ವಿಶ್ವದಲ್ಲೇ ಅತಿದೊಡ್ಡ ಉದ್ಯೋಗ ಯೋಜನೆ ನರೇಗಾ

| Published : Feb 04 2024, 01:31 AM IST

ಸಾರಾಂಶ

ನೂರು ದಿನಗಳವರೆಗೆ ಕೂಲಿ ಒದಗಿಸುವ ಮೂಲಕ ಗ್ರಾಮೀಣ ಭಾಗದ ಜನರ ಜೀವನಕ್ಕೆ ಆರ್ಥಿಕ ಭದ್ರತೆ ಒದಗಿಸುವುದು ಹಾಗೂ ಗ್ರಾಮಗಳ ಅಭಿವೃದ್ಧಿಗೆ ಅನುಕೂಲವಾಗುವಂತಹ ಆಸ್ತಿ ಸೃಜನೆ ಮಾಡುವುದು ಯೋಜನೆಯ ಉದ್ದೇಶವಾಗಿದೆ. ಫೆ.2 ರಂದು ನರೇಗಾ ಯೋಜನೆ ಅನುಷ್ಟಾನಗೊಂಡ ದಿನವನ್ನು ನರೇಗಾ ದಿನವಾಗಿ ಆಚರಿಸಲಾಗುತ್ತಿದೆ

ಕನ್ನಡಪ್ರಭ ವಾರ್ತೆ ಬೆಳಗಾವಿ

ಮನರೇಗಾ ವಿಶ್ವದಲ್ಲೇ ಅತಿದೊಡ್ಡ ಉದ್ಯೋಗ ಯೋಜನೆಯಾಗಿದೆ. ಈ ಯೋಜನೆಯಿಂದ ತಾಲೂಕಿನಲ್ಲಿಯೂ ಸಾವಿರಾರು ಕುಟುಂಬಗಳು ಆರ್ಥಿಕವಾಗಿ ಸದೃಢವಾಗಲು ಸಾಧ್ಯವಾಗಿದೆ ಎಂದು ಖಾನಾಪೂರ ತಾಲೂಕ ಪಂಚಾಯತ ನರೇಗಾ ಸಹಾಯಕ ನಿರ್ದೇಶಕಿ ರೂಪಾಲಿ ಬಡಕುಂದ್ರಿ ಹೇಳಿದರು.

ತಾಲೂಕಿನ ಹಲಸಿ ಗ್ರಾಮದ ನರೇಗಾ ಕಾಮಗಾರಿ ಸ್ಥಳದಲ್ಲಿ ಜಿಲ್ಲಾ ಪಂಚಾಯತ ಬೆಳಗಾವಿ, ತಾಲೂಕು ಪಂಚಾಯತ ಖಾನಾಪೂರ ಹಾಗೂ ಗ್ರಾಮ ಪಂಚಾಯತ ಹಲಶಿ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ನರೇಗಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ನೂರು ದಿನಗಳವರೆಗೆ ಕೂಲಿ ಒದಗಿಸುವ ಮೂಲಕ ಗ್ರಾಮೀಣ ಭಾಗದ ಜನರ ಜೀವನಕ್ಕೆ ಆರ್ಥಿಕ ಭದ್ರತೆ ಒದಗಿಸುವುದು ಹಾಗೂ ಗ್ರಾಮಗಳ ಅಭಿವೃದ್ಧಿಗೆ ಅನುಕೂಲವಾಗುವಂತಹ ಆಸ್ತಿ ಸೃಜನೆ ಮಾಡುವುದು ಯೋಜನೆಯ ಉದ್ದೇಶವಾಗಿದೆ. ಫೆ.2 ರಂದು ನರೇಗಾ ಯೋಜನೆ ಅನುಷ್ಟಾನಗೊಂಡ ದಿನವನ್ನು ನರೇಗಾ ದಿನವಾಗಿ ಆಚರಿಸಲಾಗುತ್ತಿದೆ ಎಂದರು.

ತಾಲೂಕಿನಲ್ಲಿ ನರೇಗಾ ಯೋಜನೆಯಡಿ ಅರಣ್ಯೀಕರಣ, ಹಸಿರೀಕರಣ, ಜಲ ಸಂರಕ್ಷಣೆ, ಅಂತರ್ಜಲಮಟ್ಟ ವೃದ್ಧಿ, ಸಿಸಿ ರಸ್ತೆ, ಚರಂಡಿ, ಹೊಲಗದ್ದೆಗಳಿಗೆ ರಸ್ತೆ, ಗ್ರಾಪಂ ಕಟ್ಟಡ, ಶಾಲಾ ಅಭಿವೃದ್ಧಿ ಕಾಮಗಾರಿಗಳು, ವೈಯಕ್ತಿಕ ಕಾಮಗಾರಿಗಳು ಸೇರಿದಂತೆ ಅನೇಕ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಇದರಿಂದ ಜನರಿಗೆ ಸಾಕಷ್ಟು ಅನುಕೂಲವಾಗಿದೆ ಎಂದು ತಿಳಿಸಿದರು.

ಕೂಲಿಕಾರರೊಂದಿಗೆ ಕೇಕ್ ಕತ್ತರಿಸಿ, ವಿತರಿಸುವ ಮೂಲಕ ನರೇಗಾ ದಿನ ಆಚರಿಸಲಾಯಿತು. ಕಾಯಕ ಬಂಧುಗಳು ಹಾಗೂ ಯೋಜನೆಯಡಿ ಕೂಲಿಕಾರರಾಗಿ ದುಡಿಯುತ್ತಿರುವ ಹಿರಿಯ ನಾಗರಿಕರನ್ನು ಸತ್ಕರಿಸಲಾಯಿತು. ದಿನಾಚರಣೆ ಅಂಗವಾಗಿ ಕೂಲಿಕಾರರಿಗೆ ಏರ್ಪಡಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದ ಕೂಲಿಕಾರರಿಗೆ ಬಹುಮಾನ ವಿತರಿಸಲಾಯಿತು. 2022-23ನೇ ಸಾಲಿನಲ್ಲಿ ನೂರು ಮಾನವ ದಿನಗಳನ್ನು ಪೂರೈಸಿದ್ದ ಕೂಲಿಕಾರರಿಗೆ ಶರ್ಟ್, ಕ್ಯಾಪ್ ಗಳನ್ನು ನೀಡಲಾಯಿತು.

ಗ್ರಾಪಂ ಅಭಿವೃದ್ಧಿ ಅಧಿಕಾರಿ ಅಧ್ಯಕ್ಷರು, ಸದಸ್ಯರು, ತಾಂತ್ರಿಕ ಸಂಯೋಜಕರು, ಐಇಸಿ ಸಂಯೋಜಕರು, ತಾಂತ್ರಿಕ ಸಹಾಯಕರು, ಗಣಕಯಂತ್ರ ನಿರ್ವಾಹಕರು, ಬಿ.ಎಫ್.ಟಿ, ಗ್ರಾಮ ಕಾಯಕ ಮಿತ್ರ, ಗ್ರಾಪಂ ಸಿಬ್ಬಂದಿ, ಕಾಯಕ ಬಂಧುಗಳು ಹಾಗೂ 200 ಕ್ಕೂ ಹೆಚ್ಚು ಕೂಲಿಕಾರರು ಹಾಜರಿದ್ದರು‌‌.

ಈ ವೇಳೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ನೇತ್ರಾವತಿ ಎಂ.ಡಿ., ಅಧ್ಯಕ್ಷ ಪಾಂಡುರಂಗ ಬಾವಕರ, ಸದಸ್ಯ ಆಸಿಫ್ ಮುಲ್ಲಾ, ತಾಂತ್ರಿಕ ಸಂಯೋಜಕ ಮುರುಗೇಶ ಯಕ್ಕಂಚಿ, ಐಇಸಿ ಸಂಯೋಜಕ ಮಹಾಂತೇಶ ಜಾಂಗಟಿ, ತಾಂತ್ರಿಕ ಸಹಾಯಕ ನಾಗರಾಜ ಬಾಲನಾಯಕ, ಡಿಇಒ ಬಸವರಾಜ ವೈಜನಾಥಮಠ, ಬಿಎಫ್‌ಟಿ ಸಂತೋಷ ಸಾತನ್ನವರ, ಗ್ರಾಮ ಕಾಯಕ ಮಿತ್ರ ಭಾರತಾ ಮಾದಾರ ಸೇರಿದಂತೆ ಸಿಬ್ಬಂದಿ, ಕಾಯಕ ಬಂಧುಗಳು ಹಾಗೂ 200 ಕ್ಕೂ ಹೆಚ್ಚು ಕೂಲಿಕಾರರು ಭಾಗವಹಿಸಿದ್ದರು.