ಸಾರಾಂಶ
ಹೈ ಆದೇಶಕ್ಕೆ ಸರ್ಕಾರ ತಡೆ ಯತ್ನ । ರೈತರ ಆಕ್ರೋಶಕ್ಕೆ ಮೆತ್ತಗಾದ ರಾಜ್ಯ ಸರ್ಕಾರ? । ನೀರು ಹರಿಸಲು ತೀರ್ಮಾನ
ಕನ್ನಡಪ್ರಭ ವಾರ್ತೆ ಯಾದಗಿರಿ/ಹುಣಸಗಿಒಣಗುತ್ತಿರುವ ಬೆಳೆಗಳ ಸಂರಕ್ಷಿಸಿಕೊಳ್ಳಲು ತುರ್ತಾಗಿ ನಾರಾಯಣಪುರದ ಎಡ-ಬಲದಂಡೆ ಕಾಲುವೆಗಳಿಗೆ ಬಸವಸಾಗರ ಜಲಾಶಯದ ಮೂಲಕ ನೀರು ಹರಿಸುವ ವಿಚಾರ ಈಗ ರಾಜಕೀಯ ಹಗ್ಗಜಗ್ಗಾಟಕ್ಕೆ ಸಾಕ್ಷಿಯಾಗಿದೆ. ತಮ್ಮ ಹೊಲ-ಗದ್ದೆಗಳಿಗೆ ನೀರು ಹರಿಯುತ್ತದೆ ಎಂದು ಕಾಯುತ್ತಿರುವ ಸಾವಿರಾರು ರೈತರು ‘ನೀರು ರಾಜಕೀಯ’ದಲ್ಲಿ ಸಿಲುಕಿ ಪರದಾಡುವಂತಾಗಿದೆ.
ಗುರುವಾರ ಕಲಬುರಗಿ ಹೈಕೋರ್ಟ್ ಏಕ ಸದಸ್ಯ ಪೀಠ ಏ.4 ರಿಂದ ಏ.6 ರವರೆಗೆ ನೀರು ಬಿಡುವಂತೆ ಆದೇಶಿಸಿತ್ತು.ಹೀಗಾಗಿ, ಶುಕ್ರವಾರ ಬೆಳಿಗ್ಗೆಯಿಂದಲೇ ನೀರು ಹರಿಯಬಹುದು ಎಂಬ ನಿರೀಕ್ಷೆಯಲ್ಲಿದ್ದ ರೈತರಿಗೆ, ರಾಜ್ಯ ಸರ್ಕಾರ ಹೈಕೋರ್ಟ್ ಏಕ ಸದಸ್ಯ ಪೀಠದ ಆದೇಶಕ್ಕೆ ಮೇಲ್ಮನವಿ ಸಲ್ಲಿಸಿ, ನೀರು ಹರಿಸುವಿಕೆಗೆ ವಿಭಾಗೀಯ ಪೀಠದಲ್ಲಿ ತಡೆ ತಂದಿದೆ ಎಂಬುದಾಗಿ ಹಬ್ಬಿದ ಸುದ್ದಿ ರೈತವರ್ಗದಲ್ಲಿ ಸರ್ಕಾರದ ವಿರುದ್ಧ ಕಿಚ್ಚು ಹಚ್ಚಿತ್ತು.
ಅಚ್ಚರಿ ಎಂದರೆ, ಹೈಕೋರ್ಟ್ ಆದೇಶಕ್ಕೂ ದಿನದ ಹಿಂದಷ್ಟೇ, ಡಿಸಿಎ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಬಂದಿದ್ದ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ, ಯಾದಗಿರಿ ಶಾಸಕ ಚೆನ್ನಾರೆಡ್ಡಿ ತುನ್ನೂರು ಹಾಗೂ ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ್ ಮತ್ತವರ ತಂಡ, ನೀರು ಹರಿಸುವಂತೆ ಮನವಿ ಮಾಡಿದ್ದರಲ್ಲದೆ, ಸರ್ಕಾರ ರೈತರ ಪರವಾಗಿದೆ, ನೀರು ಹರಿಸುತ್ತದೆ ಎಂದು ಹೇಳಿಕೆಗಳನ್ನು ನೀಡಿದ್ದರು.ಗುರುವಾರ ಮಧ್ಯಾಹ್ನ ರಾಜೂಗೌಡ ಮತ್ತವರ ತಂಡ, ನೀರು ಹರಿಸುವ ಕುರಿತು ಕಲಬುರಗಿ ಹೈಕೋರ್ಟ್‌ನಿಂದ ಆದೇಶ ತಂದರು. ಸ್ಥಳೀಯ ಕಾಂಗ್ರೆಸ್ ಮುಖಂಡರಲ್ಲಿ ಇದು ಮಜುಗರ ಮೂಡಿಸಿದಂತಿತ್ತು.
ಆದರೆ, ಶುಕ್ರವಾರ ಏಕ ಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿ, ನೀರು ಹರಿಸುವ ವಿಚಾರದಲ್ಲಿ ಸರ್ಕಾರ ತಡೆ ತಂದಿದೆ ಎಂಬುದಾಗಿ ರಾಜೂಗೌಡ ಸಾಮಾಜಿಕ ಜಾಲತಾಣ ಹಾಗೂ ಸುದ್ದಿಗೋಷ್ಠಿಯಲ್ಲಿ ಹೇಳಿಕೆಗಳನ್ನು ನೀಡಿದ ಬೆನ್ನಲ್ಲೇ, ರೈತಾಪಿ ವಲಯದಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ ಶುರುವಾದವು.ಈ ಎಲ್ಲ ಬೆಳವಣಿಗೆಗಳಿಂದ ಮಜುಗರಕ್ಕೊಳಗಾದ ಸರ್ಕಾರ, ಶುಕ್ರವಾರ ರಾತ್ರಿಯೊಳಗೆ ಮಧ್ಯಂತರ ತಡೆ ಅರ್ಜಿ ವಾಪಸ್ ಪಡೆದು, ಶುಕ್ರವಾರ ರಾತ್ರಿ (ಏ.4) ನೀರು ಹರಿಸುವಲ್ಲಿ ಮುಂದಾಗಿದೆ. ರೈತರ ಆಕ್ರೋಶಕ್ಕೆ ಗುರಿಯಾಗುವ ಬದಲು, ಕೊಟ್ಟ ಮಾತಿನಂತೆ ನೀರು ಹರಿಸಿದ್ದೇವೆಂದು ತೋರಿಸಲಿಕ್ಕಾದರೂ ಶುಕ್ರವಾರ ನೀರು ಹರಿಸುವ ತಯಾರಿ ನಡೆಸುವ ಕುರಿತು ಅಧಿಕಾರಿಗಳಿಗೆ ತಿಳಿಸಲಾಗಿದೆ ಎನ್ನಲಾಗಿದೆ. ರೈತರು ಆತಂಕ ಪಡಬೇಕಿಲ್ಲ. ನೀರು ಹರಿಸಲಾಗುವುದು ಯಾವುದೇ ವದಂತಿಗಳ ನಂಬಬೇಡಿ ಎಂದು ಸಚಿವ ದರ್ಶನಾಪುರ ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿಕೊಂಡರು. ರಾಜಕೀಯ ಗೌಜು- ಗದ್ದಲದಲ್ಲಿ ಏನು ಮಾಡಬೇಕು ಎಂದು ಅಧಿಕಾರಿಗಳೂ ಗೊಂದಲಕ್ಕೀಡಾಗಿದ್ದಂತಿತ್ತು.
ಕಾಲುವೆಗಳಿಗೆ ನೀರು ಹರಿಸುವ ಕುರಿತು, ಕಳೆದ 10-15 ದಿನಗಳಿಂದ ಜಿಲ್ಲೆಯ ಸುರಪುರ, ಶಹಾಪುರ, ಹುಣಸಗಿ ಭಾಗದಲ್ಲಿನ ವಿವಿಧ ರೈತ ಸಂಘಟನೆಗಳು ಹೋರಾಟ ನಡೆಸಿವೆ. ಜಲಾಶಯದಲ್ಲಿ ಕುಡಿವ ನೀರಿಗಾಗಿ ನೀರನ್ನು ಮೀಸಲಿಟ್ಟಿದೆ ಎಂದು ಸರ್ಕಾರ ಪ್ರತಿಕ್ರಿಯಿಸಿತ್ತು. ಕಾವೇರಿಗೆ ನೀಡುವ ಮಹತ್ವ ಕೃಷ್ಣೆಗೇಕಿಲ್ಲ ಎಂದು ರೈತ ಹಾಗೂ ಕನ್ನಡಪರ ಸಂಘಟನೆಗಳು ನೀರು ಹರಿಸುವ ವಿಚಾರವಾಗಿ ಭಾರಿ ಹೋರಾಟ ಹಾಗೂ ಯಾದಗಿರಿ ಬಂದ್, ಪ್ರತಿಭಟನೆ ನಡೆಸಿದ್ದರು.ಆದರೆ, ನೀರು ಬಿಡುವಲ್ಲಿ ಸರ್ಕಾರ ಮುಂದಾಗುತ್ತಿಲ್ಲ ಎಂದು ದೂರಿ, ಸರ್ಕಾರದ ನಡೆ ವಿರುದ್ಧ ಮಾಜಿ ಸಚಿವ ರಾಜೂಗೌಡ ಮತ್ತು ನಾಲ್ವರ ತಂಡ ಗುರುವಾರ ಕಲಬುರಗಿ ಹೈಕೋರ್ಟ್ ಪೀಠಕ್ಕೆ ಮಧ್ಯಂತರ ಅರ್ಜಿ ಸಲ್ಲಿಸಿ, ಒಣಗುತ್ತಿರುವ ಬೆಳೆಗಳ ರಕ್ಷಿಸಲು ತುರ್ತಾಗಿ ನೀರು ಬಿಡುವಂತೆ ಕೋರಿದ್ದವು.
ರೈತ ವಿರೋಧಿ ಸರ್ಕಾರ: ರಾಜೂಗೌಡನೀರು ಹರಿಸುವಂತೆ ಕಲಬುರಗಿ ಹೈಕೋರ್ಟ್ (ಏಕಪೀಠ) ಆದೇಶ ಮಾಡಿತ್ತು, ರೈತರು ಸಹ ಖುಷಿಯಾಗಿದ್ದರು. ಆದರೆ, ಶುಕ್ರವಾರ ಬೆಳಿಗ್ಗೆ ರಾಜ್ಯ ಸರ್ಕಾರ ಈ ಆದೇಶಕ್ಕೆ ಸ್ಟೇ ತರುವ ಮೂಲಕ ರೈತ ವಿರೋಧಿ ನಡೆಗೆ ಮುಂದಾಗಿದೆ ಎಂದು ಯಾದಗಿರಿಯಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿದ ಮಾಜಿ ಸಚಿವ ನರಸಿಂಹ ನಾಯಕ (ರಾಜೂಗೌಡ), ಸರ್ಕಾರದ ವಿರುದ್ಧ ಕಿಡಿಕಾರಿದರು.
ಈ ಹೋರಾಟ ಕೇವಲ ರಾಜುಗೌಡನಿಗಲ್ಲ. ನಾನೂ ಸೇರಿದಂತೆ ಕನ್ನಡಪರ, ರೈತ ಸಂಘಟನೆಗಳು ಹೋರಾಟ ನಡೆಸಿದ್ದೇವೆ. ಯಾದಗಿರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರೂ ಈ ಸರ್ಕಾರಕ್ಕೆ ರೈತರ ಗೋಳು ಕೇಳಿಸುತ್ತಿಲ್ಲ ಎಂದು ಕಿಡಿಕಾರಿದರು.ಈ ಹಿಂದೆ ಹೆಣದ ಮೇಲೆ ರಾಜಕೀಯ ನಡೆದಿತ್ತು. ಈಗ, ಇಲ್ಲಿನ ನೀರಿನ ಮೇಲೆ ರಾಜಕೀಯ ನಡೆಯುತ್ತಿರುವುದು ದುರಂತ. ರೈತರ ಸಮಸ್ಯೆ ಅರ್ಥ ಮಾಡಿಕೊಳ್ಳದ ಸರ್ಕಾರ ತಡೆಯಾಜ್ಞೆಗೆ ಮೇಲ್ಮನವಿ ಸಲ್ಲಿಸಿರುವುದು ದುರದೃಷ್ಟಕರ. ರೈತರಿಗೆ ನೋವು ನೀಡಿದ ಯಾವುದೇ ಸರ್ಕಾರ ಉಳಿದಿಲ್ಲ.
ಮಲ್ಲಿಕಾರ್ಜುನ ಸತ್ಯಂಪೇಟೆ, ರೈತ ಮುಖಂಡ. ಯಾದಗಿರಿ.ನಾರಾಯಣಪುರ ಬಸವಸಾಗರ ಜಲಾಶಯದಿಂದ ಎಡ ಹಾಗೂ ಬಲದಂಡೆ ಕಾಲುವೆಗೆ ಮೂರು ದಿನಗಳ ಕಾಲ ಪ್ರತಿದಿನ 0.8 ಟಿಎಂಸಿ ನೀರಿನಂತೆ ಒಟ್ಟು 2.5 ಟಿಎಂಸಿ ನೀರು ಹರಿಸುವಂತೆ ಸರ್ಕಾರದಿಂದ ನಿರ್ದೇಶನ ಬರಲಿದೆ. ನಿರ್ದೇಶನ ಬಂದಾಕ್ಷಣ ರಾತ್ರಿಯೇ ಕಾಲುವೆಗೆ ನೀರು ಹರಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ. ಆದೇಶ ಯಾವಾಗ ಬರುತ್ತದೆಯೋ, ಆಗ ಕಾಲುವೆಗೆ ನೀರು ಹರಿಸುತ್ತೇವೆ.
ಮಂಜುನಾಥ್, ಅಧೀಕ್ಷಕ ಅಭಿಯಂತರ, ನಾರಾಯಣಪುರ ಜಲಾಶಯ.