ್ಯ ಕಲ್ಪಿಸಿರಲಿಲ್ಲ. ಈಗ ಡಿ.ಕೆ. ಶಿವಕುಮಾರ್ ಸಂಪುಟದಲ್ಲಾದರೂ ಜಿಲ್ಲೆಗೆ ಅವಕಾಶ ಸಿಗಬಹುದೆಂಬ ನಿರೀಕ್ಷೆ ಇತ್ತು, ಆದರೆ ಈಗ ಅದೂ ಹುಸಿಯಾಗಿದೆ ಎಂದು ಬೇಸರಗೊಂಡ ಕಾಂಗ್ರೆಸ್ ಕಾರ್ಯಕರ್ತರು ದಿಢೀರನೆ ಕೋಲಾರ ಮುಖ್ಯರಸ್ತೆಯ ಅಂಬೇಡ್ಕರ್ ಪ್ರತಿಮೆ ಬಳಿ ರಸ್ತೆ ತಡೆದು ಹೈಕಮಾಂಡ್ ವಿರುದ್ಧ ಧಿಕ್ಕಾರಗಳನ್ನು ಕೂಗಿದರು.ಬಳಿಕ ಮಾತನಾಡಿದ ಪಕ್ಷದ ಜಿಲ್ಲಾ ಮಾಜಿ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಸತತವಾಗಿ ಸರ್ಕಾರಗಳು ಕೋಲಾರ ಜಿಲ್ಲೆಯನ್ನು ಕಡೆಗಣಿಸುತ್ತಿದೆ. ಜಿಲ್ಲೆಯಲ್ಲಿ ನಾಲ್ವರು ಕಾಂಗ್ರೆಸ್ ಶಾಸಕರಿ್ದ್ದರೂ ಅವರಲ್ಲಿ ಯಾವೊಬ್ಬರಿಗೂ ಸಚಿವ ಸ್ಥಾನ ನೀಡದೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಇದೇ ರೀತಿ ಚಿಕ್ಕಬಳ್ಳಾಪುರಲ್ಲಿಯೂ ಮೂವರು ಕಾಂಗ್ರೆಸ್ ಶಾಸಕರಿದ್ದರೂ ಆ ಜಿಲ್ಲೆಗೂ ಸಚಿವ ಭಾಗ್ಯ ನೀಡದೆ ಕಾಂಗ್ರೆಸ್ ನಿರ್ಲಕ್ಷ್ಯ ಮಾಡುವ ಮೂಲಕ ಶಾಸಕರ ಹಾಗೂ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದೆ. ಈಗ ಉಂಟಾಗಿರುವ ಡ್ಯಾಮೇಜ್ ಕಂಟ್ರೋಲ್ ಮಾಡದಿದ್ದರೆ ಎಲ್ಲಾ ನಾಲ್ಕು ಶಾಸಕರು, ಮುಖಂಡರು ಸಭೆ ಸೇರಿ ಒಮ್ಮತದಿಂದ ರಾಜೀನಾಮೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕಳೆದ ಹಲವು ದಶಕಗಳಿಂದ ಜಿಲ್ಲೆಯಲ್ಲಿ ಬಲಗೈ ಸಮುದಾಯದ ಶಾಸಕರಿಗೆ ಸಚಿವ ಸ್ಥಾನದಿಂದ ವಂಚಿತರಾಗಿದ್ದಾರೆ. ಈ ಕೊರಗನ್ನು ಸಂಪುಟ ವಿಸ್ತರಣೆಯಲ್ಲಿ ಬಲಗೈ ಸಮುದಾಯದ ಶಾಸಕರಾಗಿ ಮೂರು ಬಾರಿ ಆಯ್ಕೆಯಾಗಿರುವ ಎಸ್.ಎನ್.ನಾರಾಯಣಸ್ವಾಮಿಗೆ ಸಚಿವ ಸ್ಥಾನ ನೀಡುವ ಮೂಲಕ ನೀಗಬಹುದು ಎಂಬ ಆಸೆ ಭಾವನೆ ಇತ್ತು, ಈಗ ಅದಕ್ಕೂ ಪಕ್ಷದ ಹೈಕಮಾಂಡ್ ಹಿನ್ನಡೆ ಉಂಟು ಮಾಡುವ ಮೂಲಕ ಆ ಸಮುದಾಯದ ಜನರನ್ನು ಘಾಸಿಗೊಳಿಸಿದೆ. ಇದರ ಪರಿಣಾಮ ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಕಾಣಬಹುದು ಎಂದು ಎಂದರಲ್ಲದೆ ಮುಂದೆ ಪಕ್ಷ ಜಿಲ್ಲೆಯಲ್ಲಿ ಸರ್ವನಾಶವಾದರೂ ಆಶ್ಚರ್ಯವಿಲ್ಲ ಎಂದು ತಮ್ಮ ಆಕ್ರೋಶ ಹೊರಹಾಕಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ವಿ.ನಾಗರಾಜ್ ಮಾತನಾಡಿ, ಶಾಸಕ ಎಸ್.ಎನ್.ನಾರಾಯಣಸ್ವಾಮಿಗೆ ಸಚಿವ ಸ್ಥಾನ ನೀಡದಿದ್ದರೆ ಪಕ್ಷದ ಎಲ್ಲಾ ಹುದ್ದೆಗಳಿಗೂ ಕಾರ್ಯಕರ್ತರು ಸಾಮೋಹಿಕವಾಗಿ ರಾಜೀನಾಮೆ ನೀಡಲಾಗುವುದು ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರಾದ ಗೋವಿಂದು, ಎಂ.ಮುನಿರಾಜು, ಎಚ್.ಕೆ.ನಾರಾಯಣಸ್ವಾಮಿ, ಮಂಜುನಾಥಗೌಡ, ರಾಕೇಶ್ ಗೌಡ, ಅಣ್ಣಾದೊರೆ, ಎಎಪಿಸಿಎಂಎಸ್ ಉಪಾಧ್ಯಕ್ಷ ಅ.ನಾ.ಹರೀಶ್, ಶೇಖರ್, ಕಣಿಂಬೆಲೆ ರಾಮಪ್ರಸಾದ್, ನವೀನ್ ಗೌಡ, ವೆಂಕಟೇಶ್ ಗೌಡ, ಚಂದ್ರು, ಮಹಾದೇವ್, ಇತರರು ಇದ್ದರು.