ಸಾರಾಂಶ
ಗಂಗಾವತಿ: ತಾಲೂಕಿನ ಹೇರೂರು ಗ್ರಾಪಂ ವ್ಯಾಪ್ತಿಯ ಕೂಲಿಕಾರರು ಕೆಲಸ ನಿರ್ವಹಿಸುವ ಕಲಕೇರಿ ಕೆರೆ ಹೂಳೆತ್ತುವ ಸ್ಥಳದಲ್ಲಿ ಶುಕ್ರವಾರ ನರೇಗಾ ದಿನವನ್ನು ಕೂಲಿಕಾರರಿಂದ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.ಕೂಲಿಕಾರರಿಗೆ ಆರೋಗ್ಯ ಶಿಬಿರ, ವಿಮೆ ಸೌಲಭ್ಯಗಳ ಮಾಹಿತಿ ಹಾಗೂ ಇವಿಎಂ, ವಿವಿಪ್ಯಾಟ್ ಪ್ರಾತ್ಯಕ್ಷಿಕೆ, ಮತದಾನ ಜಾಗೃತಿ ಕಾರ್ಯಕ್ರಮ ಮಾಡುವ ಮೂಲಕ ನರೇಗಾ ದಿವಸ್ ಅರ್ಥಪೂರ್ಣವಾಗಿ ಆಚರಿಸಲಾಯಿತು.ತಾಪಂ ಸಹಾಯಕ ನಿರ್ದೇಶಕರಾದ (ಗ್ರಾ.ಉ) ಸಂತೋಷ ಕುಮಾರ್ ಹತ್ತರಕಿ ಮಾತನಾಡಿ, ಗ್ರಾಮೀಣ ಭಾಗದ ಬಡವರು ಇದ್ದೂರಲ್ಲೇ ನೆಮ್ಮದಿ ಜೀವನ ನಡೆಸಲು ನರೇಗಾ ಯೋಜನೆ ಸಹಕಾರಿಯಾಗಿದೆ. ಜೊತೆಗೆ ಹಳ್ಳಿಗಳಲ್ಲಿ ಆಸ್ತಿಗಳ ಸೃಜನೆ ಆಗುತ್ತಿವೆ. ನರೇಗಾ ಸೌಲಭ್ಯಗಳನ್ನು ಎಲ್ಲರೂ ಪಡೆದುಕೊಳ್ಳಬೇಕು. ಸಾಮೂಹಿಕ ಕಾಮಗಾರಿಗಳ ಜೊತೆ ವೈಯಕ್ತಿಕ ಕಾಮಗಾರಿಗಳನ್ನು ಪಡೆದುಕೊಳ್ಳಲು ಅವಕಾಶವಿದೆ ಎಂದರು.ನರೇಗಾ ಕಾಮಗಾರಿ ಸ್ಥಳದಲ್ಲಿ ಆಯೋಜಿಸುವ ಆರೋಗ್ಯ ಶಿಬಿರದ ಸೌಲಭ್ಯ ಪಡೆದುಕೊಳ್ಳಬೇಕು. ಕೂಲಿಕಾರ್ಮಿಕರು ಆರೋಗ್ಯದ ಬಗ್ಗೆಯೂ ಹೆಚ್ಚು ಕಾಳಜಿ ವಹಿಸಬೇಕು. ಕಾಲಕಾಲಕ್ಕೆ ಆರೋಗ್ಯ ತಪಾಸಿಸಿಕೊಳ್ಳಬೇಕು ಎಂದರು.ಇದೇ ಸಂದರ್ಭದಲ್ಲಿ ಇವಿಎಂ, ವಿವಿಪ್ಯಾಟ್ ಪ್ರಾತ್ಯಕ್ಷಿಕೆ ಹಾಗೂ ಮತದಾನದ ಮಹತ್ವ ತಿಳಿಸಿದರು.ನಿವೃತ್ತ ಬ್ಯಾಂಕ್ ವ್ಯವಸ್ಥಾಪಕರಾದ ಆಂಜನೇಯ, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆ, ಪ್ರಧಾನ ಮಂತ್ರಿ ಜೀವನ ಸುರಕ್ಷಾ ವಿಮಾ ಯೋಜನೆ ಕುರಿತು ಕೂಲಿಕಾರರಿಗೆ ಮಾಹಿತಿ ನೀಡಿದರು.ಕೂಲಿಕಾರರಿಗೆ ಸಹಾಯಕ ನಿರ್ದೇಶಕರು, ಗ್ರಾಪಂ ಅಧ್ಯಕ್ಷರು, ಗ್ರಾಪಂ ಪಿಡಿಓ ಅವರು ಕೇಕ್ ತಿನ್ನಿಸುವ ಮೂಲಕ ನರೇಗಾ ದಿವಸ್ ಆಚರಣೆ ಶುಭಾಶಯ ಕೋರಿದರು.ಗ್ರಾಪಂ ಅಧ್ಯಕ್ಷೆ ಮೇಘರಾಣಿ ಬಿ.ಮರಕುಂಬಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಪಿಡಿಒ ರವಿಶಾಸ್ತ್ರಿ, ಗ್ರಾಪಂ ಉಪಾಧ್ಯಕ್ಷ ನಾಗಪ್ಪ, ಸದಸ್ಯರಾದ ಸಿದ್ದರಾಮ ಪಿ.ಪಿ., ಫಕ್ರುದ್ದೀನ್, ನಿಂಗಪ್ಪ, ಸತ್ಯನಾರಾಯಣ, ಐಇಸಿ ಸಂಯೋಜಕ ಬಾಳಪ್ಪ ತಾಳಕೇರಿ, ತಾಂತ್ರಿಕ ಸಹಾಯಕ ಅಮರನಾಥ, ತಾಪಂ ಸಿಬ್ಬಂದಿ ಸಂತೋಷ ಎಂ., ಕೆಎಚ್ ಪಿಟಿ ತಾಲೂಕು ಸಂಯೋಜಕ ಶರಣಬಸವ, ಸಮುದಾಯ ಆರೋಗ್ಯ ಅಧಿಕಾರಿ ಎನ್ .ಕೋಕಿಲ, ಆಶಾಕಾರ್ಯಕರ್ತೆಯರು, ಸಿಬ್ಬಂದಿ ಇದ್ದರು.