ಮಾದಕ ವಸ್ತು, ದ್ರವ್ಯ ಮಾರಾಟ, ಸಾಗಾಟ ಕಾನೂನುಬಾಹಿರ: ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ

| Published : Feb 21 2025, 11:45 PM IST

ಮಾದಕ ವಸ್ತು, ದ್ರವ್ಯ ಮಾರಾಟ, ಸಾಗಾಟ ಕಾನೂನುಬಾಹಿರ: ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಗಾಂಜಾ, ಅಫೀಮು, ಬ್ರೌನ್ ಶುಬರ್ ಸೇರಿದಂತೆ ಮಾದಕ ದ್ರವ್ಯ, ವಸ್ತುಗಳ ಮಾರಾಟ ಕಾನೂನುಬಾಹಿರ ಕೃತ್ಯವಾಗಿದ್ದು, ಮಾನವ ಕುಲಕ್ಕೆ ವಿನಾಶಕಾರಿಯಾದ ಮಾದಕ ವಸ್ತುಗಳ ಕಳ್ಳಸಾಗಾಣೆ ಮತ್ತು ಮಾರಾಟ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.

ಔಷಧಿ ಅಂಗಡಿಗಳ ತಪಾಸಣೆ ನಡೆಸಲು ಜಿಲ್ಲಾ ಔಷಧ ನಿಯಂತ್ರಕರಿಗೆ ಡಿಸಿ ಆದೇಶ

ಕನ್ನಡಪ್ರಭ ವಾರ್ತೆ ದಾವಣಗೆರೆ

ಗಾಂಜಾ, ಅಫೀಮು, ಬ್ರೌನ್ ಶುಬರ್ ಸೇರಿದಂತೆ ಮಾದಕ ದ್ರವ್ಯ, ವಸ್ತುಗಳ ಮಾರಾಟ ಕಾನೂನುಬಾಹಿರ ಕೃತ್ಯವಾಗಿದ್ದು, ಮಾನವ ಕುಲಕ್ಕೆ ವಿನಾಶಕಾರಿಯಾದ ಮಾದಕ ವಸ್ತುಗಳ ಕಳ್ಳಸಾಗಾಣೆ ಮತ್ತು ಮಾರಾಟ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.

ನಗರದ ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಮಾದಕ ದ್ರವ್ಯಗಳ ತಡೆ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಾದಕ ವಸ್ತುಗಳು, ದ್ರವ್ಯಗಳನ್ನು ಯುವ ಜನರಿಗ ನೀಡುವ ಮೂಲಕ ಅದರ ದಾಸರಾಗಿ ಮಾಡುತ್ತಿರುವುದರ ವಿರುದ್ಧವೂ ಕಠಿಣ ಕ್ರಮ ನಿಶ್ಚಿತ ಎಂದರು.

ಕಾಲೇಜು ವಿದ್ಯಾರ್ಥಿಗಳು, ಯುವ ಜನರನ್ನು ಗುರಿಯಾಗಿಸಿ, ಮಾರಾಟ ಮಾಡುತ್ತಿರುವುದನ್ನು ಕಾಣಬಹುದು. ಇಂತಹ ಮಾದಕ ದ್ರವ್ಯಗಳಿಗೆ ಬಲಿಯಾದಲ್ಲಿ ಅದರಿಂದ ಹೊರ ಬರುವುದು ಕಷ್ಟಕರ ಸಂಗತಿ. ಮಾದಕ ವಸ್ತುಗಳ ಮಾರಾಟ, ಸಾಗಾರ, ಬಳಕೆ ತಡೆಯಬೇಕಾದ್ದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ಮಾದಕ ವಸ್ತು, ದ್ರವ್ಯಗಳ ಮಾರಾಟ, ಸಾಗಾಟ, ಬಳಕೆ ಕಾನೂನುಬಾಹಿರ ಆಗಿದ್ದರೂ ಅಲ್ಲಲ್ಲಿ ಇಂತಹ ಪ್ರಕರಣ ವರದಿಯಾಗುತ್ತಿವೆ. ಜನವರಿ ತಿಂಗಳಲ್ಲೇ 40 ಪ್ರಕರಣ ದಾಖಲಾಗಿದ್ದು, ಇದರಲ್ಲಿ 14 ಪ್ರಕರಣಗಳು ಆಜಾದ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲೇ ಆಗಿವೆ. 5 ಪ್ರಕರಣ ವಿದ್ಯಾನಗರ ಪೊಲೀಸ್ ಠಾಣೆ, 8 ಪ್ರಕರಣ ಸಿಇಎನ್ ಅಪರಾಧ ಪೊಲೀಸ್ ಠಾಣೆ, 5 ಹರಿಹರ ನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ವರದಿಯಾಗಿದೆ ಎಂದು ಹೇಳಿದರು.

ಬಿಹಾರ, ಒಡಿಶಾ, ಉತ್ತರ ಪ್ರದೇಶದ ಕಡೆಯಿಂದ ದಾವಣಗೆರೆ ಕಡೆಗೆ ಮಾದಕ ವಸ್ತುಗಳ ಸಾಗಾಣಿಕೆಯಾಗುತ್ತಿರುವ ಬಗ್ಗೆ ಮಾಹಿತಿ ಇದೆ. ರೈಲ್ವೆ ನಿಲ್ದಾಣಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ತಪಾಸಣೆಯನ್ನು ಕಡ್ಡಾಯವಾಗಿ ಮಾಡಬೇಕು. ಈ ಬಗ್ಗೆ ರೈಲ್ವೆ ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಗಮನ ಹರಿಸಬೇಕು. ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಹೆಚ್ಚು ನಿಗಾ ವಹಿಸಬೇಕು ಎಂದು ಸೂಚಿಸಿದರು.

ಶಾಲಾ-ಕಾಲೇಜು-ಹಾಸ್ಟೆಲ್‌ಗಳ ಸುತ್ತಮುತ್ತಲ ಪ್ರದೇಶದ ಯಾವುದೇ ಅಂಗಡಿ, ಮುಗ್ಗಟ್ಟುಗಳಲ್ಲಿ ಮಾದಕ ವಸ್ತುಗಳ ಮಾರಾಟವಾಗುತ್ತಿದ್ದರೆ ಆಯಾ ಶಾಲೆ, ಕಾಲೇಜಿನವರೇ ಕ್ರಮ ಕೈಗೊಳ್ಳಬಹುದು. ಶಾಲಾ-ಕಾಲೇಜಿನವರಿಗೆ ಕ್ರಮ ಕೈಗೊಳ್ಳಲಾಗದಿದ್ದರೆ ಪೊಲೀಸ್ ಇಲಾಖೆ ಅಥವಾ ಜಿಲ್ಲಾಧಿಕಾರಿ ಕಚೇರಿಗೆ ಮಾಹಿತಿ ನೀಡಿದರೆ ಮಾಹಿತಿದಾರರ ವಿಚಾರ ಗೌಪ್ಯವಾಗಿಡಲಾಗುವುದು ಎಂದು ಭರವಸೆ ನೀಡಿದರು.

ಔಷಧಿ ಅಂಗಡಿಗಳಲ್ಲಿ ನಿಯಮಾನುಸಾರ ಔಷಧಗಳನ್ನು ಮಾರಾಟ ಮಾಡಬೇಕು. ಆದರೆ, ಯಾವುದೇ ರೀತಿಯಲ್ಲೂ ವೈದ್ಯರ ಸಲಹೆ ಇಲ್ಲದೇ, ಸ್ಟಿರಾಯ್ಡ್‌ ಇರುವ ಔಷಧಗಳನ್ನು ವಿತರಣೆ ಮಾಡಬಾರದು. ಈ ಬಗ್ಗೆ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳುವ ಕೆಲಸ ಜಿಲ್ಲಾ ಔಷಧ ನಿಯಂತ್ರಕ ಅಧಿಕಾರಿಗಳಿಂದ ಆಗಬೇಕು. ಕ್ರಮ ಕೈಗೊಂಡ ಬಗ್ಗೆ ಸಾರ್ವಜನಿಕರಿಗೆ ತಿಳಿಯುವಂತೆ ಪ್ರಕಟಣೆ ನೀಡಬೇಕು ಎಂದು ಆದೇಶಿಸಿದರು.

ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಮಾತನಾಡಿ, ಮಾದಕ ವಸ್ತುಗಳ ಸಾಗಾಣೆ, ಮಾರಾಟದ ಬಗ್ಗೆ ಸಾರ್ವಜನಿಕರು, ಸಂಘ, ಸಂಸ್ಥೆಯವರು ಮಾಹಿತಿ ನೀಡಬಹುದಾಗಿದೆ. ಮಾದಕ ವಸ್ತುಗಳಿಂದ ಯುವ ಜನಾಂಗದ ಭವಿಷ್ಯ ಹಾಳಾಗುತ್ತಿದೆ. ಆದ್ದರಿಂದ ಇದನ್ನು ತಡೆಗಟ್ಟಲು ಎಲ್ಲರೂ ಮುಂದೆ ಬರಬೇಕು ಎಂದು ಕರೆ ನೀಡಿದರು.

ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ ಎಂ.ಸಂತೋಷ್, ಜಿ.ಮಂಜುನಾಥ, ಉಪ ವಿಭಾಗಾಧಿಕಾರಿ ಸಂತೋಷ ಪಾಟೀಲ್, ಡಿಎಸ್ಪಿಗಳಾದ ಬಿ.ಎಸ್.ಬಸವರಾಜ, ಶರಣ ಬಸವೇಶ್ವರ, ಪಿ.ಬಿ.ಪ್ರಕಾಶ ಸೇರಿದಂತೆ ಅಧಿಕಾರಿ, ಸಿಬ್ಬಂದಿ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.