ಮಾದಕ ವಸ್ತು: ಹೆಚ್ಚೆಚ್ಚು ಜಾಗೃತಿ ಕಾರ್ಯಕ್ರಮ ಆಯೋಜಿಸಿ: ದಿವ್ಯಪ್ರಭು

| Published : Mar 30 2025, 03:00 AM IST

ಮಾದಕ ವಸ್ತು: ಹೆಚ್ಚೆಚ್ಚು ಜಾಗೃತಿ ಕಾರ್ಯಕ್ರಮ ಆಯೋಜಿಸಿ: ದಿವ್ಯಪ್ರಭು
Share this Article
  • FB
  • TW
  • Linkdin
  • Email

ಸಾರಾಂಶ

ಮಾದಕ ವಸ್ತುಗಳ ಸೇವನೆ ಮತ್ತು ಮಾರಾಟ ಅಪರಾಧ ಚಟುವಟಿಕೆ ಆಗಿದ್ದು, ಜಾಗೃತಿ ಮೂಡಿಸುವದಕ್ಕಾಗಿ ಸರಣಿ ಕಾರ್ಯಕ್ರಮಗಳನ್ನು ಸಂಘಟಿಸಬೇಕಿ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.

ಧಾರವಾಡ: ಮಾದಕ ವಸ್ತುಗಳ ಸೇವನೆ ಮತ್ತು ಮಾರಾಟ ಅಪರಾಧ ಚಟುವಟಿಕೆ ಆಗಿದ್ದು, ಜಾಗೃತಿ ಮೂಡಿಸುವದಕ್ಕಾಗಿ ಸರಣಿ ಕಾರ್ಯಕ್ರಮಗಳನ್ನು ಸಂಘಟಿಸಬೇಕಿ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ನಾರ್ಕೋ (ಎನ್- ಕೊರ್ಡ್) ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.

ಡ್ರಗ್ಸ್ ದಂಧೆ ತಡೆಯಲು ಮತ್ತು ಯುವ ಸಮೂಹವನ್ನು ಮಾದಕ ವಸ್ತಗಳ ಜಾಲದಿಂದ ದೂರವಿಡಲು ಎಲ್ಲರ ಸಹಕಾರ ಬೇಕು. ವಿಶೇಷವಾಗಿ ವಿದ್ಯಾರ್ಥಿಗಳ, ಪಾಲಕರ ಮತ್ತು ಶಿಕ್ಷಕರ ಮಧ್ಯದಲ್ಲಿ ಉತ್ತಮ ಸಂಪರ್ಕ ಮತ್ತು ಸಮನ್ವಯ ಸಾಧಿಸಬೇಕು. ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಆರಂಭದಲ್ಲಿ ಪ್ರತಿ ಶಾಲಾ ಕಾಲೇಜುಗಳಲ್ಲಿ ನೂತನ ವಿದ್ಯಾರ್ಥಿಗಳಿಗೆ ಆಯೋಜಿಸುವ ಸ್ವಾಗತ ಸಮಾರಂಭದಲ್ಲಿ ವಿದ್ಯಾರ್ಥಿ ಮತ್ತು ಪಾಲಕರ ಸಮಾವೇಶ ಮಾಡಿ, ಡ್ರಗ್ಸ್ ಬಗ್ಗೆ ತಿಳಿವಳಿಕೆ ಮೂಡಿಸಬೇಕು. ಪೊಲೀಸ್ ಮತ್ತು ಕಾಲೇಜು ಶಿಕ್ಷಣ ಇಲಾಖೆ ಈ ಕುರಿತು ಕ್ರಿಯಾ ಯೋಜನೆ ರೂಪಿಸಬೇಕು ಎಂದು ಸೂಚಿಸಿದರು. ಕೆಲ ಔಷಧಿ ಅಂಗಡಿಗಳಲ್ಲಿ ನಿಷೇಧಿತ ಮಾತ್ರೆ ಮಾರಾಟ ಮಾಡುತ್ತಾರೆ ಎಂಬ ಮಾಹಿತಿ ಇದೆ. ಔಷಧಿ ನಿಯಂತ್ರಣ ಇಲಾಖೆ ಅಧಿಕಾರಿಗಳು ತಪಾಸಣೆ ಮಾಡಿ, ಅಂತಹ ಪ್ರಕರಣ ಕಂಡುಬಂದಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಬೇಕು. ಔಷಧಿ ಅಂಗಡಿ ಸೀಜ್ ಮಾಡಬೇಕು ಎಂದು ನಿರ್ದೇಶಿಸಿದರು.

ಡ್ರಗ್ಸ್‌ನಂತಹ ವ್ಯಸನಗಳ ಬಗ್ಗೆ ಜಾಗೃತಿ ಮೂಡಿಸಲು ಎಲ್ಲ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಬೇಕು. ತಮ್ಮ ಇಲಾಖಾ ಕಾರ್ಯಕ್ರಮಗಳಲ್ಲಿ ಇಂತಹ ಅಜೆಂಡಾ ಮಾಡಿಕೊಂಡು ಮಾದಕವಸ್ತು ವಿರೋಧಿ ಧ್ವನಿಗೆ ವ್ಯಾಪಕ ಪ್ರಚಾರ ನೀಡಬೇಕು ಎಂದರು.

ಶಾಲಾ ಕಾಲೇಜುಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಮಾದಕ ವಸ್ತುಗಳ ನಿಷೇಧ ಕುರಿತು ಸ್ಪರ್ಧೆಗಳನ್ನು ಆಯೋಜಿಸಬೇಕು. ಎಲ್ಲ ಶಾಲಾ ಕಾಲೇಜುಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಬೇಕು ಎಂದು ಸೂಚಿಸಿದರು.

ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಗೋಪಾಲ ಬ್ಯಾಕೋಡ ಮಾತನಾಡಿ, ಪೊಲೀಸ್ ಇಲಾಖೆಯಿಂದ ಧಾರವಾಡ ಗ್ರಾಮೀಣ ಜಿಲ್ಲೆ ಹಾಗೂ ಮಹಾನಗರ ವ್ಯಾಪ್ತಿಯ ವೈದ್ಯಕೀಯ, ಎಂಜಿನೀಯರಿಂಗ್, ತಾಂತ್ರಿಕ ಕಾಲೇಜುಗಳಲ್ಲಿ ಮಾದಕ ವ್ಯಸನ ಬಳಕೆಯ ದುಷ್ಪರಿಣಾಮ ಕುರಿತು ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂಶಯ ಬಂದ ಪ್ರಕರಣಗಳಲ್ಲಿ ತಪಾಸಣೆ ಸಹ ಮಾಡಲಾಗಿದೆ. ಮಾದಕ ವ್ಯಸನ ಸರಬರಾಜು ಮಾಡುವ ಪೆಡ್ಲರ್‌ಗಳನ್ನು ಮತ್ತು ಡ್ರಗ್ಸ್ ಸೇವಿಸುವವರನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಲಾಗಿದೆ. ಮುಂದಿನ ದಿನಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಾಗೂ ತಪಾಸಣೆಗಳನ್ನು ತೀವ್ರಗೊಳಿಸಿ, ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸುವದಾಗಿ ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಶಶಿ ಪಾಟೀಲ, ಇನಸ್ಪೆಕ್ಟರ್ ಶಿವಾನಂದ ಕಟಗಿ ಮತ್ತು ವಿಜಯಕುಮಾರ ಪಾಟೀಲ ಸೇರಿದಂತೆ ವಿವಿಧ ಕಾಲೇಜುಗಳ ಪ್ರತಿನಿಧಿಗಳು ಮಾತನಾಡಿದರು.

ಹುಬ್ಬಳ್ಳಿ ವಿಶ್ವವಿದ್ಯಾಲಯ ತಂತ್ರಜ್ಞಾನ ಕೆ.ಎಲ್.ಇ ಯ ಡೀನ್ ಡಾ. ಸಂಜಯ. ವ್ಹಿ. ಕೊಟಬಾಗಿ, ಕವಿವಿ ಸ್ಟುಡೆಂಟ್ ವೆಲ್ಫೇರ್‌ನ ಡೀನ್ ಡಾ. ಎಸ್.ಕೆ.ಪವಾರ, ಧಾರವಾಡ ವಾಲ್ಮೀ ಡಾ.ಪ್ರಮೋದ ಎಫ್.ಎಸ್.ಯು., ಯು.ಎ.ಎಸ್. ಡೀನ್ ಡಾ. ಸರೋಜಿನಿ ಜೆ.ಕರಕಣ್ಣವರ, ಐಐಐಟಿಯ ಡಾ. ದರ್ಶನ ಎನ್.ಎಸ್., ಹುಬ್ಬಳ್ಳಿ ಕಿಮ್ಸ ಕಾಲೇಜಿನ ಡೀನ್ ಡಾ. ಕೆ.ಎಫ್. ಕಮ್ಮಾರ, ಧಾರವಾಡ ನಗರ ಸಾರಿಗೆ, ವಾಕರಸಾಸಂ ವಿಭಾಗೀಯ ನಿಯಂತ್ರಣ ಅಧಿಕಾರಿ ಡಾ. ಚೆನ್ನಪ್ಪಗೌಡರ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ. ಕಿರಣಕುಮಾರ, ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ, ಪ್ರಾದೇಶಿಕ ಅರಣ್ಯ ಇಲಾಖೆಯ ಡಿ.ಸಿ.ಎಫ್. ವಿವೇಕ ಟಿ. ಕವರಿ, ಸಹಾಯಕ ಔಷಧಿ ನಿಯಂತ್ರಕ ಅಜಯ ಮುದಗಲ್ಲ, ಅಬಕಾರಿ ಉಪ ಆಯುಕ್ತ ಅರುಣಕುಮಾರ ಕೆ., ಐಐಟಿಯ ಡಾ.ಕೀರ್ತಿಕುಮಾರ, ಎ.ಸಿ ಕಚೇರಿಯ ತಹಶೀಲ್ದಾರ ಪಿ.ಎ.ಪಾಟೀಲ, ಆರೋಗ್ಯ ಅಧಿಕಾರಿ ಡಾ. ಮಂಜುನಾಥ. ಎಸ್., ಎಸ್.ಡಿ.ಎಮ್ ವೈಧ್ಯಕೀಯ ವಿದ್ಯಾಲಯದ ಕ್ಲೆಮೆಂಟ್ ಚೆಲ್ಲಿ, ಡಿಮ್ಹಾನ್ಸನ ಸಹಾಯಕ ಪ್ರಾಧ್ಯಾಪಕ ಮಹೇಶ ಮಹಾದೇವಯ್ಯ, ಹುಬ್ಬಳ್ಳಿ ನಗರ ಸಾರಿಗೆ ವಾಕರಸಾಸಂ ವಿಭಾಗೀಯ ನಿಯಂತ್ರಣ ಅಧಿಕಾರಿ ರಾಮನಗೌಡ, ಸಹಾಯಕ ಕಾರ್ಮಿಕ ಆಯುಕ್ತೆ ಶ್ವೇತಾ ಶ್ರೀನಿವಾಸ ಹಾಗೂ ಡಿಐಸಿ ಬೀಮಪ್ಪ ಉಪಸ್ಥಿತರಿದ್ದರು.